
ಬೆಂಗಳೂರು(ಸೆ.18): ಶುಕ್ರವಾರ ನಡೆದ ಬೃಹತ್ ಲಸಿಕಾ ಮೇಳದಲ್ಲಿ 28.4 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ತನ್ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 5.14 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಿದಂತಾಗಿದೆ. ಲಸಿಕಾ ಮೇಳದ ಅಂಗವಾಗಿ ಶುಕ್ರವಾರವೊಂದೇ ಒಂದೇ ದಿನ 30 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಬೇಕು ಎಂಬ ಸಂಕಲ್ಪವನ್ನು ರಾಜ್ಯ ಸರ್ಕಾರ ತೊಟ್ಟಿತ್ತು. ರಾತ್ರಿ 9.30ರ ಮಾಹಿತಿಯಂತೆ ಗುರಿಯ ಶೇ. 88 ಸಾಧನೆಯಾಗಿದೆ.
12 ಸಾವಿರ ಲಸಿಕಾ ಕೇಂದ್ರದಲ್ಲಿ ಲಸಿಕೆ ವಿತರಿಸಲಾಗಿದೆ. ಶಿವಮೊಗ್ಗ, ಬೆಂಗಳೂರು ನಗರ, ಧಾರವಾಡ, ರಾಮನಗರ, ಹಾಸನ, ದಾವಣಗೆರೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು ಮತ್ತು ಹಾವೇರಿ ಜಿಲ್ಲೆ ಗುರಿ ಮೀರಿದ ಸಾಧನೆ ಮಾಡಿದೆ. ಬಾಗಲಕೋಟೆ ತನ್ನ ಗುರಿ ಸಾಧಿಸಿದೆ. ಉಳಿದಂತೆ ಬಳ್ಳಾರಿ, ಚಿತ್ರದುರ್ಗ, ಮಂಡ್ಯ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಮೈಸೂರು, ಬಿಬಿಎಂಪಿ, ವಿಜಯಪುರ, ಕೋಲಾರ ಮತ್ತು ಯಾದಗಿರಿ ಜಿಲ್ಲೆ ಶೇ. 75ಕ್ಕಿಂತ ಹೆಚ್ಚು ಸಾಧನೆ ಮಾಡಿದೆ. ಕಲಬುರಗಿ (ಶೇ. 34)ಯನ್ನು ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಶೇ. 50 ಮೀರಿದ ಸಾಧನೆಯಾಗಿದೆ. ಬೆಂಗಳೂರಿನಲ್ಲಿ 4.79 ಲಕ್ಷ, ಬೆಳಗಾವಿ 2.54 ಲಕ್ಷ, ಬಳ್ಳಾರಿ 1.40 ಲಕ್ಷ ಡೋಸ್ ವಿತರಣೆಯಾಗಿದ್ದು, ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದೆ.
ಬಿಹಾರ, ಉ.ಪ್ರ.ಗಿಂತ ರಾಜ್ಯ ಮುಂದೆ:
ರಾತ್ರಿ 9 ಹೊತ್ತಿಗೆ ರಾಜ್ಯಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಮತ್ತು ಬಿಹಾರಕ್ಕಿಂತ ಹೆಚ್ಚು ಲಸಿಕೆಯನ್ನು ರಾಜ್ಯದಲ್ಲಿ ವಿತರಿಸಲಾಗಿದೆ. ಈ ಐತಿಹಾಸಿಕ ಲಸಿಕಾ ಅಭಿಯಾನದಲ್ಲಿ ಭಾಗಿಯಾದ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ. ಕೋವಿಡ್ ವಿರುದ್ಧದ ಹೋರಾಟವನ್ನು ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದೇ ಈ ಸಾಧನೆ ಆಗಿದೆ. ಈ ಮಧ್ಯೆ ರಾಜ್ಯದಲ್ಲಿ 5 ಕೋಟಿ ಡೋಸ್‌ಗಿಂತ ಹೆಚ್ಚು ಲಸಿಕೆ ವಿತರಣೆ ನಡೆದಿದೆ. ಸೆಪ್ಟೆಂಬರ್‌ನಲ್ಲಿ ಒಂದೂವರೆ ಕೋಟಿ ಡೋಸ್ ಲಸಿಕೆ ನೀಡಬೇಕು ಎಂಬ ಗುರಿ ಮುಟ್ಟುವ ವಿಶ್ವಾಸವಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಮೋದಿ ಹುಟ್ಟುಹಬ್ಬಕ್ಕೆ ಮೇಗಾ ವ್ಯಾಕ್ಸಿನೇಶನ್ ಗಿಫ್ಟ್; ಇದುವರೆಗೆ 1.4 ಕೋಟಿ ಡೋಸ್!
ಲಸಿಕೆ ಹಾಕಿಸಿಕೊಂಡವರಿಗೆ ಉಚಿತ ಹೆಲ್ಮೆಟ್ ಕೊಡುಗೆ
ಧಾರವಾಡ: ಕೋವಿಡ್ ಲಸಿಕೆ ಹಾಕಿಸಿಕೊಂಡ ಚಾಲಕ ಹಾಗೂ ಪೊಲೀಸರಿಗೆ ಇಂಡಿಯನ್ ಆಯಿಲ್ ಕಂಪನಿ ವತಿಯಿಂದ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು. ಐಓಸಿ ಹಮ್ಮಿಕೊಂಡಿದ್ದ ಲಸಿಕಾ ಶಿಬಿರದಲ್ಲಿ 500ಕ್ಕೂ ಅಧಿಕ ಜನ ಲಸಿಕೆ ಹಾಕಿಸಿಕೊಂಡರು.
ಮನವೊಲಿಸಿದ ತಾಪಂ ಇಒ
ಕೊಪ್ಪಳ: ಕಾರಟಗಿ ತಾಲಕಿನ ಮುರ್ಲಾನಹಳ್ಳಿ ಗ್ರಾಮದ ನಾಲ್ಕೈದು ಮನೆಯವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು. ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ಲಸಿಕೆ ನಿರಾಕರಿಸಿದ್ದರು. ಕೊನೆಗೆ ತಾಪಂ ಇಒ ಚಂದ್ರಶೇಖರ ಸಿಬ್ಬಂದಿ ಜೊತೆ ತೆರಳಿ ಮನವೊಲಿಸಿ ಲಸಿಕೆ ಹಾಕಿಸಿದರು.
ಹೊಲದಲ್ಲಿ ಲಸಿಕೆ ವಿತರಣೆ
ಬಳ್ಳಾರಿ: ಬೃಹತ್ ಲಸಿಕಾ ಅಭಿಯಾನದ ಹಿನ್ನೆಲೆಯಲ್ಲಿ ಶುಕ್ರವಾರ ಗಡಿ ಗ್ರಾಮವಾದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬೊಮ್ಮಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಾಜನಹಳ್ಳಿಯಲ್ಲಿ ಆಶಾ ಕಾರ್ಯತೆಯರು, ಶುಶ್ರೂಷಕಿಯರು, ಪೊಲೀಸರು ಹೊಲಗಳಿಗೆ ತೆರಳಿ ರೈತ ಮಹಿಳೆಯರಿಗೆ ಲಸಿಕೆ ವಿತರಿಸಿದರು. ಸ
ಧರಣಿ ಕುಳಿತು ಲಸಿಕೆ
ಕೊಪ್ಪಳ: ತಾಲೂಕಿನ ಗೊಂಡಬಾಳದಲ್ಲಿ ಲಸಿಕಾ ಮಹಾ ಅಭಿಯಾನ ನಡೆಯುತ್ತಿತ್ತು. ಗ್ರಾಮದ ಹುಸೇನಬೀ ಹಳ್ಳಿಕೇರಿ ಅವರ ಮನೆಯಲ್ಲಿ 12 ಜನರು ಲಸಿಕೆ ಹಾಕಿಸಿಕೊಂಡಿರಲಿಲ್ಲ. ಅಭಿಯಾನದ ವೇಳೆ ಮನೆಗೆ ಹೋದರೂ ಮನೆಯಿಂದ ಯಾರು ಆಚೆ ಬರಲೇ ಇಲ್ಲ. ಆಗ ಆಶಾ ಕಾರ್ಯಕರ್ತರು ಧರಣಿ ಕುಳಿತು, ಮನವೊಲಿಸಿ, 12 ಜನರಿಗೂ ಲಸಿಕೆ ಹಾಕಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ