
ಬೆಂಗಳೂರು (ಜು.15): ಕಸದಿಂದ ಸ್ವಾತಂತ್ರ್ಯ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಲು ‘ಕಸ ಮುಕ್ತ ಬೆಂಗಳೂರು’ ಹೆಸರಿನ ವಿಶೇಷ ಅಭಿಯಾನವನ್ನು ಆಗಸ್ಟ್ 1ರಿಂದ 1 ತಿಂಗಳು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಂಗಳವಾರ ಜಿಬಿಎ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಜಿಬಿಎ ವ್ಯಾಪ್ತಿಯಲ್ಲಿರುವ ಕಸ, ವಿವಿಧ ಮಾದರಿಯ ತ್ಯಾಜ್ಯ, ಕಟ್ಟಡಗಳ ಭಗ್ನಾವಶೇಷಗಳು, ಮಣ್ಣಿನ ಗುಡ್ಡೆಗಳು, ಬ್ಲ್ಯಾಕ್ ಸ್ಪಾಟ್‌ಗಳು ಹಾಗೂ ಗಿಡ, ಗಂಟಿಗಳನ್ನು ಈ ವಿಶೇಷ ಅಭಿಯಾನದಡಿ ತೆರವುಗೊಳಿಸಲಾಗುತ್ತದೆ. ಪಾಲಿಕೆ, ಕೆ-ರೈಡ್, ರೈಲ್ವೆ ಹಾಗೂ ನಮ್ಮ ಮೆಟ್ರೋ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳ ಸಹಯೋಗದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದಿಂದ ಈಗಾಗಲೇ ಸುಮಾರು 1,616 ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಅಲ್ಲಿ ಸುಮಾರು 22,732 ಟನ್‌ನಷ್ಟು ಕಸ ಸಂಗ್ರಹವಾಗುತ್ತಿರುವ ಮಾಹಿತಿ ಇದೆ. ಈ ಕಸವನ್ನು ವಿಶೇಷ ಅಭಿಯಾನದ ವೇಳೆ ಸಂಪೂರ್ಣವಾಗಿ ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ಮತ್ತೆ ಅಲ್ಲಿ ಕಸ ಬೀಳದಂತೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುವ ಬಗ್ಗೆ ಸಮಗ್ರ ಯೋಜನೆ ರೂಪಿಸುವಂತೆ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಈವರೆಗೆ 10,000ಕ್ಕೂ ಹೆಚ್ಚು ಅಂಗಡಿಗಳ ವಿವಿಧ ರೀತಿಯ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಕೇವಲ 1,500 ಬೀದಿ ವ್ಯಾಪಾರಿಗಳಿಗೆ ಮಾತ್ರ ಸ್ಥಳಾಂತರಿಸಬೇಕಾಗುತ್ತದೆ. ಇನ್ನು ಒಮ್ಮೆ ಒತ್ತುವರಿ ತೆರವುಗೊಳಿಸಿದ ರಸ್ತೆ ಅಥವಾ ಪಾದಚಾರಿ ಮಾರ್ಗಗಳಲ್ಲಿ ಮತ್ತೆ ಒತ್ತುವರಿ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಅಂತಹವರಿಗೆ ಭಾರಿ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಸೇರಿದಂತೆ ಇತರ ಅಧಿಕಾರಿಗಳಿದ್ದರು.
ಖಾಸಗಿ ಒಡೆತನದ ಖಾಲಿ ಜಾಗಗಳಲ್ಲಿ ಅನೇಕ ವರ್ಷಗಳಿಂದ ಕಸ ಮತ್ತಿತರ ತ್ಯಾಜ್ಯ ಬಿದ್ದಿದೆ. ಅದನ್ನು ಅವರು ಕೂಡಲೇ ತೆರವುಗೊಳಿಸಿ ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆ.15ರವರೆಗೆ ಗಡುವು ನೀಡಲಾಗುತ್ತದೆ. ಆ.15ರ ನಂತರ ಅಂತಹ ಜಾಗಗಳನ್ನು ಪಾಲಿಕೆ ವತಿಯಿಂದ ಸ್ವಚ್ಛಗೊಳಿಸಲಾಗುತ್ತದೆ. ಅದಕ್ಕೆ ತಗುಲುವ ವೆಚ್ಚವನ್ನು ಮಾಲೀಕರಿಂದಲೇ ಭರಿಸಿಕೊಳ್ಳಲಾಗುತ್ತದೆ. ಅದನ್ನು ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಘೋಷಿಸಿದ್ದಾರೆ.
ಖಾಸಗಿ ಸ್ವತ್ತುಗಳಲ್ಲಿ ಬಿದ್ದಿರುವ ಕಸ ತೆರವುಗೊಳಿಸಲು 1 ತಿಂಗಳು ಕಾಲಾವಕಾಶವಿದೆ. ನಂತರ ಪಾಲಿಕೆಯಿಂದಲೇ ಅಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಆಸ್ತಿ ತೆರಿಗೆಯ ಜೊತೆಗೆ ಶುಲ್ಕ ವಸೂಲಿ ಮಾಡಲಾಗುತ್ತದೆ.
ಕೃಷ್ಣ ಬೈರೇಗೌಡ, ಬೆಂಗಳೂರು ನಗರಾಭಿವೃದ್ಧಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ