ಇನ್ಮುಂದೆ ಆನ್‌ಲೈನ್‌ನಲ್ಲಿ ಜೂಜು ಆಡಿದ್ರೆ ಜೈಲೇ ಗತಿ..!

By Kannadaprabha News  |  First Published Sep 18, 2021, 10:20 AM IST

*   ಹಾಲಿ ಇರುವ 1 ವರ್ಷ ಜೈಲು ಶಿಕ್ಷೆ, 1 ಸಾವಿರ ರು. ದಂಡ ಮೊತ್ತ ಏರಿಕೆ
*  ಆನ್‌ಲೈನ್‌ ಜೂಜು, ಬೆಟ್ಟಿಂಗ್‌ ಜಾಮೀನುರಹಿತ ಅಪರಾಧ ಎಂದು ಘೋಷಣೆ
*  ಎಲ್ಲ ರೀತಿಯ ಜೂಜು ಆಧರಿತ ಹಣಕಾಸು ವರ್ಗಾವಣೆಯೂ ನಿಷಿದ್ಧ
 


ಬೆಂಗಳೂರು(ಸೆ.18): ರಾಜ್ಯದಲ್ಲಿ ಆನ್‌ಲೈನ್‌ನ ಎಲ್ಲಾ ರೀತಿಯ ಹಾಗೂ ಬೆಟ್ಟಿಂಗ್‌ ನಿಷೇಧಿಸುವ ಮಹತ್ವದ 2021ನೇ ಸಾಲಿನ ಕರ್ನಾಟಕ ಪೊಲೀಸ್‌ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ಜೂಜಾಟದಲ್ಲಿ ತೊಡಗಿದ ಆರೋಪ ಸಾಬೀತಾದವರಿಗೆ 3 ವರ್ಷ ಜೈಲು ಶಿಕ್ಷೆ, ಕನಿಷ್ಠ 25 ಸಾವಿರದಿಂದ ಗರಿಷ್ಠ 1 ಲಕ್ಷ ರು.ವರೆಗೆ ದಂಡ ವಿಧಿಸುವ ಅಂಶ ಈ ಮಸೂದೆಯಲ್ಲಿದೆ. ಸದ್ಯ ಇಂತಹ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರು. ದಂಡವಿದೆ.

Tap to resize

Latest Videos

ಆನ್‌ಲೈನ್‌ ಜೂಜು, ಗಳ ಮೂಲಕ ಆಡುವ ಜೂಜು, ಬೆಟ್ಟಿಂಗ್‌ಗಳಿಗೆ ಕಡಿವಾಣ ಹಾಕುವ ಸಲುವಾಗಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಲು ಹಿಂದೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯ್ದೆಯಲ್ಲಿ ಆನ್‌ಲೈನ್‌ ಜೂಜನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಲ್ಲದೆ, ಜಾಮೀನುರಹಿತ ಅಪರಾಧವನ್ನಾಗಿ ಪರಿಗಣಿಸಲು ಅವಕಾಶ ಕಲ್ಪಿಸಿದ್ದು, ವಿಧೇಯಕದ ಬಗ್ಗೆ ಉಭಯ ಸದನಗಳಲ್ಲಿ ಚರ್ಚೆಯಾದ ಬಳಿಕ ಅಂಗೀಕಾರ ಆಗಬೇಕಿದೆ.

ಆನ್‌ಲೈನ್ ಬೆಟ್ಟಿಂಗ್‌ ನಿಷೇಧಿಸಿದ ಸರ್ಕಾರ, ಸಿಕ್ಕಾಕೊಂಡ್ರೆ 2 ವರ್ಷ ಜೈಲು!

ಆನ್‌ಲೈನ್‌ ಗೇಮ್‌ಗಳು ಎಂದರೆ, ಹಣ ಅಥವಾ ಟೋಕನ್‌ ರೂಪದಲ್ಲಿ ಜೂಜು ಕಟ್ಟಿಆಡುವ ಎಲ್ಲಾ ರೀತಿಯ ಗೇಮ್‌ಗಳು ನಿಷೇಧಗೊಳ್ಳಲಿವೆ. ಗೇಮ್‌ಗೆ ಮೊದಲು ಅಥವಾ ನಂತರ ಹಣ ಪಾವತಿಸುವುದು. ಕೇವಲ ಹಣ ಮಾತ್ರವಲ್ಲದೆ ಮೌಲ್ಯ ಹೊಂದಿರುವ ವರ್ಚುಯಲ್‌ ಕರೆನ್ಸಿ, ಫಂಡ್‌ ಟ್ರಾನ್ಸ್‌ಫರ್‌ ಸೇರಿದಂತೆ ಎಲ್ಲಾ ರೀತಿಯ ಜೂಜು ಆಧಾರಿತ ಹಣಕಾಸು ವ್ಯವಹಾರಗಳಿಗೂ ನಿಷೇಧ ಹೇರಲಾಗಿದೆ.

ಆನ್‌ಲೈನ್‌ನಲ್ಲಿ ಆಡುವ ಪಂದ್ಯಗಳು, ಮೊಬೈಲ್‌ ಆ್ಯಪ್‌ ಮೂಲಕ ಆಡುವ ಆಟಗಳು, ಕಂಪ್ಯೂಟರ್‌, ಇಂಟರ್‌ನೆಟ್‌, ಯಾವುದೇ ಸಂವಹನ ಸಾಧನ ಮೂಲಕ ವರ್ಚುಯಲ್‌ ವೇದಿಕೆಯಲ್ಲಿ ಆಡುವ ಎಲ್ಲಾ ಗೇಮ್‌ಗಳು ಇದರ ವ್ಯಾಪ್ತಿಗೆ ಬರುತ್ತವೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಆನ್‌ಲೈನ್‌ ಕ್ಯಾಸಿನೊ, ಡ್ರೀಮ್‌ ಇಲೆವೆನ್‌, ರಮ್ಮಿ ಸರ್ಕಲ್‌, ಜಂಗ್ಲಿ ರಮ್ಮಿಯಂತಹ ಆನ್‌ಲೈನ್‌ ಜೂಜು ಆಟಗಳಿಗೆ ನಿರ್ಬಂಧ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಆನ್‌ಲೈನ್‌ ಮೂಲಕ ನಡೆಯುವ ಕ್ರಿಕೆಟ್‌ ಸೇರಿದಂತೆ ಕ್ರೀಡಾ ಬೆಟ್ಟಿಂಗ್‌ಗಳಿಗೂ ಕಡಿವಾಣ ಬೀಳಲಿದೆ.

ಲಾಟರಿ, ಕುದುರೆ ರೇಸ್‌ಗೆ ಅನ್ವಯವಿಲ್ಲ:

ಈ ಆನ್‌ಲೈನ್‌ ಜೂಜಾಟ ನಿಷೇಧ ಕಾಯ್ದೆಯಡಿ ಲಾಟರಿ ಮತ್ತು ಕುದುರೆ ರೇಸ್‌ಗಳು ಬರುವುದಿಲ್ಲ. ಲಾಟರಿ ಮತ್ತು ಕುದುರೆ ರೇಸ್‌ ಅನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯ ಆನ್‌ಲೈನ್‌ ಜೂಜಾಟವನ್ನು ನಿಷೇಧಿಸುವ ಅಂಶಗಳು ಈ ವಿಧೇಯಕದಲ್ಲಿ ಸೇರಿಸಲಾಗಿದೆ.

ಅಕ್ರಮ ಆನ್‌ಲೈನ್‌ ಗೇಮ್‌ ನಿಷೇಧಕ್ಕೆ ಶೀಘ್ರ ಕಾನೂನು!

ಯಾವ್ಯಾವ ಸಾಧನಗಳಲ್ಲಿ ಆಡುವ ಜೂಜು ನಿಷಿದ್ಧ?:

ಜೂಜಾಟದ ಹಾವಳಿಯನ್ನು ನಿಗ್ರಹಿಸುವುದಕ್ಕೆ ಸೈಬರ್‌ ತಾಣ, ಮೊಬೈಲ್‌ ಆ್ಯಪ್‌ ಮೂಲಕ ಜೂಜಾಟದ ಪ್ರಕ್ರಿಯೆಯಲ್ಲಿ ಮಾಹಿತಿ ತಂತ್ರಜ್ಞಾನ ಅಧಿನಿಯಮ-2000ರಲ್ಲಿ ಸೂಚಿಸಿರುವ ಎಲ್ಲಾ ಸಂವಹನ ಸಾಧನಗಳ ಬಳಕೆÜಯನ್ನೂ ನಿಷೇಧ ಮಾಡಲಾಗಿದೆ. ಹೀಗಾಗಿ ಕಂಪ್ಯೂಟರ್‌, ಕಂಪ್ಯೂಟರ್‌ ಸಿಸ್ಟಂ, ಮೊಬೈಲ್‌ ಆ್ಯಪ್‌, ಇಂಟರ್‌ನೆಟ್‌, ಸೈಬರ್‌ತಾಣ ಸೇರಿ ಯಾವುದೇ ಆನ್‌ಲೈನ್‌ ಹಾಗೂ ವರ್ಚುಯಲ್‌ ವೇದಿಕೆಗಳಲ್ಲೂ ಜೂಜು ಸಂಪೂರ್ಣ ನಿಷೇಧಿಸಲಾಗಿದೆ.

ಆನ್‌ಲೈನ್‌ ಜೂಜಿಗೆ ಶಿಕ್ಷೆ ಏನು?:

ಆನ್‌ಲೈನ್‌ ಜೂಜಾಟದಲ್ಲಿ ತೊಡಗುವ ಪ್ರಕರಣವನ್ನು ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಜೂಜಾಟದಲ್ಲಿ ತೊಡಗಿರುವವರು ಅಪರಾಧ ಸಾಬೀತಾದರೆ ಈ ಹಿಂದೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರು. ದಂಡವಿತ್ತು. ಈಗ ಅದನ್ನು ಮೂರು ವರ್ಷಕ್ಕೆ ಶಿಕ್ಷೆ ಹೆಚ್ಚಿಸಲಾಗಿದೆ ಹಾಗೂ ಕನಿಷ್ಠ 25 ಸಾವಿರ ರು.ಗಳಿಂದ ಗರಿಷ್ಠ 1 ಲಕ್ಷ ರು. ದಂಡಕ್ಕೆ ಅವಕಾಶ ನೀಡಿ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.
 

click me!