ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರ: ಗೃಹಸಚಿವ ಪರಮೇಶ್ವರ

Published : Jan 09, 2026, 01:03 PM IST
Dr G Parameshwara

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ. ಇದೇ ವೇಳೆ, ಸಂತ್ರಸ್ತರನ್ನು ಭೇಟಿಯಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಮರ್ಥಿಸಿಕೊಂಡರು.

ಬೆಂಗಳೂರು (ಜ.09): ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿಗಳ ಅನುಮತಿ ಪಡೆದು ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.

ಸಿಐಡಿ ತನಿಖೆಯ ಉದ್ದೇಶ:

ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಘಟನೆಯ ಸತ್ಯಾಸತ್ಯತೆಯನ್ನು ಸಿಐಡಿಯವರು ತನಿಖೆ ಮಾಡಿ ಸರ್ಕಾರಕ್ಕೆ ವರದಿ ಕೊಡಬೇಕು. ಆನಂತರ ಸರ್ಕಾರ, ಯಾರು ತಪ್ಪಿತಸ್ಥರು, ಘಟನೆಯಲ್ಲಿ ಯಾರ ನಿರ್ಲಕ್ಷ್ಯ ಇದೆ ಎಲ್ಲವನ್ನು ಪರಿಗಣಿಸಿ ಮುಂದಿನ ತೀರ್ಮಾನ ಮಾಡಲಿದೆ ಎಂದು ಹೇಳಿದರು. ಮಹಿಳೆ ವಿವಸ್ತ್ರ ಆಗುವುದಕ್ಕೆ ಪೊಲೀಸರು ಬಿಟ್ಟಿಲ್ಲ. ಪೊಲೀಸರು ಕೂಡಲೇ ಕ್ರಮ ವಹಿಸಿದ್ದಾರೆ. ಪೊಲೀಸರು ವಿವಸ್ತ್ರಗೊಳಿಸಿಲ್ಲ, ಆಕೆಯೇ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇನ್ನೂ ಕೂಡ ವಿವರವಾಗಿ ತನಿಖೆ ಮಾಡಬೇಕು ಎಂದು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಬೇಕಾದರೆ ತನಿಖೆಯಾಗಬೇಕು ಎಂದರು.

ಡಿಕೆಶಿ ಭೇಟಿಗೆ ಸಮರ್ಥನೆ

ಡಿ.ಕೆ.ಶಿವಕುಮಾರ್ ಜವಾಬ್ದಾರಿಯುತ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳು. ಕುಮಾರಸ್ವಾಮಿ ಹೇಳುವ ಪ್ರಕಾರ ಹೆಚ್ಚಿನ ಅಧಿಕಾರ ಇಲ್ಲ ಎಂಬುದು ಸಂವಿಧಾನಾತ್ಮಕವಾಗಿ ಸರಿ ಇರಬಹುದು. ಆದರೆ, ಸರ್ಕಾರದ ಪ್ರತಿನಿಧಿಯಾಗಿ ಡಿ.ಕೆ.ಶಿವಕುಮಾರ್ ಅಲ್ಲಿಗೆ ಹೋಗಿರುವುದನ್ನು ತಪ್ಪು ಎಂದು ಹೇಳುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಡೆಪ್ಯೂಟಿ ಚೀಫ್ ಮಿನಿಸ್ಟರ್ ಎಂದು ಪ್ರಮಾಣ ವಚನ ಕೊಟ್ಟಿದ್ದಾರೆ. ನಾನು ಹೋಗುವುದಕ್ಕೆ ಆಗಿಲ್ಲ. ಆ ಜವಾಬ್ದಾರಿಯಿಂದ ಅವರು ಹೋಗಿದ್ದಾರೆ. ನಾನು ಇಲಾಖೆಯ ಸಚಿವ. ಘಟನೆ ನಡೆದ ಕೂಡಲೇ ನಾನು ಹೋಗಿದ್ದರೆ, ಪೊಲೀಸರಿಗೆ ಏನೇನೋ ಸೂಚನೆಗಳನ್ನು ಕೊಟ್ಟಿದ್ದಾರೆ. ಅವರ ಪರವಾಗಿ ಸೂಚನೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತವೆ. ನಾವು ಭೇಟಿ ನೀಡುವಾಗ ಯೋಚನೆ ಮಾಡಿ, ತನಿಖೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣದಿಂದ ವಿಳಂಬ ಮಾಡುತ್ತೇವೆ. ಅದೇ ಕಾರಣದಿಂದ ಇದುವರೆಗೂ ಬಳ್ಳಾರಿಗೆ ಹೋಗಿಲ್ಲ ಎಂದರು.

ಉಪಮುಖ್ಯಮಂತ್ರಿಯಾಗಿ, ಸಚಿವರಾಗಿ, ಸರ್ಕಾರದ ಪ್ರತಿನಿಧಿಯಾಗಿ ಡಿ.ಕೆ.ಶಿವಕುಮಾರ್ ಅವರು ಹೋಗಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಮೃತ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವಾನ ಹೇಳಿದ್ದಾರೆ. ಇದು ತಪ್ಪು ಎನ್ನುವುದಾದರೆ ಏನು ಹೇಳಬೇಕು. ಸರ್ಕಾರದ ಪ್ರತಿನಿಧಿಯಾಗಿ ಭೇಟಿ ನೀಡಲು ಯಾರ ಅನುಮತಿ ಬೇಕು ಎಂದು ಪ್ರಶ್ನಿಸಿದರು. ನಿಜವಾದ ಹಸ್ತಾಕ್ಷೇಪ ಮಾಡಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟು, ಅದರ ತೀರ್ಮಾನದ ಮೇಲೆ ಬೇರೆ ರೀತಿಯ ಪರಿಣಾಮಗಳಾಗಿದ್ದರೆ ಕುಮಾರಸ್ವಾಮಿಯವರ ಹೇಳಿಕೆಯನ್ನು ಒಪ್ಪೋಣ. ಆದರೆ, ಜವಾಬ್ದಾರಿಯುತ ಸರ್ಕಾರದ ಪ್ರತಿನಿಧಿ ಭೇಟಿ ನೀಡಿರುವುದನ್ನು ಬೇರೆ ರೀತಿಯಾಗಿ ಅರ್ಥೈಸಿಕೊಂಡಿದ್ದಾರೆ ಎಂದರು.

ಇದುವರೆಗೂ ನಮ್ಮ ತೀರ್ಮಾನಗಳಲ್ಲಿ ಯಾರು ಕೂಡ ಇಲ್ಲಿವರೆಗೆ ಹಸ್ತಕ್ಷೇಪ ಮಾಡಿಲ್ಲ. ಮುಖ್ಯಮಂತ್ರಿಗಳು ಮತ್ತು ನಾನು ಒಟ್ಟಾಗಿ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಹುಬ್ಬಳ್ಳಿ ಪ್ರಕರಣವನ್ನು ಸಿಐಡಿಗೆ ವಹಿಸುತ್ತೇನೆ ಎಂದು ನಾನು ನೇರವಾಗಿ ಹೇಳಬಹುದಿತ್ತು. ಆದರೆ, ಸಿಎಂ ಗಮನಕ್ಕೆ ತರದೇ ಇಂತಹ ತೀರ್ಮಾನಗಳನ್ನು ಮಾಡಲಾಗುತ್ತದೆಯೇ? ಬಳ್ಳಾರಿ ವಲಯ ಐಜಿಪಿ ವರ್ಗಾವಣೆ ಮಾಡುವ ವಿಚಾರ ನನಗೆ ಗೊತ್ತಿಲ್ಲ ಎಂದು ನಾನು ಹೇಳಿಲ್ಲ. ನನಗೆ ಗೊತ್ತಿದೆ, ವರ್ಗಾವಣೆಯನ್ನು ಡಿಪಿಎಆರ್‌ನವರು ಮಾಡುತ್ತಾರೆ. ಆ ಅರ್ಥದಲ್ಲಿ ಹೇಳಿದ್ದೇನೆ. ಕಡತಕ್ಕೆ ಸಹಿ ಹಾಕಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವವರು ಮುಖ್ಯಮಂತ್ರಿಗಳು ಎಂದು ಸ್ಪಷ್ಟಪಡಿಸಿದರು.

ನರೇಗಾ ವಿಚಾರದಲ್ಲಿ ಬಿಜೆಪಿ ವಿರುದ್ಧ ಕಿಡಿ

ಇಡೀ ರಾಜ್ಯದಾದ್ಯಂರ ಪ್ರತಿಭಟನೆ ಮಾಡಿ, ನರೇಗಾ ಯೋಜನೆಯ ಫಲಾನುಭವಿಗಳಿಗೆ ತೊಂದರೆ ಅಗುವುದನ್ನು ತಿಳಿಸುತ್ತೇವೆ. ಹೆಸರು ಬದಲಾವಣೆ ಮಾಡಿರುವುದು ಮಹಾತ್ಮ ಗಾಂಧೀಜಿಯವರಿಗೆ‌ ಮಾಡಿರುವ ಅಪಮಾನ ಒಂದು ಭಾಗವಾದರೆ, ಪ್ರತಿ ಹಳ್ಳಿಗಳಲ್ಲಿ ಉದ್ಯೋಗ ನೀಡಲಾಗುವುದಿಲ್ಲ. ಹಣದ ತೀರ್ಮಾನ ದೆಹಲಿಯಲ್ಲಿ ಅಗಬೇಕು ಎಂಬ ವಿಚಾರವನ್ನು ಜನರ ಮುಂದೆ ಇಡುತ್ತೇವೆ. ರಾಜೀವ್ ಗಾಂಧಿ ಅವರು ನಮ್ಮೂರಿನ ರಸ್ತೆ, ಚರಂಡಿ ಮಾಡಲು ಏರ್ ಕಂಡೀಷನ್ ರೂಮ್‌ನಲ್ಲಿ ಕುಳಿತು ತೀರ್ಮಾನ ಆಗುವುದು ಮಾಡುವುದು ಬೇಡ. ನೀವೇ ಮಾಡಿಕೊಳ್ಳಿ ಎಂಬ ನಿಟ್ಟಿನಲ್ಲಿ 1973 ತಿದ್ದುಪಡಿ ಮೂಲಕ ಅಧಿಕಾರ ವಿಕೇಂದ್ರಿಕರಣ ಮಾಡಿ ಪಂಚಾಯಿತಿಗಳಿಗೆ ಅಧಿಕಾರಿ ನೀಡಿದರು. ಅದನ್ನು ಬದಲಾಯಿಸುವುದಾದರೆ, ಅಧಿಕಾರ ವಿಕೇಂದ್ರಿಕರಣದ ಬಗ್ಗೆ ಯಾಕೆ ಮಾತನಾಡಬೇಕು. ಬಿಜೆಪಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ನರೇಗಾ ಯೋಜನೆಯ ಬಗ್ಗೆ ವಿರೋಧ ಪಕ್ಷದ ನಾಯಕರ ಅಭಿಪ್ರಾಯಗಳು ಹೊರಬರಲಿ. ವಿಶೇಷ ಅಧಿವೇಶನದಲ್ಲಿ ಬಿಜೆಪಿಯವರು ಸಮರ್ಥಿಸಿಕೊಳ್ಳಲಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಚಿವ ಸ್ಥಾನದ ಕನಸಲ್ಲಿದ್ದ ನಾಗೇಂದ್ರಗೆ ಸಿಬಿಐ ಶಾಕ್: ವಾಲ್ಮೀಕಿ ಹಗರಣದಲ್ಲಿ ವಿಚಾರಣೆಗೆ ನೋಟಿಸ್; ಮತ್ತೆ ಜೈಲು ಭೀತಿ!
ಹುಬ್ಬಳ್ಳಿ ಸುಜಾತಾ ಹಂಡಿ ಹೆಣ್ಣಲ್ಲ, ಹೆಮ್ಮಾರಿ: ಹನಿಟ್ರ್ಯಾಪ್ ವ್ಯಕ್ತಿ ಕಾಲಿಗೆ ಬಿದ್ದರೂ ಬಿಡದೇ ಥಳಿಸಿದ ರಾಕ್ಷಸಿ!