Religious Conversion: ಮತಾಂತರ ನಿಷೇಧ ಮಸೂದೆಗೆ ವಿರೋಧ: ಡಿಕೆಶಿ

By Kannadaprabha News  |  First Published Dec 10, 2021, 8:20 AM IST

*   ರಾಜ್ಯದಲ್ಲಿ ಈಗಾಗಲೇ ಬಲವಂತದ ಮತಾಂತರ ತಡೆಗೆ ಕಾಯ್ದೆ ಇದೆ
*   ಹೊಸ ಪ್ರಸ್ತಾಪ ರಾಜಕೀಯ ಪ್ರೇರಿತ, ಅದಕ್ಕೆ ಕಾಂಗ್ರೆಸ್‌ ವಿರೋಧವಿದೆ
*   ಮತಾಂತರ ಹಾವಳಿ ತಡೆಗೆ ಕಾಯ್ದೆ ಅಗತ್ಯ: ಪೇಜಾವರಶ್ರೀ
 


ಬೆಂಗಳೂರು(ಡಿ.10):  ರಾಜ್ಯದಲ್ಲಿ(Karnataka) ಮತಾಂತರ ತಡೆಯಲು ಹೊಸ ಕಾಯ್ದೆ ಅಗತ್ಯವಿಲ್ಲ. ರಾಜ್ಯ ಸರ್ಕಾರವು ಬೆಳಗಾವಿ ಅಧಿವೇಶನದಲ್ಲಿ ರಾಜಕೀಯ ಪ್ರೇರಿತವಾಗಿ ಹೊಸದಾಗಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆ ಮಾಡಿದರೆ ಕಾಂಗ್ರೆಸ್‌ ಪಕ್ಷ ಅದನ್ನು ಸಂಪೂರ್ಣವಾಗಿ ವಿರೋಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ(Bengaluru) ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒತ್ತಾಯ ಪೂರ್ವಕವಾಗಿ ಮತಾಂತರ(Conversion) ಮಾಡುವುದನ್ನು ತಡೆಯಲು ಈಗಾಗಲೇ ಕಾಯ್ದೆ ಇದೆ. ಈಗಾಗಲೇ ಅಸ್ತಿತ್ವದಲ್ಲಿರುವ ಕಾಯಿದೆಗೆ ದುರುದ್ದೇಶದಿಂದ ಹೆಚ್ಚುವರಿ ತಿದ್ದುಪಡಿ ತರುವುದನ್ನು ಕಾಂಗ್ರೆಸ್‌(Congress) ಸಂಪೂರ್ಣವಾಗಿ ವಿರೋಧಿಸಲಿದೆ. ಬಿಜೆಪಿ ಸರ್ಕಾರವು(BJP Government) ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ದ್ವೇಷದ ರಾಜಕೀಯ(Politics) ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

Tap to resize

Latest Videos

undefined

Religious Conversion: ಶಾಲೆಯೊಳಗೆ ಪರೀಕ್ಷೆ ಬರೆಯುತ್ತಿದ್ದ ಮಕ್ಕಳು, ಕಲ್ಲು ತೂರಾಟ ನಡೆಸಿದ ಹಿಂದೂ ಸಂಘಟನೆ!

ನಮ್ಮ ಸಂವಿಧಾನದಲ್ಲಿ(Constitution) ಎಲ್ಲ ಧರ್ಮಗಳಿಗೂ(Religion), ಸಮುದಾಯಗಳಿಗೂ ಸಮಾನ ಗೌರವವಿದೆ. ಧಾರವಾಡ(Dharwad), ಕೊಡಗು(Kodagu) ಮತ್ತಿತರ ಕಡೆ ಈಗಾಗಲೇ ಏನೇನಾಗಿದೆ ಎಂಬುದನ್ನು ನೋಡಿದ್ದೇವೆ. ನಮ್ಮದು ಜಾತ್ಯತೀತ ದೇಶ(Secular Country) ಹಾಗೂ ರಾಜ್ಯ. ಇಡೀ ವಿಶ್ವ ನಮ್ಮನ್ನು ಗಮನಿಸುತ್ತಿದೆ. ಚರ್ಚ್‌ಗಳ(Church) ಮೇಲೆ ದಾಳಿ ಮಾಡುವುದು, ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ. ಬಿಜೆಪಿ ಸರ್ಕಾರ ದುಸ್ಸಾಹಸಕ್ಕೆ ಕೈ ಹಾಕಬಾರದು. ಇದರಿಂದ ರಾಜ್ಯದ ಗೌರವಕ್ಕೆ ಧಕ್ಕೆ ಉಂಟಾಗುವುದಲ್ಲದೆ ಕಾನೂನು ಮತ್ತು ಸುವ್ಯವಸ್ಥೆಗೂ ಭಂಗ ಉಂಟಾಗಲಿದೆ ಎಂದು ಹೇಳಿದರು.

ಬಂಡವಾಳ ಹರಿದು ಬರುವುದು ನಿಲ್ಲಲಿದೆ:

ಕ್ರೈಸ್ತ(Christian) ಸಮುದಾಯ ಶಿಕ್ಷಣ, ಆರೋಗ್ಯ ಮತ್ತಿತರ ಸಮಾಜ ಸೇವೆಗಳ ಮೂಲಕ ಗಮನ ಸೆಳೆದಿದೆ. ಗೌರವದಿಂದ ಸೇವೆ ಮಾಡುತ್ತಾ ಬಂದಿದೆ. ಅವರ ಮನಸ್ಸಿಗೆ ನೋವುಂಟು ಮಾಡುವುದು ಸರಿಯಲ್ಲ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಬಗ್ಗೆ ಕೆಟ್ಟಸಂದೇಶ ರವಾನೆಯಾಗಲಿದೆ. ಇದರಿಂದ ಹರಿದು ಬರುತ್ತಿರುವ ಬಂಡವಾಳವೂ ನಿಲ್ಲಬಹುದು ಎಂದು ಎಚ್ಚರಿಸಿದರು.

ಇದೇ ವೇಳೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ತಿರಸ್ಕರಿಸಬೇಕು ಎಂದು ರಾಜ್ಯ ಚುನಾವಣೆ ಆಯೋಗದ ಮೂಲಕ ಕೇಂದ್ರ ಚುನಾವಣೆ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಮತಾಂತರ ಹಾವಳಿ ತಡೆಗೆ ಕಾಯ್ದೆ ಅಗತ್ಯ: ಪೇಜಾವರಶ್ರೀ

ಉಡುಪಿ(Udupi): ಮಂಗಳೂರಿನಲ್ಲಿ ಇಬ್ಬರು ಮಕ್ಕಳೂ ಸೇರಿ ನಾಲ್ಕು ಮಂದಿ ಆತ್ಮಹತ್ಯೆಗೆ(Suicide) ಶರಣಾಗಿರುವ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಪೇಜಾವರ ವಿಶ್ನಪ್ರಸನ್ನ ತೀರ್ಥ ಸ್ವಾಮೀಜಿ(Pejavara Vishwaprasanna Teertha Swamiji) ಮತಾಂತರದ ಹಾವಳಿಯನ್ನು ಸರ್ಕಾರ ಕಾಯ್ದೆಯ ಮೂಲಕ ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ. 

ಮಂಗಳೂರಿನಲ್ಲಿ(Mangaluru) ಇಡೀ ಕುಟುಂಬವೇ ಮತಾಂತರದ ಹಾವಳಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರಂತ. ಮನಃಪೂರ್ವಕವಾಗಿ ಯಾರಾದರೂ ಮತಾಂತರವಾದರೆ ನಮ್ಮ ಆಕ್ಷೇಪವಿಲ್ಲ, ಆದರೆ ಒತ್ತಡ ಆಮಿಷ- ಬಲವಂತದಿಂದ ಮತಾಂತರ ಮಾಡಿದರೆ ಅದನ್ನು ಸಹಿಸಲಾಗುವುದಿಲ್ಲ. ಇದು ಸಮಾಜ ಒಡೆಯುವ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಸೃಷ್ಟಿಯಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.

Religious Conversion: ಬಿಜೆಪಿ ಸರ್ಕಾರದಲ್ಲಿಯೇ ಗೋ ಕಳ್ಳತನ, ಮತಾಂತರ ಹೆಚ್ಚು: ಮುತಾಲಿಕ್‌

ಮತಾಂತರ ನಿಷೇಧ ಕಾಯ್ದೆ ಜಾರಿ ಬೇಡ

ಧಾರವಾಡ(Dharwad):  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತಾಂತರ ನಿಷೇಧ ಕಾಯ್ದೆ(Conversion Prohibition Act) ಜಾರಿಗೆ ತರಲು ಉದ್ದೇಶಿಸಿದ್ದು ಖಂಡನೀಯ ಎಂದು ಇಲ್ಲಿಯ ಹೋಲಿ ಕ್ರಾಸ್‌ ಚರ್ಚ್ ನೇತೃತ್ವದಲ್ಲಿ ಕ್ರೈಸ್ತ ಬಂಧುಗಳು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ(Governor) ಮನವಿ ಸಲ್ಲಿಸಿದ್ದರು.

ಭಾರತ ಜಾತ್ಯತೀತ ತಳಹದಿಯ ಮೇಲೆ ರಚನೆಯಾಗಿದೆ. ಡಾ. ಬಿ.ಆರ್‌. ಅಂಬೇಡ್ಕರ್‌(Dr BR Ambedkar) ನೀಡಿದ ಸಂವಿಧಾನದ ಆಧಾರದ ಮೇಲೆ ಸುವ್ಯವಸ್ಥಿತವಾಗಿ ಆಡಳಿತ ನಡೆಯುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನಾವು ಭಾರತೀಯರು ಎಂದು ಸಹಜೀವನ ನಡೆಸುತ್ತಿದ್ದೇವೆ. ಸಂವಿಧಾನದಲ್ಲಿಯೇ ಯಾವುದೇ ಧರ್ಮವನ್ನು ನಂಬಿ ಆಚರಿಸಲು ಮತ್ತು ಸ್ವೀಕರಿಸಲು ಅವಕಾಶ ನೀಡಿದೆ. ಇಂತಹ ಸಂದರ್ಭದಲ್ಲಿ ಏತಕ್ಕೆ ಮತಾಂತರ ನಿಷೇಧ ಕಾಯ್ದೆ ಎಂದು ಪ್ರಶ್ನಿಸಿದರು.
 

click me!