ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಿರುಮಲಶೆಟ್ಟಿಹಳ್ಳಿ ಆಸ್ಪತ್ರೆಯಲ್ಲಿ ದಂಧೆ, ರಾತ್ರಿ ಅಥವಾ ಸೂರ್ಯೋದಯಕ್ಕೂ ಮುನ್ನ ಗರ್ಭಪಾತ ಮಾಡಿಸುತ್ತಿದ್ದ ವೈದ್ಯ, ಹೆಣ್ಣುಮಕ್ಕಳು ಬೇಡ ಎನ್ನುವವರು, ಪ್ರೀತಿಸಿ ಗರ್ಭ ಧರಿಸಿದವರೇ ಹೆಚ್ಚಾಗಿ ಬರುತ್ತಿದ್ದರು, ವಿಚಾರಣೆ ವೇಳೆ ವೈದ್ಯ ಡಾ. ಶ್ರೀನಿವಾಸ್ ಹೇಳಿಕೆ: ಪೊಲೀಸರಿಂದ ಮಾಹಿತಿ
ಹೊಸಕೋಟೆ(ಡಿ.20): ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೊಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯ ಎಸ್‌ಪಿಜಿ ಆಸ್ಪತ್ರೆಯ ವೈದ್ಯ ಡಾ.ಶ್ರೀನಿವಾಸ್, ತಿಂಗಳಿಗೆ ಸರಾಸರಿ 2ರಂತೆ ಕಳೆದ 4 ವರ್ಷಗಳ ಅವಧಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಹೆಣ್ಣುಭ್ರೂಣ ಹತ್ಯೆ ನಡೆಸಿರುವುದು ಪತ್ತೆಯಾಗಿದೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಈ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರಿನ ಕೆ.ಆರ್.ಪುರ, ವೈಟ್‌ಫೀಲ್ಡ್ ಸೇರಿದಂತೆ ಹೊಸಕೋಟೆ ಗ್ರಾಮಾಂತರ ಭಾಗದ ಸಾಕಷ್ಟು ಮಹಿಳೆಯರಿಗೆ ವೈದ್ಯ ಭ್ರೂಣಹತ್ಯೆ ಮಾಡಿಸಿದ್ದಾನೆ. ತಿಂಗಳಿಗೆ ಸರಾಸರಿ 2ರಂತೆ ಕಳೆದ 4 ವರ್ಷಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಹೆಣ್ಣುಭ್ರೂಣಗಳನ್ನು ಹತ್ಯೆ ಮಾಡಿದ್ದು ವಿಚಾರಣೆ ವೇಳೆ ಪತ್ತೆಯಾಗಿದೆ. ಭ್ರೂಣವೊಂದಕ್ಕೆ ವೈದ್ಯ 5-50 ಸಾವಿರ ರು.ಗಳವರೆಗೆ ಹಣ ಪಡೆಯುತ್ತಿದ್ದ ಎಂದು ಹೇಳಿದರು.
undefined
ಭ್ರೂಣ ಹತ್ಯೆ ಪ್ರಕರಣ: ತಿರುಮಲಶೆಟ್ಟಿಹಳ್ಳಿಯ ಎಸ್‌ಪಿಜಿ ಆಸ್ಪತ್ರೆಯ ವೈದ್ಯ ಶ್ರೀನಿವಾಸ್ ಅರೆಸ್ಟ್
ಭ್ರೂಣಹತ್ಯೆ ಮಾಡಿಸುವವರು ನೇರವಾಗಿ ವೈದ್ಯನನ್ನು ಭೇಟಿಯಾಗುತ್ತಿರಲಿಲ್ಲ. ಬದಲಾಗಿ ನರ್ಸ್‌ಗಳ ಮೂಲಕ ವ್ಯವಹಾರ ಕುದುರಿಸುತ್ತಿದ್ದರು. ಬಳಿಕ ರಾತ್ರಿ ಅಥವಾ ಸೂರ್ಯೋದಯಕ್ಕೂ ಮುನ್ನ ಆಸ್ಪತ್ರೆಗೆ ದಾಖಲು ಮಾಡಿಕೊಂಡು, ಕೆಲಸ ಮುಗಿಸಿ ಕಳುಹಿಸಲಾಗುತ್ತಿತ್ತು. ಪ್ರಮುಖವಾಗಿ ಹೆಣ್ಣು ಮಕ್ಕಳು ಬೇಡ ಎನ್ನುವವರು ಹಾಗೂ ಪ್ರೀತಿ-ಪ್ರೇಮ ಎಂದು ತಪ್ಪು ಮಾಡಿ ಗರ್ಭ ಧರಿಸುತ್ತಿದ್ದ ಯುವತಿಯರೇ ಹೆಚ್ಚಾಗಿ ತನ್ನ ಬಳಿ ಬರುತ್ತಿದ್ದರು ಎಂಬುದನ್ನು ವಿಚಾರಣೆ ವೇಳೆ ಡಾ.ಶ್ರೀನಿವಾಸ್ ಬಾಯ್ಬಿಟ್ಟಿದ್ದಾನೆ ಎಂದು ತಿಳಿಸಿದರು.
7 ಆರೋಪಿಗಳ ಬಂಧನ:
ಡಿ.13ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ನೇತೃತ್ವದಲ್ಲಿ ತಿರುಮಲಶೆಟ್ಟಿಹಳ್ಳಿಯ ಎಸ್‌ಪಿಜಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಆಪರೇಷನ್ ಥಿಯೇಟರ್‌ನಲ್ಲಿ ಪರಿಶೀಲಿಸಿದಾಗ ಕಸದ ಬುಟ್ಟಿಯಲ್ಲಿ ಒಂದು ನಿರ್ಜೀವ ಹೆಣ್ಣು ಭ್ರೂಣ ಪತ್ತೆಯಾಯಿತು. ಅದರ ವಾರಸುದಾರರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಡಾ.ಶ್ರೀನಿವಾಸ್ ಸೇರಿ ಒಟ್ಟು 7 ಆರೋಪಿಗಳನ್ನು ಈವರೆಗೆ ಬಂಧಿಸಲಾಗಿದ್ದು, ಅವರುಗಳನ್ನು 12 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಪೋರ್ಟೆಬಲ್ ಸ್ಕ್ಯಾನಿಂಗ್ ಯಂತ್ರವನ್ನು ಉಪಯೋಗಿಸುವುದಕ್ಕೆ ಹಾಗೂ ಗರ್ಭಪಾತ ಮಾಡಿಸಲು ಜಿಲ್ಲಾ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದರು.