
ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಇಡೀ ವಿಶ್ವವನ್ನೇ ನಲುಗಿಸಿ, ಲಕ್ಷಾಂತರ ಜೀವಗಳನ್ನು ಬಲಿಪಡೆದಿದ್ದ ಮಹಾಮಾರಿ ಕೊರೋನಾ (ಕೋವಿಡ್-19) ಮತ್ತೆ ನಿಧಾನವಾಗಿ ಆತಂಕ ಸೃಷ್ಟಿಸಲು ಆರಂಭಿಸಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ಜೊತೆಗೆ ಸಾವುಗಳು ವರದಿಯಾಗುತ್ತಿರುವುದರಿಂದ ದೇಶಾದ್ಯಂತ ಮತ್ತೆ ಕೋವಿಡ್ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ತೀವ್ರ ನಿಗಾ ವಹಿಸಲು ಆದೇಶಿಸಿದೆ.
ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳು ನಿಧಾನಗತಿಯಲ್ಲಿ ತಲೆ ಎತ್ತುತ್ತಿವೆ. ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುವಂತಿದೆ. ಕಳೆದ ತಿಂಗಳು ರಾಜ್ಯದಲ್ಲಿ ಕೇವಲ 14 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈ ಚಾಲ್ತಿ ತಿಂಗಳಿನಲ್ಲಿ ಆ ಸಂಖ್ಯೆ ದಿಢೀರನೆ 32ಕ್ಕೆ ಏರಿಕೆಯಾಗಿದೆ. ಕೋವಿಡ್ ಲಕ್ಷಣಗಳಿರುವ ಸುಮಾರು 193 ಶಂಕಿತರನ್ನು ಆರೋಗ್ಯ ಇಲಾಖೆ ತಪಾಸಣೆಗೆ ಒಳಪಡಿಸಿದ್ದು, ಈ ಪೈಕಿ 32 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ರಾಜ್ಯದಲ್ಲಿ 32 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಕರ್ನಾಟಕದ ನೆರೆರಾಜ್ಯವಾದ ಆಂಧ್ರಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಆಂಧ್ರದಲ್ಲಿ ಸದ್ಯ 8 ಸಕ್ರಿಯ ಪ್ರಕರಣಗಳಿದ್ದರೂ, ಈಗಾಗಲೇ ಕೋವಿಡ್ ಸೋಂಕಿಗೆ ಇಬ್ಬರು ಬಲಿಯಾಗಿರುವುದು ಇಡೀ ದಕ್ಷಿಣ ಭಾರತವನ್ನು ಎಚ್ಚರಗೊಳ್ಳುವಂತೆ ಮಾಡಿದೆ. ಈ ಸಾವಿನ ವರದಿಗಳ ಬೆನ್ನಲ್ಲೇ ಆಂಧ್ರದ ಗಡಿ ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ತುಮಕೂರಿನ ಪಾವಗಡಲ್ಲಿ ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡಲಾಗಿದೆ.
ಆಂಧ್ರಪ್ರದೇಶದಲ್ಲಿ ಕೋವಿಡ್ ಸಾವುಗಳು ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಒಡಿಶಾ ಸರ್ಕಾರವು, ಆಂಧ್ರದ ಗಡಿಗೆ ಹೊಂದಿಕೊಂಡಿರುವ ತನ್ನ ಗಂಜಾಂ ಜಿಲ್ಲೆಯನ್ನು ಕಟ್ಟೆಚ್ಚರದಲ್ಲಿರಿಸಿದೆ. ಒಡಿಶಾ ಆರೋಗ್ಯ ಆಡಳಿತ ಮಂಡಳಿಯು ಜಿಲ್ಲೆಗೆ ಸಮಗ್ರ ಸಿದ್ಧತೆ ಮತ್ತು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆಂಧ್ರಪ್ರದೇಶ ಮತ್ತು ಗಂಜಾಂ ನಡುವೆ ಪ್ರತಿದಿನ ಸಾವಿರಾರು ಜನರು ಉದ್ಯೋಗ ಹಾಗೂ ವ್ಯಾಪಾರಕ್ಕಾಗಿ ಪ್ರಯಾಣಿಸುವುದರಿಂದ, ವೈರಸ್ ತೀವ್ರವಾಗಿ ಹರಡುವ ಸಾಧ್ಯತೆಯ ಬಗ್ಗೆ ಆತಂಕಗಳು ಹೆಚ್ಚಾಗಿವೆ. ಆದಾಗ್ಯೂ, ಆರೋಗ್ಯ ಅಧಿಕಾರಿಗಳು ನಿವಾಸಿಗಳು ಭಯಭೀತರಾಗದಂತೆ ಒತ್ತು ನೀಡಿದ್ದು, ಈಗ ಕೈಗೊಂಡಿರುವ ಎಲ್ಲಾ ಕ್ರಮಗಳು ಕೇವಲ ಮುನ್ನೆಚ್ಚರಿಕೆಗಾಗಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪ್ರಮುಖ ಸೂಚನೆಗಳನ್ನು ನೀಡಿದೆ.
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಮತ್ತು ಕೋವಿಡ್ ವಾರ್ಡ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಸೂಚಿಸಲಾಗಿದೆ.
ಕೆಮ್ಮು, ಜ್ವರ, ಶೀತ ಅಥವಾ ಉಸಿರಾಟದ ತೊಂದರೆಯಂತಹ ಕೋವಿಡ್ ಗುಣಲಕ್ಷಣಗಳು ಕಂಡುಬಂದರೆ ತಕ್ಷಣವೇ ಕೋವಿಡ್ ಪರೀಕ್ಷೆ (Testing) ಮಾಡಿಸಿಕೊಳ್ಳಲು ನಾಗರಿಕರಿಗೆ ತಿಳಿಸಲಾಗಿದೆ.
ಹಳೇ ದಿನಗಳು ಮರುಕಳಿಸದಂತೆ ತಡೆಯಲು ಸಾರ್ವಜನಿಕರು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸ್ವಯಂ ಮುನ್ನೆಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸಲಹೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ