
ಬೆಂಗಳೂರು(ಸೆ.18): ಸರ್ಕಾರ ಹಾಗೂ ಸರ್ಕಾರದ ಸಹಾಯದಿಂದ ಕೈಗೊಳ್ಳುವ ಯಾವುದೇ ಕಾಮಗಾರಿ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಜನ ಪ್ರತಿನಿಧಿಗಳ ಹೆಸರು ಮತ್ತು ಫೋಟೋಗಳನ್ನು ಅಳವಡಿಸಬಾರದು ಎಂದು ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಯೋಜನ ಪ್ರಾಧಿಕಾರಗಳಿಗೆ ನಿರ್ದೇಶಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಹಾಕಲಾಗಿರುವ ಸ್ಥಳೀಯ ಜನಪ್ರತಿನಿಧಿಗಳ ಹೆಸರು ಮತ್ತು ಫೋಟೋಗಳನ್ನು ತೆಗೆದುಹಾಕಲು ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಎಚ್.ಎಂ. ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಸಿ.ಶರ್ಮ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಸರ್ಕಾರದ ಪರ ವಕೀಲರು ಹಾಜರಾಗಿ, ಈ ವಿಚಾರದಲ್ಲಿ 2021ರ ಆ.24ರಂದು ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಕೆ.ಎ. ಹಿದಾಯತ್‌ಉಲ್ಲಾ ಅವರು ಹೊರಡಿಸಿರುವ ಸುತ್ತೋಲೆ ಒಳಗೊಂಡ ಮೆಮೊವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಈ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಜಾರಕಿಹೊಳಿ ಸೀಡಿ ಕೇಸಲ್ಲಿ ಯುವತಿ ವಾದವನ್ನೂ ಆಲಿಸಬೇಕು: ಹೈಕೋರ್ಟ್
ಸುತ್ತೋಲೆಯಲ್ಲಿ ಏನಿದೆ?:
ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಮಂಡಳಿ, ನಿಗಮ, ಸಂಸ್ಥೆಗಳು, ಮಹಾನಗರ ಪಾಲಿಕೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರ್ಕಾರ, ಸರ್ಕಾರದ ಸಹಾಯದಿಂದ ಕೈಗೊಳ್ಳುವ, ನಿರ್ವಹಿಸುತ್ತಿರುವ ಕಾಮಗಾರಿಗಳು, ನಿರ್ಮಾಣವಾಗುವ ವಿವಿಧ ಕಾಮಗಾರಿಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಜನ ಪ್ರತಿನಿಧಿಗಳ ಹೆಸರು ಮತ್ತು ಫೋಟೋಗಳನ್ನು ಅಳವಡಿಸಿ ಪ್ರಚುರಪಡಿಸಬಾರದು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.
ಅಲ್ಲದೇ, ಈಗಾಗಲೇ ಸರ್ಕಾರಿ ಕಾಮಗಾರಿಗಳ ಮೇಲೆ ಜನ ಪ್ರತಿನಿಧಿಗಳು ಹೆಸರು ಮತ್ತು ಪೋಟೋಗಳನ್ನು ಆಳವಡಿಸಿದ್ದರೆ, ಕೂಡಲೇ ಅದನ್ನು ತೆರವುಗೊಳಿಸಬೇಕು. ಒಂದು ವೇಳೆ ಅಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ-1981ರಡಿ ಸಂಬಂಧಪಟ್ಟವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಆದೇಶ ಅನುಷ್ಠಾನಗೊಳಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಸಾರ್ವಜನಿಕ ಹಣದಲ್ಲಿ ಅನುಷ್ಠಾನಗೊಳಿಸುವ ಯೋಜನೆಗಳು, ನಿರ್ವಹಿಸುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕವಾಗಿ ಪ್ರಚುರಪಡಿಸುವ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯ ನ್ಯಾಯಮೂರ್ತಿ, ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ರಾಷ್ಟ್ರಪಿತ ಅವರ ಭಾವಚಿತ್ರ ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಪಕ್ಷ, ಜನಪ್ರತಿನಿಧಿಗಳ ಭಾವಚಿತ್ರಗಳನ್ನು ಅಳವಡಿಸಬಾರದು ಎಂದು ಸುಪ್ರೀಂ ಕೋರ್ಟ್ 2015ರ ಮೇ 13ರಂದು ತೀರ್ಪು ನೀಡಿದೆ.
ಆದರೆ, ರಾಜ್ಯದಲ್ಲಿ ರಸ್ತೆ, ಕುಡಿಯುವ ನೀರು ಘಟಕ, ಮೇಲ್ಸೇತುವೆ ಮತ್ತು ಒಳಚರಂಡಿ ನಿರ್ಮಾಣ ಸೇರಿ ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಆಟದ ಮೈದಾನ ಮತ್ತು ಉದ್ಯಾನಗಳಲ್ಲಿ ಅಳವಡಿಸಿರುವ ಜಾಹೀರಾತಿನಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರ ಹೆಸರು ಮತ್ತು ಫೋಟೋ ಪ್ರಕಟಿಸಲಾಗಿದೆ. ಇದನ್ನು ತಡೆಯುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಅರ್ಜಿದಾರರ ಪರ ವಕೀಲ ಪಿ.ಚಿದಾನಂದ ವಾದ ಮಂಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ