
ಬೆಂಗಳೂರು : ಕೇಂದ್ರ ಸರ್ಕಾರ ಈಗಾಗಲೇ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ನಂದಿನಿ ಮೊಸರು, ತುಪ್ಪ, ಬೆಣ್ಣೆ, ಚೀಸ್ ಸೇರಿ ಹಲವು ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. ಸೋಮವಾರದಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.
ಕೇಂದ್ರ ಸರ್ಕಾರ ಸೆ.22ರಿಂದ ಅನ್ವಯವಾಗುವಂತೆ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ.12ರಿಂದ 5ಕ್ಕೆ ಇಳಿಕೆ ಮಾಡಿದೆ. ಇದರಿಂದ ನಂದಿನಿಯ ಕೆಲ ಉತ್ಪನ್ನಗಳ ದರ ಕಡಿಮೆಯಾಗಲಿದೆ. ಈ ಕುರಿತು ಶುಕ್ರವಾರ ಕೆಎಂಎಫ್ ಆಡಳಿತ ಮಂಡಳಿ ಮತ್ತು ಹಿರಿಯ ಅಧಿಕಾರಿಗಳು ಸಭೆ ಸೇರಿದ್ದು, ಕೇಂದ್ರದ ಸೂಚನೆಯಂತೆ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಶನಿವಾರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಪನ್ನೀರ್ ಮತ್ತು ಗುಡ್ ಲೈಫ್ ಹಾಲಿಗೆ ವಿಧಿಸುತ್ತಿದ್ದ ಜಿಎಸ್‌ಟಿ ಶೇ.5ರಷ್ಟಿತ್ತು. ಇದೀಗ ಈ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ತುಪ್ಪ, ಬೆಣ್ಣೆ, ಚೀಸ್, ಪನ್ನೀರ್ ಹಾಗೂ ಇತರೆ ಕುರಕಲು ತಿಂಡಿಗಳ ಜಿಎಸ್‌ಟಿ ದರವು ಶೇ.12 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ಈ ಉತ್ಪನ್ನಗಳ ಬೆಲೆಯೂ ಕಡಿಮೆಯಾಗಲಿದೆ.
ಕುಕ್ಕೀಸ್, ಚಾಕೋಲೆಟ್, ಐಸ್‌ಕ್ರೀಂ, ನೀರಿನ ಉತ್ಪನ್ನಗಳಿಗೆ ವಿಧಿಸುತ್ತಿದ್ದ ಜಿಎಸ್‌ಟಿ ಶೇ.18ರಷ್ಟಿತ್ತು. ಇದೀಗ ಈ ಉತ್ಪನ್ನಗಳ ಜಿಎಸ್‌ಟಿ ದರವನ್ನು ಶೇ.5ಕ್ಕೆ ಇಳಿಕೆಯಾಗಲಿದೆ. ಆದರೆ, ಕಾರ್ಬೋನೇಟೆಡ್ ಪಾನಿಯಗಳ ಮೇಲಿನ ಜಿಎಸ್‌ಟಿ ಹಾಲಿ ಶೇ.28ರಷ್ಟಿದ್ದು, ಶೇ.40ಕ್ಕೆ ಏರಿಕೆಯಾಗಲಿದೆ. ಪರಿಷ್ಕೃತ ದರ ಸೆ. 22ರಿಂದಲೇ ಜಾರಿಗೆ ಬರಲಿದೆ. ಜಿಎಸ್‌ಟಿ ಇಳಿಕೆಯಿಂದ ಮೊಸರಿನ ದರ ಲೀಟರ್‌ಗೆ 4 ರು.ವರೆಗೆ ಕಡಿಮೆಯಾಗುವ ನಿರೀಕ್ಷೆ ಇದೆ.
2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸಲಾಗಿತ್ತು. 2022ರಲ್ಲಿ ಜಿಎಸ್‌ಟಿಯನ್ನು ಶೇ.12ಕ್ಕೆ ಹೆಚ್ಚಿಸಲಾಗಿತ್ತು. ಈಗ ಕೇಂದ್ರ ಸರ್ಕಾರ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಹಾಲಿನ ಉತ್ಪನ್ನಗಳ ದರವೂ ಇಳಿಕೆಯಾಗಲಿದ್ದು ಗ್ರಾಹಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ