ಹೆಚ್ಚಿದ ಮೀಸಲಾತಿ ಕೂಗು: ಅ.9ಕ್ಕೆ ಬೆಂಗಳೂರಲ್ಲಿ ದಲಿತರ ಶಕ್ತಿ ಪ್ರದರ್ಶನ

By Kannadaprabha NewsFirst Published Aug 29, 2022, 2:30 AM IST
Highlights

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಕ್ಕಾಗಿ ಪ್ರತಿಭಟನೆ: ರಾಜ್ಯದ ಎಲ್ಲ ಜಿಲ್ಲೆಗಳಿಂದ 15 ಲಕ್ಷ ಜನರ ಸೇರಿಸಲು ತೀರ್ಮಾನ

ಬೆಂಗಳೂರು(ಆ.29):  ಪರಿಶಿಷ್ಟಜಾತಿ ಮತ್ತು ಪಂಗಡ ಸಮುದಾಯದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಅ.9ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲು ದಲಿತ ಸಂಘಟನೆಗಳು ನಿರ್ಧರಿಸಿವೆ. ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಭಾನುವಾರ ನಗರದಲ್ಲಿ ಕರೆದಿದ್ದ ಸಭೆಯಲ್ಲಿ ಸಮುದಾಯದ ಸ್ವಾಮೀಜಿಗಳು ಮತ್ತು ಮುಖಂಡರು ಈ ತೀರ್ಮಾನ ಕೈಗೊಂಡಿದ್ದಾರೆ.

ಪರಿಶಿಷ್ಟಜಾತಿಯವರಿಗೆ ರಾಜಕೀಯದಲ್ಲಿ ಮೀಸಲು ಹೆಚ್ಚಿಸುವ ಜೊತೆಗೆ ಬಜೆಟ್‌ನಲ್ಲಿ ಅನುದಾನದ ಪ್ರಮಾಣವನ್ನೂ ಏರಿಕೆ ಮಾಡಲಾಗಿದೆ. ಆದರೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿಲ್ಲ. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಿ, ಮಾತು ಉಳಿಸಿಕೊಳ್ಳಿ

ಅ.9ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಪ್ರತಿ ಹಳ್ಳಿಯಿಂದ ಕನಿಷ್ಠ 20 ಜನರಂತೆ ರಾಜ್ಯದ 30 ಜಿಲ್ಲೆಗಳಲ್ಲಿನ 27 ಸಾವಿರ ಗ್ರಾಮಗಳಿಂದ ಒಟ್ಟು 15 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವಂತೆ ನೋಡಿಕೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಪಿಟಿಸಿಎಲ್‌ ಕಾಯಿದೆ ತಿದ್ದುಪಡಿಗೆ ಆಗ್ರಹ:

ದಲಿತ ಮುಖಂಡ ಬಿ.ಗೋಪಾಲ್‌ ಮಾತನಾಡಿ, ಕರ್ನಾಟಕ ಪರಿಶಿಷ್ಟಜಾತಿಗಳ ಮತ್ತು ಪಂಗಡಗಳ ಕಾಯಿದೆ(ನಿರ್ದಿಷ್ಟಜಮೀನುಗಳ ಹಸ್ತಾಂತರ ನಿಷೇಧ) ಕುರಿತಂತೆ ಸುಪ್ರೀಂಕೋರ್ಚ್‌ ಆದೇಶದಿಂದ ಪರಿಶಿಷ್ಟರು ಜಮೀನುರಹಿತರಾಗಲಿದ್ದಾರೆ. ಈ ಸಂಬಂಧ ಕಾಯಿದೆಗೆ ತಿದ್ದುಪಡಿ ಮಾಡುವುದಾಗಿ ಸರ್ಕಾರ ಹೇಳಿದ್ದರೂ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಆದ್ದರಿಂದ ಮುಂಬರುವ ಅಧಿವೇಶನದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿರುವ ಶಾಸಕರು ಈ ಬಗ್ಗೆ ಚರ್ಚಿಸದಿದ್ದರೆ ಅವರನ್ನು ಚುನಾವಣೆಗಳಲ್ಲಿ ಸೋಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ, ಚಿತ್ರದುರ್ಗದ ಆದಿ ಜಾಂಬವ ಗುರುಪೀಠದ ಆದಿ ಜಾಂಬವಸ್ವಾಮಿ, ಛಲವಾದಿ ಮಹಾಸಭಾದ ಬಸವನಾಗಿದೇವಸ್ವಾಮಿ, ಮೇದಾರ ಗುರು ಪೀಠದ ಬಸವ ಇಮ್ಮಡಿ ಕೇತೇಶ್ವರ, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ದಲಿತ ಮುಖಂಡರಾದ ಮಾವಳ್ಳಿ ಶಂಕರ್‌, ಎಂ.ವೆಂಕಟಸ್ವಾಮಿ, ಮೋಹನ್‌ ರಾಜ್‌ ಮತ್ತಿತರರಿದ್ದರು.
 

click me!