
ಬೆಂಗಳೂರು (ಜ.09): ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ (CBI), ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ನಾಗೇಂದ್ರ ಅವರಿಗೆ ಈಗ ಬಂಧನದ ಭೀತಿ ಎದುರಾಗಿದೆ.
ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲು ವಾಸ ಅನುಭವಿಸಿದ್ದ ಬಿ. ನಾಗೇಂದ್ರ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದರು. ಮುಂಬರುವ ಸಚಿವ ಸಂಪುಟ ಪುನಾರಚನೆ ವೇಳೆ ತಾವು ಕಳೆದುಕೊಂಡಿದ್ದ ಸಚಿವ ಸ್ಥಾನವನ್ನು ಮರಳಿ ಪಡೆಯಲು ನಾಗೇಂದ್ರ ಅವರು ಭಾರಿ ಕಸರತ್ತು ನಡೆಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಗುರುವಾರ ಸಂಜೆ ಸಿಬಿಐ ಅಧಿಕಾರಿಗಳು ನೀಡಿರುವ ನೋಟಿಸ್ ನಾಗೇಂದ್ರ ಅವರ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.
ಸಿಬಿಐ ಈಗ ನಾಗೇಂದ್ರ ಅವರ ವಿಚಾರಣೆಗೆ ಮುಂದಾಗಿರುವುದು ಹಗರಣದ ಆಳ-ಅಗಲವನ್ನು ಮತ್ತಷ್ಟು ಕೆದಕುವ ಮುನ್ಸೂಚನೆ ನೀಡಿದೆ. ವಿಚಾರಣೆಯ ವೇಳೆ ಪೂರಕ ಸಾಕ್ಷ್ಯಾಧಾರಗಳು ಲಭ್ಯವಾದರೆ ನಾಗೇಂದ್ರ ಅವರನ್ನು ಮತ್ತೊಮ್ಮೆ ಬಂಧಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಂದು ವೇಳೆ ನಾಗೇಂದ್ರ ಅವರು ಮತ್ತೊಮ್ಮೆ ಜೈಲು ಪಾಲಾದರೆ, ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಒಂದೆಡೆ ಸಚಿವ ಸ್ಥಾನದ ಹಂಬಲ, ಇನ್ನೊಂದೆಡೆ ಸಿಬಿಐ ತನಿಖೆಯ ಉರುಳು – ಬಿ. ನಾಗೇಂದ್ರ ಅವರಿಗೆ ಸದ್ಯ 'ಜೈಲಾ ಅಥವಾ ಸಚಿವ ಸ್ಥಾನವಾ?' ಎಂಬ ಸಂಕಷ್ಟದ ಸ್ಥಿತಿ ಎದುರಾಗಿದೆ. ಹಗರಣದ ಹಣದ ವರ್ಗಾವಣೆ ಹಾಗೂ ಅಕ್ರಮದ ಕುರಿತು ಸಿಬಿಐ ಕೇಳಲಿರುವ ಪ್ರಶ್ನೆಗಳಿಗೆ ನಾಗೇಂದ್ರ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ