ಕೊರೋನಾ ಲಾಕ್‌ಡೌನ್ ಮಧ್ಯೆ ಬಂಧಿಯಾಗಿದ್ದ ಮೂವರು ಕಾರ್ಮಿಕರು ಸಾವು..!
ಒಂದೆಡೆ ಕೊರೋನಾ ಭೀತಿಯ ಮಧ್ಯೆ ಸಿಡಿಲಿನ ಆರ್ಭಟಕ್ಕೆ ಮೂವರು ಮಹಿಳಾ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಒಂದು ರೀತಿಯಲ್ಲಿ ಕೊರೋನಾವೇ ಸಿಡಿಲಿನ ರೂಪದಲ್ಲಿ ಈ ಮೂವರನ್ನು ಬಲಿ ಪಡೆದುಕೊಂಡಿದೆ.
ಚಿಕ್ಕಮಗಳೂರು, (ಏ.18): ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ತೋಟದ ಮಹಿಳಾ ಕಾರ್ಮಿಕರು ಮೃತಪಟ್ಟಿರುವ ಘಟನೆ ಶನಿವಾರ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಜ್ಯೋತಿ (28), ಮಾದಮ್ಮ (65), ಮಾರಿ (27) ತೋಟದ ಕಾರ್ಮಿಕರು ಎಂದು ಗುರುತಿಸಲಾಗಿದೆ. ಮಾದಮ್ಮ ಹಾಗೂ ಜ್ಯೋತಿ ತಾಯಿ ಮಗಳಾಗಿದ್ದು, ಮಾರಿ ಸಂಬಂಧಿ ಎಂದು ತಿಳಿದು ಬಂದಿದೆ.
ಶನಿವಾರ ಸಂಜೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುಡುಗು ಸಿಡಿಲು ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಈ ವೇಳೆ ಹಿತ್ಲುಮಕ್ಕಿ ಗ್ರಾಮದ ಲೈನ್ ಮನೆಗಳ ಮುಂದೆ ನಿಂತಿದ್ದ ಮೂವರು ಮಹಿಳೆರಿಗೆ ಸಿಡಿಲು ಬಡಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಮಿಳುನಾಡು ರಾಜ್ಯದ ಸೇಲಂ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ತಾಲೂಕಿನವರಾಗಿದ್ದು ಕಳೆದ ಕೆಲ ತಿಂಗಳ ಹಿಂದೆ 14 ಕಾರ್ಮಿಕರ ಕುಟುಂಬ ಕಾಫಿ ಕಟಾವು ಕೆಲಸಕ್ಕೆಂದು ವಲಸೆ ಬಂದಿದ್ದರು.
ಕಳಸ ಪಟ್ಟಣದ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿ ಗಜೇಂದ್ರ ಅವರ ಕಾಫಿತೋಟದಲ್ಲಿ ಕೆಲ ತಿಂಗಳುಗಳಿಂದ ಕೆಲಸ ಮಾಡಿಕೊಂಡಿದ್ದ ಈ ಕಾರ್ಮಿಕರು ಲಾಕ್ ಡೌನ್‍ನಿಂದ ತಮ್ಮ ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲೇ ಉಳಿದುಕೊಂಡಿದ್ದು, ಇದೀಗ ಕೊರೋನಾ ಸಿಡಿಲಿನ ರೂಪದಲ್ಲಿ ಬಂದು ಪ್ರಾಣ ತೆಗೆದಿದೆ ಎಂದು ಹೇಳಬಹುದು.