ರೋಹಿಣಿ ವಿರುದ್ಧ ಮತ್ತೆ ರೂಪಾ ಫೇಸ್ಬುಕ್‌ ಪೋಸ್ಟ್‌: ಪತ್ರಿಕೆಯಲ್ಲಿ ಪ್ರಕಟವಾದ ವರದಿ ಲಗತ್ತಿಸಿ ಗರಂ

By Kannadaprabha NewsFirst Published Feb 27, 2023, 9:47 AM IST
Highlights

ಪರಸ್ಪರ ಆರೋಪ-ಪ್ರತ್ಯಾರೋಪದ ಹೇಳಿಕೆಗಳನ್ನು ಯಾವುದೇ ರೂಪದಲ್ಲೂ ನೀಡದಂತೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ ಬಳಿಕವೂ ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ‘ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ....’ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಬೆಂಗಳೂರು (ಫೆ.27): ಪರಸ್ಪರ ಆರೋಪ-ಪ್ರತ್ಯಾರೋಪದ ಹೇಳಿಕೆಗಳನ್ನು ಯಾವುದೇ ರೂಪದಲ್ಲೂ ನೀಡದಂತೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ ಬಳಿಕವೂ ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ‘ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ....’ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ರೂಪಾ ಹಾಗೂ ರೋಹಿಣಿ ಸಿಂಧೂರಿ ನಡುವೆ ತಿಕ್ಕಾಟ ಉಂಟಾದಾಗ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇಬ್ಬರೂ ಅಧಿಕಾರಿಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸದಂತೆ ಹಾಗೂ ವಿವಾದ ಮುಂದುವರೆಸದಂತೆ ಎಚ್ಚರಿಕೆ ನೀಡಿದ್ದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೂ ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣ, ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಹೇಳಿಕೆ ನೀಡುವಂತಿಲ್ಲ ಎಂದು ಇಬ್ಬರೂ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿತ್ತು. ಜತೆಗೆ ರೋಹಿಣಿ ಅವರು ತಮ್ಮ ವಿರುದ್ಧ ಯಾವುದೇ ಸಾರ್ವಜನಿಕವಾಗಿ, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಮಾನಹಾನಿ ಹೇಳಿಕೆ ನೀಡದಂತೆ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿದ್ದರು. ಇದರ ನಡುವೆಯೂ ರೂಪಾ ಅವರು ರೋಹಿಣಿ ವಿರುದ್ಧ ಪತ್ರಿಕೆಯೊಂದರಲ್ಲಿನ ಬಂದ ಮೂರು ಲೇಖನವನ್ನು ಪೋಸ್ಟ್‌ ಮಾಡಿದ್ದಾರೆ.

IAS vs IPS: ಡಿ.ರೂಪಾ, ರೋಹಿಣಿ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ

ರೋಹಿಣಿ ವರ್ಸಸ್‌ ರೂಪಾಗೆ ಕೋರ್ಟ್‌ ಬ್ರೇಕ್‌: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಅವರಿಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆಕ್ಷೇಪಾರ್ಹ ಹಾಗೂ ಮಾನಹಾನಿ ಹೇಳಿಕೆ ನೀಡದಂತೆ ನಗರದ ಸಿಟಿ ಹಾಗೂ ಸೆಷನ್ಸ್‌ ನ್ಯಾಯಾಲಯ ತಾಕೀತು ಮಾಡಿದೆ. ತಮ್ಮ ವಿರುದ್ಧ ಮಾನಹಾನಿಕಾರ ಸುದ್ದಿ ಪ್ರಸಾರ ಮಾಡದಂತೆ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಹಾಗೂ ಮಾಧ್ಯಮಗಳ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸುವಂತೆ ಕೋರಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎಸ್‌. ಗಂಗಣ್ಣವರ್‌ ಅವರ ಪೀಠ ಪರಸ್ಪರ ಯಾವುದೇ ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಇಬ್ಬರಿಗೂ ತಾಕೀತು ಮಾಡಿದೆ.

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ಮಾನಹಾನಿ ಮತ್ತು ಆಕ್ಷೇಪಾರ್ಹ ಸುದ್ದಿ ಪ್ರಸಾರ ಮಾಡದಂತೆ ಹಲವು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ತಾತ್ಕಾಲಿಕ ನಿರ್ಬಂಧಕಾಜ್ಞೆ ನೀಡಿ ನಗರದ 73ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಗುರುವಾರ ಮಧ್ಯಂತರ ಆದೇಶ ಹೊರಡಿಸಿದೆ. ಜತೆಗೆ, ಡಿ.ರೂಪಾ ಮೌದ್ಗಿಲ್‌ ಮತ್ತು ಹಲವು ಮಾಧ್ಯಮಗಳಿಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಮಾ.7ಕ್ಕೆ ಮುಂದೂಡಿದೆ.

8 ವರ್ಷ​ದಿಂದ ರೋಹಿಣಿ ನನ್ನ ಮನೆಯವರ ಹಿಂದೆ ಬಿದ್ದಿ​ದ್ದಾರೆ: ರೂಪಾ ಆಡಿಯೋ?

ಪ್ರಕರಣಕ್ಕೆ ಸಂಬಂಧಪಟ್ಟದಂತೆ ಬೆಳವಣಿಗೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದರೆ, ರೋಹಿಣಿ ಅವರಿಗೆ ಮಾನಹಾನಿ ಉಂಟಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ರೋಹಿಣಿ ಮತ್ತು ಡಿ.ರೂಪಾ ಅವರು ಸರ್ಕಾರಿ ಅಧಿಕಾರಿಗಳಿದ್ದು, ಜವಾಬ್ದಾರಿಯುತ ಹುದ್ದೆ ಹೊಂದಿದ್ದಾರೆ. ಸೇವಾ ನಿಯಮಗಳ ನಿಯಂತ್ರಣಕ್ಕೆ ಒಳಪಟ್ಟಿದ್ದಾರೆ. ಆದರೆ, ಸಾರ್ವಜನಿಕವಾಗಿ ಪರಸ್ಪರ ಮಾನಹಾನಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಪ್ರಕರಣದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಿ ತನ್ನ ಅಧಿಕಾರ ಚಲಾಯಿಸುತ್ತಿರುವುದು ದುರದೃಷ್ಟಕರವಾಗಿದೆ ಎಂದು ನ್ಯಾಯಪೀಠ ಹೇಳಿದೆ.

click me!