ನಿನ್ನೆ ರಾಜ್ಯದಲ್ಲಿ 25 ಕೇಸು: ಕೊಂಚ ನಿರಾಳ

By Kannadaprabha NewsFirst Published Apr 19, 2020, 7:08 AM IST
Highlights

ನಿನ್ನೆ ರಾಜ್ಯದಲ್ಲಿ 25 ಕೇಸು: ಕೊಂಚ ನಿರಾಳ| ವಿಜಯಪುರದಲ್ಲಿ ಕೊರೋನಾ ಸೋಂಕಿತ ಹೃದಯಾಘಾತಕ್ಕೆ ಬಲಿ| ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ| ನಿನ್ನೆ ಮೈಸೂರಲ್ಲಿ 7, ಬಾಗಲಕೋಟೆಯಲ್ಲಿ 7 ಕೇಸ್‌ ಪತ್ತೆ| ತಬ್ಲೀಘಿಗಳಿಂದ ಸೋಂಕು ಅಂಟಿದವರ ಸಂಖ್ಯೆ 100!

ಬೆಂಗಳೂರು(ಏ.19): ಕಳೆದ ನಾಲ್ಕೈದು ದಿನಗಳಿಂದ ಹೆಚ್ಚಾಗುತ್ತಲೇ ಸಾಗಿದ್ದ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಶನಿವಾರದ ಮಟ್ಟಿಗೆ ಕೊಂಚ ಇಳಿಮುಖವಾಗಿದ್ದು, ಹೊಸದಾಗಿ 25 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಕೋವಿಡ್‌​-19 ಸೋಂಕಿತರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ.

ಈ ಮಧ್ಯೆ, ಏ.16ರಂದು ಹೃದಯಾಘಾತದಿಂದ ಮೃತಪಟ್ಟಿದ್ದ 42 ವರ್ಷದ ವಿಜಯಪುರ ಜಿಲ್ಲೆಯ ವ್ಯಕ್ತಿಗೆ ಕೊರೋನಾ ಸೋಂಕಿತ್ತೆಂಬುದು ಇದೀಗ ದೃಢಪಟ್ಟಿದೆ. ಇಬ್ಬರು ಸೋಂಕಿತರ ಸಂಪರ್ಕದಿಂದ ಮೃತ ವ್ಯಕ್ತಿಗೆ ಸೋಂಕು ತಗುಲಿದೆ. ಇದರಿಂದ ಒಟ್ಟು ಮೃತ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆಯಲ್ಲದೆ, ಈ ಮೃತ ವ್ಯಕ್ತಿಯೇ ಸೋಂಕಿತರಲ್ಲಿ ಅತಿ ಕಿರಿಯ ವಯಸ್ಸಿನವರಾಗಿದ್ದಾರೆ. ಗದಗದಲ್ಲಿ ಮಾ.8ರಂದು ಮೃತಪಟ್ಟಿದ್ದ ಕೊರೊನಾ ಸೋಂಕಿತ ವೃದ್ಧೆ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ವರದಿಯಾಗಿರುವುದು ಆತಂಕ ಸೃಷ್ಟಿಸಿದೆ.

ಸಿಎಂ ಹೇಳಿಕೆ ವಾಪಸ್: ಲಾಕ್ ಡೌನ್ ಸಡಿಲಿಕೆ ಹಿಂಪಡೆದ ರಾಜ್ಯ ಸರ್ಕಾರ...!

ಹೊಸ 25 ಕೋವಿಡ್‌ ಪಾಸಿಟಿವ್‌ ಪ್ರಕರಣಗಳಲ್ಲಿ ಬಾಗಲಕೋಟೆಯಲ್ಲಿ 7, ಮೈಸೂರಿನಲ್ಲಿ 7, ಬಿಬಿಎಂಪಿ ವ್ಯಾಪ್ತಿಯಲ್ಲಿ 3, ಕಲಬುರಗಿ ಮತ್ತು ವಿಜಯಪುರದಲ್ಲಿ ತಲಾ 2, ಬೆಳಗಾವಿ, ಧಾರವಾಡ, ಮಂಡ್ಯ ಮತ್ತು ಗದಗದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ಇದರಲ್ಲಿ ಮೈಸೂರಿನ ಏಳರಲ್ಲಿ ಆರು ಪ್ರಕರಣಗಳು ನಂಜನಗೂಡಿನ ಜ್ಯುಬಿಲಿಯೆಂಟ್‌ ಫಾರ್ಮಾ ಕಂಪನಿಯ ಕೆಲ ಸೋಂಕಿತ ನೌಕರರ 2ನೇ ಸಂಪರ್ಕ ಹೊಂದಿದ್ದವರದ್ದಾಗಿದೆ. ಇನ್ನೊಂದು ಪ್ರಕರಣ ತೀವ್ರ ಉಸಿರಾಟದ ಸಮಸ್ಯೆಯಿಂದ ಪರೀಕ್ಷೆಗೊಳಪಡಿಸಿದಾಗ ದೃಢಪಟ್ಟಿದೆ. ಇನ್ನು, ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ತಬ್ಲೀಘಿಗಳ ಸಂಪರ್ಕದ ಮತ್ತೊಂದು ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ತಬ್ಲಿಘಿಗಳಿಂದ ದೃಢಪಟ್ಟಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 100ಕ್ಕೆ ಮುಟ್ಟಿದೆ.

ಹೋಂ ಕ್ವಾರಂಟೈನ್‌ನಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಲ್ಲ:

ಬಹುತೇಕ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರ ಮನೆ ಕ್ವಾರಂಟೈನ್‌ ಅವಧಿ ಮುಗಿದಿದೆ. ಹಾಗಾಗಿ ಈಗ ಯಾವುದೇ ಪ್ರಯಾಣಿಕರು ಮನೆ ಕ್ವಾರಂಟೈನ್‌ನಲ್ಲಿ ಇಲ್ಲ. ಆದರೆ, 516 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇನ್ನು, ರಾಜ್ಯದಲ್ಲಿ ಇದುವರೆಗೆ ಒಟ್ಟು 24,424 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಇದರಲ್ಲಿ 19,186 ಜನರ ವರದಿಗಳು ಬಂದಿದ್ದು, ಅವುಗಳಲ್ಲಿ 15,658 ಜನರಿಗೆ ನೆಗೆಟಿವ್‌ ಬಂದಿದೆ. 384 ಜನರಿಗೆ ಪಾಸಿಟಿವ್‌ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕದ 3535 ಜನ ಮತ್ತು ದ್ವಿತೀಯ ಸಂಪರ್ಕದ 8362 ಜನರನ್ನು ಮನೆ ಕ್ವಾರಂಟೈನ್‌ ಮಾಡಿ ನಿಗಾ ವಹಿಸಲಾಗಿದೆ. 791 ಜನರನ್ನು ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ ಮಾಡಿ ನಿಗಾ ವಹಿಸಲಾಗಿದೆ ಎಂದು ವಿವರಿಸಿದರು.

ಕೊರೋನಾ ಲಾಕ್‌ಡೌನ್ ಮಧ್ಯೆ ಬಂಧಿಯಾಗಿದ್ದ ಮೂವರು ಕಾರ್ಮಿಕರು ಸಾವು..!

ಒಂದೇ ದಿನ 16 ಜನ ಡಿಸ್ಚಾಜ್‌ರ್‍:

ಶನಿವಾರ ಒಂದೇ ದಿನ ಮೈಸೂರಿನಲ್ಲಿ 10 ಜನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟು 16 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು 384 ಸೋಂಕಿತರ ಪೈಕಿ ಇದುವರೆಗೆ ಡಿಸ್ಚಾಜ್‌ರ್‍ ಆದವರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಉಳಿದ 266 ಜನರು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 14 ಜನ ಸೋಂಕಿತರು ಮೃತಪಟ್ಟಿದ್ದಾರೆ.

click me!