ಕರ್ನಾಟಕದಲ್ಲಿ ಮುಂದುವರಿದ ಮಳೆ: ಇಬ್ಬರು ಸಾವು

By Kannadaprabha NewsFirst Published Aug 29, 2022, 12:30 AM IST
Highlights

ಕೆರೆ ಕೋಡಿ ಒಡೆದು ಸೇತುವೆಗಳು ಮುಳುಗಡೆ, ಹಬ್ಬಕ್ಕೂ ಮುನ್ನವೇ ಮಳೆ ನೀರಲ್ಲಿ ಮುಳುಗಿದ ಗಣಪ

ಬೆಂಗಳೂರು(ಆ.29):  ರಾಜ್ಯದಲ್ಲಿ ಸತತ ಎರಡನೇ ದಿನವೂ ಮಳೆಯಾರ್ಭಟ ಮುಂದುವರಿದಿದ್ದು, ಮಳೆ ಸಂಬಂಧಿ ಘಟನೆಗೆ ಇಬ್ಬರು ಬಲಿಯಾಗಿದ್ದಾರೆ. ಬಳ್ಳಾರಿ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹಲವೆಡೆ ಕೆರೆ ಕೋಡಿ ಒಡೆದು ಸೇತುವೆಗಳು ಮುಳುಗಡೆಯಾಗಿ, ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಶನಿವಾರ ರಾತ್ರಿ ಬಳ್ಳಾರಿ, ಕೊಪ್ಪಳ, ಧಾರವಾಡ, ಹಾವೇರಿ, ಮೈಸೂರು, ಚಾಮರಾಜನಗರ, ದಕ್ಷಿಣಕನ್ನಡ, ಉಡುಪಿ ಸೇರಿದಂತೆ 8 ಜಿಲ್ಲೆಗಳಲ್ಲಿ ಮಳೆಯಾಗಿದೆ. ಅದರಲ್ಲೂ ಬಳ್ಳಾರಿ, ಕೊಪ್ಪಳ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಕೊಪ್ಪಳದಲ್ಲಿ ಬಾಲಕ, ಮೈಸೂರಿನಲ್ಲಿ ವ್ಯಕ್ತಿ ಬಲಿಯಾಗಿದ್ದಾರೆ.

Ramanagara: ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ

ಮೈಸೂರು ತಾಲೂಕು ಮಾವಿನಹಳ್ಳಿಯ ಮಹೇಶ(41) ಗಾರೆ ಕೆಲಸ ಮುಗಿಸಿಕೊಂಡು ಶನಿವಾರ ರಾತ್ರಿ ಜಯಪುರದಿಂದ ಮಾವಿನಹಳ್ಳಿ ಕಡೆಗೆ ಹೋಗುವಾಗ, ಜಯಪುರದ ಹೊರ ವಲಯದಲ್ಲಿರುವ ಕೆರೆಯ ಕೋಡಿ ಒಡೆದು ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಈಳಿಗನೂರಲ್ಲಿ ಗ್ರಾಮದ ಮುಂದೆ ತುಂಬಿ ಹರಿಯುತ್ತಿರುವ ಹಳ್ಳ ನೋಡಲು ಹೋದ ಸಹೋದರರಿಬ್ಬರ ಪೈಕಿ ಆಯತಪ್ಪಿ ಅಣ್ಣ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ. ಗ್ರಾಮದ ನಂದಕುಮಾರ್‌ (13) ಮೃತಪಟ್ಟಬಾಲಕ. ತಮ್ಮ ಅಪಾಯದಿಂದ ಪಾರಾಗಿದ್ದಾನೆ.

ಹಬ್ಬಕ್ಕೂ ಮುನ್ನವೇ ನೀರಲ್ಲಿ ಮುಳುಗಿದ ಗಣಪ:

ಬಳ್ಳಾರಿ ನಗರದ ಅಲ್ಲೀಪುರದ ಸಮೀಪ ರಾಮೇಶ್ವರಿ ನಗರದಲ್ಲಿ ಟೆಂಟ್‌ವೊಂದಕ್ಕೆ ನೀರು ನುಗ್ಗಿ ನೂರಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಅರ್ಧ ಭಾಗ ಮುಳುಗಿದ್ದು, ಸುಮಾರು 30 ಲಕ್ಷಕ್ಕೂ ಹೆಚ್ಚು ನಷ್ಟಸಂಭವಿಸಿದೆ. ಗಣೇಶ ಹಬ್ಬದ ನಿಮಿತ್ತ ಕಳೆದ 6 ತಿಂಗಳ ಹಿಂದೆಯೇ ಆಗಮಿಸಿದ್ದ ಕೋಲ್ಕತ್ತಾ ಮೂಲದ ವಿಗ್ರಹ ತಯಾರಕರು ಇಲ್ಲಿನ ರಾಮೇಶ್ವರಿ ನಗರದಲ್ಲಿ ಅಂದಾಜು 300ಕ್ಕೂ ಹೆಚ್ಚು ವಿಗ್ರಹಗಳನ್ನು ತಯಾರಿಸಿದ್ದರು. ಇದೀಗ ಗಣೇಶ ವಿಗ್ರಹಗಳಿಗಾಗಿ ಮುಂಗಡ ಹಣ ನೀಡಿ ಬುಕ್‌ ಮಾಡಲಾದ ಸಂಘಟಕರಿಗೆ ಗಣೇಶ ಮೂರ್ತಿಗಳನ್ನು ನೀಡುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

ಮಳೆಯಿಂದ ಹಾನಿಯಾದ ಮನೆ, ಬೆಳೆಗೆ ಕೂಡಲೇ ಪರಿಹಾರ ವಿತರಿಸಿ: DCಗೆ ಸಿಎಂ ಖಡಕ್ ಸೂಚನೆ

ಊರಿಗೆ ನುಗ್ಗಿದ ಕೆರೆ ನೀರು:

ಚಾಮರಾಜನಗರ ತಾಲೂಕಿನ ನಲ್ಲೂರುಮೋಳೆಯಲ್ಲಿ ಕೆರೆಯ ನೀರು ಊರಿಗೆ ನುಗ್ಗಿದ್ದು, ಗ್ರಾಮ ಅಕ್ಷರಶಃ ಕೆರೆಯಾಗಿ ಮಾರ್ಪಟ್ಟಿದೆ. 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಅಮ್ಮನಪುರ ಕೆರೆ ಬರೋಬ್ಬರಿ 30 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದಿದ್ದು ರಸ್ತೆ ಮೇಲೆ ನೀರು ಹರಿಯುತ್ತಿದೆ. ಚಾಮರಾಜನಗರ ಸಮೀಪದ ಮಾಲಗೆರೆಯೂ ಹಲವು ವರ್ಷಗಳ ಬಳಿಕ ಕೋಡಿ ಬಿದ್ದಿದೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ ಚಾನಳ್‌ ಸೇತುವೆ ಜಲಾವೃತಗೊಂಡಿದ್ದು, ಹಂದ್ಯಾಳ್‌ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಸಿದ್ದಮ್ಮನಹಳ್ಳಿ ಸೇತುವೆ ಮುಳುಗಡೆಯಾಗಿದ್ದರಿಂದ ಕುಡುತಿನಿ, ಬಳ್ಳಾರಿ, ಸಂಡೂರು, ತೋರಣಗಲ್ಲು ಸೇರಿದಂತೆ ವಿವಿಧ ತಾಲೂಕು ಮತ್ತು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕೊಪ್ಪಳ, ಧಾರವಾಡ ಜಿಲ್ಲೆಯಲ್ಲೂ ಧಾರಾಕಾರ ಮಲೆಯಾಗಿದ್ದರೆ, ಹಾವೇರಿ, ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.
 

click me!