ಹಾಸಿಗೆಗಾಗಿ ನಟ ದರ್ಶನ್‌ ಸಲ್ಲಿಸಿದ್ದ ಅರ್ಜಿ ಇಂದು ಸಿವಿಲ್‌ ಕೋರ್ಟ್‌ನಲ್ಲಿ ವಿಚಾರಣೆ

Published : Sep 20, 2025, 08:50 AM IST
Darshan

ಸಾರಾಂಶ

ನಟ ದರ್ಶನ್‌ ಅವರು ಹಾಸಿಗೆ, ತಲೆದಿಂಬು ಮತ್ತು ಹೊದಿಕೆ ಸೇರಿ ಇತರೆ ಅಗತ್ಯ ವಸ್ತುಗಳನ್ನು ಕಲ್ಪಿಸಲು ಜೈಲಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿರುವ ಅರ್ಜಿ ವಿಚಾರಣೆಯನ್ನು ನಗರದ 64ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರಕ್ಕೆ ಮುಂದೂಡಿತು.

ಬೆಂಗಳೂರು (ಸೆ.20): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ ಅವರು ಹಾಸಿಗೆ, ತಲೆದಿಂಬು ಮತ್ತು ಹೊದಿಕೆ ಸೇರಿ ಇತರೆ ಅಗತ್ಯ ವಸ್ತುಗಳನ್ನು ಕಲ್ಪಿಸಲು ಜೈಲಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿರುವ ಅರ್ಜಿ ವಿಚಾರಣೆಯನ್ನು ನಗರದ 64ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರಕ್ಕೆ ಮುಂದೂಡಿತು. ಅಗತ್ಯ ವಸ್ತುಗಳನ್ನು ಕಲ್ಪಿಸಲು ಜೈಲಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್‌ ಮತ್ತು ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧದ ಆರೋಪಗಳನ್ನು ಕೈ ಬಿಡುವಂತೆ ಕೋರಿ 13ನೇ ಆರೋಪಿ ದೀಪಕ್ ಹಾಗೂ 14ನೇ ಆರೋಪಿ ಪ್ರದೂಷ್ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳು ಶುಕ್ರವಾರ ನ್ಯಾಯಾಧೀಶ ಐ.ಪಿ. ನಾಯ್ಕ್‌ ಅವರ ಮುಂದೆ ವಿಚಾರಣೆಗೆ ಬಂದಿದ್ದವು. ಈ ವೇಳೆ ತನಿಖಾಧಿಕಾರಿಗಳ ಪರ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕಮಾರ್‌ ಅವರನ್ನು ಉದ್ದೇಶಿಸಿ ನ್ಯಾಯಾಧೀಶರು, ದರ್ಶನ್ ಮನವಿ ಕುರಿತು ಏನಾದರೂ ವಾದ ಮಂಡಿಸುತ್ತೀರಾ? ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಪ್ರಸನ್ನ ಕುಮಾರ್, ಈ ವಿಚಾರವಾಗಿ ಶನಿವಾರ ವಾದ ಮಂಡಿಸಲಾಗುವುದು ಎಂದು ತಿಳಿಸಿದರು. ಹಾಗಾಗಿ, ದರ್ಶನ್‌ ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಲಾಯಿತು.

ಇನ್ನು ದೀಪಕ್ ಹಾಗೂ ಪ್ರದೂಷ್ ಮನವಿ ಬಗ್ಗೆ ವಾದ ಮಂಡಿಸಿದ ಪ್ರಸನ್ನ ಕುಮಾರ್, ರೇಣುಕಾಸ್ವಾಮಿ ಮೇಲೆ ದೀಪಕ್ ಕೂಡ ಹಲ್ಲೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ. ದೀಪಕ್ ಬಟ್ಟೆಯಲ್ಲೂ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದ್ದವು. ಆತನ ಚಪ್ಪಲಿಗಳು ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದವು. ಇತರೆ ಆರೋಪಿಗಳ ಸಂಪರ್ಕದಲ್ಲಿ ದೀಪಕ್‌ ಇರುವುದು ಸಿಡಿಆರ್‌ನಿಂದ ದೃಢಪಟ್ಟಿದೆ. ಪವಿತ್ರಾಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳನ್ನು ಓದುತ್ತಾ, ಆತನ ಮೇಲೆ ಹಲ್ಲೆ ನಡೆಸಲು ಇತರೆ ಆರೋಪಿಗಳಿಗೆ ಪ್ರದೋಷ್‌ ಪ್ರಚೋದನೆ ನೀಡಿದ್ದಾನೆ. ಈ ಆರೋಪಿಯ ಪ್ಯಾಂಟ್-ಶರ್ಟ್‌ ಮೇಲೂ ರೇಣುಕಾಸ್ವಾಮಿಯ ರಕ್ತದ ಕಲೆಗಳು ಪತ್ತೆಯಾಗಿವೆ. ಪ್ರದೂಷ್ ಕೊಲೆಯಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ವಿವರಿಸಿದರು.

ದರ್ಶನ್‌, ಇತರರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರ್‌

ಬೆಳಗಿನ ಕಲಾಪದ ವೇಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ದರ್ಶನ್‌, ಪವಿತ್ರಾಗೌಡ ಸೇರಿ ಜೈಲಿನಲ್ಲಿರುವ ಪ್ರಕರಣದ 7 ಮಂದಿ ಆರೋಪಿಗಳು ನ್ಯಾಯಾಧೀಶರ ಮುಂದೆ ತಮ್ಮ ಹಾಜರಾತಿ ದಾಖಲಿಸಿದರು. ಈ ವಿಡಿಯೋ ಕಾನ್ಫರೆನ್ಸ್‌ನ ಮೈಕ್‌ ಅನ್ನು (ಆಡಿಯೋ) ಜೈಲು ಸಿಬ್ಬಂದಿ ಆಫ್‌ ಮಾಡಿದ್ದರು. ಕಳೆದ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದ ದರ್ಶನ್‌, ತಮ್ಮ ಕೈಗೆ ಫಂಗಸ್‌ ಆಗಿದೆ. ಕೈ ಮುಚ್ಚಲು ಬೆಚ್ಚಗಿನ ವಸ್ತುಗಳನ್ನು ಕೋರಿದರೂ ಜೈಲಧಿಕಾರಿಗಳು ಪೂರೈಸುತ್ತಿಲ್ಲ. ಇತರೆ ಆರೋಪಿಗಳೊಂದಿಗೆ ಸಮಾಲೋಚಿಸಲೂ ಅವಕಾಶ ಕೊಡುತ್ತಿಲ್ಲ.

ಕೊಠಡಿಯಿಂದ ಹೊರಗೆ ಬಿಡುತ್ತಿಲ್ಲ. ಜೈಲಿನಲ್ಲಿ ಬಹಳ ತೊಂದರೆ ಉಂಟಾಗಿದ್ದು, ತಮಗೆ ವಿಷ ನೀಡಲು ಜೈಲಧಿಕಾರಿಗಳಿಗೆ ನಿರ್ದೇಶಿಸುವಂತೆ ನ್ಯಾಯಾಧೀಶರನ್ನು ಕೋರಿದ್ದರು. ಆದರೆ, ಶುಕ್ರವಾರ ಮಾತ್ರ ದರ್ಶನ್‌, ನ್ಯಾಯಾಧೀಶರ ಮುಂದೆ ಏನೂ ಹೇಳದೆ ಮೌನವಾಗಿ ನಿಂತಿದ್ದರು. ನಂತರ ಜೈಲಿನಲ್ಲಿರುವ ಹಾಗೂ ಜಾಮೀನು ಮೇಲಿದ್ದು, ವಿಚಾರಣೆಗೆ ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನ್ಯಾಯಾಲಯ, ದೋಷಾರೋಪಣೆ ನಿಗದಿ ಕುರಿತ ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!
ಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು