ಡಿ.23ರಿಂದ ನಿತ್ಯ 5000 ಕೋವಿಡ್‌ ಪರೀಕ್ಷೆ: ಸಚಿವ ದಿನೇಶ್‌ ಗುಂಡೂರಾವ್‌

By Kannadaprabha NewsFirst Published Dec 20, 2023, 5:23 AM IST
Highlights

ರಾಜ್ಯದಲ್ಲಿ ಕರೋನಾ ಪರೀಕ್ಷೆಯ ಸಂಖ್ಯೆಯನ್ನು ಡಿ.23 ರಿಂದ ನಿತ್ಯ 5 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಬೆಂಗಳೂರು (ಡಿ.20): ರಾಜ್ಯದಲ್ಲಿ ಕರೋನಾ ಪರೀಕ್ಷೆಯ ಸಂಖ್ಯೆಯನ್ನು ಡಿ.23 ರಿಂದ ನಿತ್ಯ 5 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊರೋನಾ ಪ್ರಕರಣಗಳು ಹೆಚ್ಚುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಂಗಳವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಈ ಸೂಚನೆ ನೀಡಿದರು. ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು. ಆಕ್ಸಿಜನ್‌, ವೆಂಟಿಲೇಟರ್‌, ಐಸಿಯು ಹಾಸಿಗೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಬೇಕು, ವೈರಲ್ ಟ್ರಾನ್ಸಪೋರ್ಟ್ ಮಿಡಿಯಾ ಖರೀದಿ ನಡೆಸುವಂತೆಯೂ ಈ ವೇಳೆ ಅವರು ಸೂಚನೆ ನೀಡಿದರು.

ಹೊರರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದವರಲ್ಲಿ ಕೊರೋನಾ ಲಕ್ಷಣಗಳಿದ್ದರೆ ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು. ಕೊರೋನಾ ತೀವ್ರತೆಯನ್ನು ತಿಳಿಯಲು ಪರೀಕ್ಷೆಯ ಪ್ರಮಾಣ ಹೆಚ್ಚಿಸಬೇಕು. ಎಲ್ಲ ಸರ್ಕಾರಿ ಆಸ್ಪತ್ರೆ ಸೇರಿದಂತೆ ಆರೋಗ್ಯ ಇಲಾಖೆಯಿಂದ ಕೊರೋನಾ ಪರೀಕ್ಷೆ ನಡೆಸುವಲ್ಲಿಗೆ ಸಮರ್ಪಕವಾಗಿ ಆರ್‌ಟಿಪಿಸಿಆರ್‌ ಪರೀಕ್ಷಾ ಕಿಟ್‌ಗಳನ್ನು ಸರಬರಾಜು ಮಾಡಬೇಕು. ಉಸಿರಾಟದ ಸಮಸ್ಯೆ, ಇನ್‌ಫ್ಲೂಯೆನ್ಜಾ ರೀತಿಯ ಅನಾರೋಗ್ಯ ಹೊಂದಿರುವವರನ್ನು ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೊಳಪಡಿಸಬೇಕು ಎಂದು ದಿನೇಶ್‌ ಗುಂಡೂರಾವ್‌ ಸೂಚಿಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್‌, ಆಯುಕ್ತ ಡಿ. ರಂದೀಪ್‌ ಇತರರಿದ್ದರು.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಮೀಕ್ಷೆ ಆಧರಿಸಿ ಟಿಕೆಟ್‌ ನೀಡಿ: ರೇಣುಕಾಚಾರ್ಯ

ಆಸ್ಪತ್ರೆಗಳ ಸ್ಥಿತಿಗತಿ ಕುರಿತು ವರದಿ ಸಲ್ಲಿಸಲು ಸೂಚನೆ: ಆರೋಗ್ಯ ಸಚಿವರ ಸಭೆಗೂ ಮುನ್ನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್‌ ಅವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಲಭ್ಯ ಇರುವ ಸೌಕರ್ಯಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದರು. ಪ್ರಮುಖವಾಗಿ ಆಕ್ಸಿಜನ್‌ ಶೇಖರಣೆ, ಐಸಿಯು ಉಪಕರಣಗಳ ಕಾರ್ಯನಿರ್ವಹಣೆ ಸೇರಿದಂತೆ ಮತ್ತಿತರ ವಿಷಯಗಳನ್ನು ಸ್ವಂತ ಪರಿಶೀಲಿಸಿ ವರದಿ ನೀಡಬೇಕು. ಒಂದು ವೇಳೆ ಆಕ್ಸಿಜನ್‌ ಘಟಕಗಳ ಉಪಕರಣ, ಐಸಿಯು ಉಪಕರಣಗಳ ದುರಸ್ತಿ ಅವಶ್ಯವಿದ್ದರೆ ಕೂಡಲೆ ಅದನ್ನು ಮಾಡಿಸುವಂತೆ ಸೂಚಿಸಲಾಯಿತು.

ಸಿಎಂಗೆ ವಿವರಣೆ ನೀಡಿದ ಸಚಿವ: ಸಭೆ ನಡೆಯುತ್ತಿರುವ ಸಂದರ್ಭದಲ್ಲಿಯೇ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿ ಹಾಗೂ ಅದಕ್ಕೆ ಮಾಡಿಕೊಂಡಿರುವ ಸಿದ್ಧತೆ ಕುರಿತಂತೆ ದಿನೇಶ್‌ ಗುಂಡೂರಾವ್‌ ವಿವರಣೆ ನೀಡಿದರು. ಇದೇ ವೇಳೆ ಗುರುವಾರ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಆಗಮಿಸಿದ ನಂತರ ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸುವ ಬಗ್ಗೆಯೂ ನಿರ್ಧರಿಸಲಾಯಿತು.

ಇಂದು ಕೇಂದ್ರ ಸಚಿವರೊಂದಿಗೆ ಸಭೆ: ದೇಶಾದ್ಯಂತ ಮತ್ತೆ ಕೊರೋನಾ ಸೋಂಕಿನ ತೀವ್ರತೆ ಹೆಚ್ಚುತ್ತಿರುವ ಕಾರಣದಿಂದಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ ಅವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿದ್ದಾರೆ. ಈ ವೇಳೆ ಆಯಾ ರಾಜ್ಯಗಳಲ್ಲಿ ಕೊರೋನಾ ಪರಿಸ್ಥಿತಿ ಹಾಗೂ ಕೊರೋನಾ ಹೆಚ್ಚಿರುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲಾಗುತ್ತದೆ. ಜತೆಗೆ ಕೊರೋನಾ ಕುರಿತು ದೇಶಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿ ಪ್ರಕಟಿಸುವ ಬಗ್ಗೆಯೂ ಚರ್ಚಿಸಲಾಗುತ್ತದೆ.

ಒಂದೇ ದಿನ 44 ಪ್ರಕರಣ ಪತ್ತೆ: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 44 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ. 6.09ಕ್ಕೆ ಹೆಚ್ಚಳವಾಗಿದೆ. 24 ಗಂಟೆಗಳಲ್ಲಿ 487 ಆರ್‌ಟಿಪಿಸಿಆರ್‌ ಹಾಗೂ 235 ಆರ್‌ಎಟಿ ಪರೀಕ್ಷೆ ಸೇರಿ ಒಟ್ಟು 722 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 79 ಕೊರೋನಾ ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 62 ಮಂದಿ ಹೋಂಐಸೋಲೇಷನ್‌ನಲ್ಲಿ ಇದ್ದಾರೆ. 17 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮಣ್ಣರ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣರಲ್ಲ: ಎಂ.ಪಿ.ರೇಣುಕಾಚಾರ್ಯ

ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶನಿವಾರದಿಂದ ಪ್ರತಿದಿನ 5 ಸಾವಿರ ಕೊರೋನಾ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಗಡಿ ಜಿಲ್ಲೆಯಲ್ಲಿ ಹೆಚ್ಚಿನ ಮುಂಜ್ರಾಗತೆ ಕೈಗೊಳ್ಳಲಾಗುತ್ತಿದೆ. ಗುರುವಾರ ಮುಖ್ಯಮಂತ್ರಿಗಳು ಬಂದ ನಂತರ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗುವುದು.
-ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

click me!