Latest Videos

ರಾಜ್ಯದಲ್ಲಿ ಪ್ರತಿದಿನ ಕುಡಿಯುವ ನೀರಿನ ಪರೀಕ್ಷೆ ಕಡ್ಡಾಯ: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published May 24, 2024, 4:27 AM IST
Highlights


ಮೈಸೂರಿನ ಎರಡು ಗ್ರಾಮಗಳಲ್ಲಿ ಕಾಲರಾ ಕಂಡುಬಂದಿದೆ. ಇದಕ್ಕೆ ಕಲುಷಿತ ನೀರು ಪೂರೈಕೆಯೇ ಪ್ರಮುಖ ಕಾರಣ. ಮಳೆಯಿಂದಾಗಿ ಕಲುಷಿತ ನೀರು ಕುಡಿಯುವ ನೀರಿನೊಂದಿಗೆ ಸೇರಿದ್ದು, ಇದಕ್ಕೆ ಎಂಜಿನಿಯರ್‌ಗಳೇ ಕಾರಣ. ಪೂರೈಕೆಯಾಗಿರುವ ನೀರು ಕುಡಿಯಲು ಯೋಗ್ಯವೇ ಅಲ್ಲವೇ ಎಂಬುದನ್ನು ಪತ್ತೆ ಮಾಡದಿರುವುದು ದೊಡ್ಡ ಅಪರಾಧ ಎಂದು ಕಿಡಿ ಕಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು(ಮೇ.24):  ‘ಕಲುಷಿತ ಕುಡಿಯುವ ನೀರಿನಿಂದ ಕಾಲರಾದಂತಹ ಗಂಭೀರ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ರಾಜ್ಯಾದ್ಯಂತ ಎಲ್ಲಾ ಕಡೆ ಕುಡಿಯುವ ನೀರನ್ನು ಪರೀಕ್ಷಿಸಿದ ಬಳಿಕವೇ ಪೂರೈಕೆ ಮಾಡಬೇಕು. ಕಲುಷಿತ ನೀರಿನಿಂದ ಯಾವುದೇ ತೊಂದರೆಯಾದರೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೈಸೂರಿನ ಎರಡು ಗ್ರಾಮಗಳಲ್ಲಿ ಕಾಲರಾ ಕಂಡುಬಂದಿದೆ. ಇದಕ್ಕೆ ಕಲುಷಿತ ನೀರು ಪೂರೈಕೆಯೇ ಪ್ರಮುಖ ಕಾರಣ. ಮಳೆಯಿಂದಾಗಿ ಕಲುಷಿತ ನೀರು ಕುಡಿಯುವ ನೀರಿನೊಂದಿಗೆ ಸೇರಿದ್ದು, ಇದಕ್ಕೆ ಎಂಜಿನಿಯರ್‌ಗಳೇ ಕಾರಣ. ಪೂರೈಕೆಯಾಗಿರುವ ನೀರು ಕುಡಿಯಲು ಯೋಗ್ಯವೇ ಅಲ್ಲವೇ ಎಂಬುದನ್ನು ಪತ್ತೆ ಮಾಡದಿರುವುದು ದೊಡ್ಡ ಅಪರಾಧ ಎಂದು ಕಿಡಿ ಕಾರಿದರು.

ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕಾಲರಾ ಭೀತಿ: ತಗಡೂರು ಗ್ರಾಮದಲ್ಲಿ ತಲ್ಲಣ

ಕುಡಿಯುವ ನೀರಿನ ಪರೀಕ್ಷೆ ನಿತ್ಯವೂ ಆಗಬೇಕು. ನಗರಸಭೆ, ಪುರಸಭೆ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿನ ಪರೀಕ್ಷೆ ನಡೆಸಬೇಕು. ಈ ಹೊಣೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೊರಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪುರಸಭೆ, ನಗರಸಭೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಯಾವುದೇ ಲೋಪ ಉಂಟಾಗಿ ಅನಾಹುತ ಸಂಭವಿಸಿದರೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

40ಕ್ಕೂ ಹೆಚ್ಚು ಜನ ಅಸ್ವಸ್ಥ:

ರಾಜ್ಯದಲ್ಲಿ ಎರಡು ಕಡೆ ಕಾಲರಾ ವರದಿಯಾಗಿದೆ. ಒಂದು ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಗಡೂರಿನಲ್ಲಿ ವರದಿಯಾಗಿದ್ದು, ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆ.ಸಾಲುಂಡಿ ಎಂಬ ಗ್ರಾಮದಲ್ಲಿ ಕಾಲರಾ ವರದಿಯಾಗಿ 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಈ ಪೈಕಿ ತೀವ್ರ ಅಸ್ವಸ್ಥರಾಗಿದ್ದ ಒಬ್ಬರು ಮೃತಟ್ಟಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಎಲ್ಲಾ ರೀತಿಯ ಚಿಕಿತ್ಸಾ ನೆರವು ನೀಡಲಾಗಿದೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭೇಟಿ ಮಾಡಿದ್ದು, ನಾನೂ ಸಹ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.

ಮೈಸೂರಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವು; ಸ್ಪೋಟಕ ಸತ್ಯ ಬಿಚ್ಚಿಟ್ಟ ಶಾಸಕ ಜಿ.ಟಿ. ದೇವೇಗೌಡ

ರಾಜ್ಯದೆಲ್ಲೆಡೆ ಮಳೆ ಸುರಿಯುತ್ತಿರುವುದರಿಂದ ಕಲುಷಿತ ಮಳೆ ನೀರು ಕುಡಿಯುವ ನೀರಿಗೆ ಸೇರುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯಾದ್ಯಂತ ನಿಗಾ ವಹಿಸಲು ಹಾಗೂ ಕುಡಿಯುವ ನೀರನ್ನು ಪರೀಕ್ಷಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಕೃಷ್ಣ ಬೈರೇಗೌಡ, ಎಚ್‌.ಕೆ.ಪಾಟೀಲ್‌, ಚೆಲುವರಾಯಸ್ವಾಮಿ, ಕೆ.ಎಚ್.‌ಮುನಿಯಪ್ಪ, ಬೈರತಿ ಸುರೇಶ್‌, ಶಿವರಾಜ್‌ ತಂಗಡಗಿ, ಪ್ರಿಯಾಂಕ್‌ ಖರ್ಗೆ ಸೇರಿ ಹಲವು ಸಚಿವರು ಹಾಗೂ ಅಧಿಕಾರಿಗಳು ಹಾಜರಿದ್ದರು.

click me!