ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದ ಘಟನೆ ನಡೆದಿದೆ. ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿ ಈ ದಾಳಿ ನಡೆದಿದ್ದು, ಮುನಿರತ್ನ ಅವರಿಗೆ ಗಾಯಗಳಾಗಿವೆ.
ಬೆಂಗಳೂರು (ಡಿ.25): ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರೂ ಆಗಿರುವ ಶಾಸಕ ಮುನಿರತ್ನ ಅವರು ದಿ.ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ತಲೆಯ ಮೇಲೆ ಮೊಟ್ಟೆಯನ್ನು ಎಸೆದಿದ್ದಾರೆ. ಮೊಟ್ಟೆ ದಾಳಿಯಿಂದ ಗಾಯಗೊಂಡ ಶಾಸಕ ಮುನಿರತ್ನ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆ ಬಗ್ಗೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನ ಲಗ್ಗೆರೆ ಬಳಿಯ ಲಕ್ಷ್ಮೀದೇವಿ ನಗರದಲ್ಲಿ ಬುಧವಾರ ಮಧ್ಯಾಹ್ನ 12.30ಕ್ಕೆ ಶಾಸಕ ಮುನಿರತ್ನ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಕಾಂಗ್ರೆಸ್ ಕಾರ್ಯಕರ್ತರಿಂದ ಮೊಟ್ಟೆ ಎಸೆತ ಘಟನೆ ನಡೆದಿದೆ. ಇನ್ನು ಮೊಟ್ಟೆ ಎಸೆದ ಕೂಡಲೇ ತಲೆಗೆ ಪೆಟ್ಟಾಗಿದ್ದು, ಬಿಜೆಪಿ ಕಾರ್ಯಕರ್ತರು ಅವರನ್ನು ಸುತ್ತುವರಿದು ನಿಂತು ಮೊಟ್ಟೆ ಎಸೆದವರಿಗೆ ಹುಡುಕಿದ್ದಾರೆ. ಇನ್ನು ಮೊಟ್ಟೆ ಎಸೆದಿದ್ದಾರೆ ಎನ್ನಲಾದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಗಾಯಗೊಂಡ ಮುನಿರತ್ನ ಅವರು ಸ್ಥಳದಲ್ಲಿ ಕೆಲಹೊತ್ತು ಕುಳಿತು ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸುವಂತೆ ಪ್ರತಿಭಟನೆ ಮಾಡಿದರು.
undefined
ಕೆಲಹೊತ್ತಿನ ನಂತರ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಮುನಿರತ್ನ ತೆರಳಿದ ಬಳಿಕವೂ ಕಾಂಗ್ರೆಸ್ ಕಾರ್ಯಕರ್ತರು ವಾಜಿಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗವಹಿಸಬಾರದು ಎಂದು ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಅಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರು ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ: ದಾಸನ ಗೆಳತಿ ಪವಿತ್ರಾ ಗೌಡ ಜೊತೆಗೆ ಲಿಂಕ್ ಹೊಂದಿದ್ದ ವರ್ತೂರು ಪ್ರಕಾಶ್‌ನ ಚಿನ್ನದ ರಾಣಿ ಶ್ವೇತಾ ಗೌಡ!
ಈ ಕುರಿತು ಮಾತನಾಡಿದ ಶಾಸಕ ಮುನಿರತ್ನ ಅವರು, ನಮ್ಮ ಕ್ಷೇತ್ರದಲ್ಲಿ ವಾಜಪೇಯ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬಂದಿದ್ದೆ. 100-150 ಜನರು ಒಟ್ಟಿಗೆ ದಾಳಿ ಮಾಡಿದ್ದು, ನನ್ನ ಕೊಲೆಗೆ ಸಂಚು ಮಾಡಿದ್ದರು. ಆದರೆ, ಇಲ್ಲಿ ಪೊಲೀಸರು ಇದ್ದಿದ್ದರಿಂದ ನಾನು ಉಳಿದಿದ್ದೇನೆ. ಪೊಲೀಸರು ನನಗೆ ಪುನರ್ ಜನ್ಮ ಕೊಟ್ಟಿದ್ದಾರೆ. ಕೊಲೆ ಬೆದರಿಕೆಯ ಬಗ್ಗೆ ವಕೀಲರು ನನಗೆ ತಿಳಿಸಿದ್ದಾರೆ. ನಾನು ಪ್ರಧಾನಿ, ಸಿಬಿಐ ಅವರಿಗೆ ಪತ್ರ ಬರೆದಿದ್ದೆ. ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಪರಾಜಿತ ಅಭ್ಯರ್ಥಿ ಕುಸುಮಾ ಮೇಲೆ ದೂರು ನೀಡಿದ್ದೇನೆ. ನನ್ನ ಕೊಲೆಯಾಗುತ್ತದೆ ಅನ್ನೋ ಭಯಕ್ಕೆ ಸಂಬಂಧಿಸಿ ದೂರು ನೀಡಿದ್ದೇನೆ ಎಂದು ಹೇಳಿದರು.
ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಸಿದಂತೆ ಪೊಲೀಸರಿಗೆ ಗಲಾಟೆ ಆಗುತ್ತೆ ಎಂದು ಮುಂಚಿತವಾಗಿ ಗೊತ್ತಿತ್ತು. ಹೀಗಾಗಿಯೇ ಪೊಲೀಸರು ಮುಂಚಿತವಾಗಿ ಭದ್ರತೆ ಕೈಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಓಡಾಡಿದ್ದ ವ್ಯಕ್ತಿಗಳು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 30 ಮಂದಿಯನ್ನ ಪೊಲೀಸರು ವಶಕ್ಕೆ ಪಡೆದು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಆದರೆ, ಉಳಿದ ಕೆಲವರು ಪ್ರತಿಭಟನೆ ಮಾತ್ರ ಮಾಡುತ್ತಾರೆ, ಯಾವುದೇ ಗಲಾಟೆ ಅಥವಾ ಅಹಿತಕರ ಘಟನೆ ಎಸಗುವುದಿಲ್ಲ ಎಂದು ಅಂದಾಜಿಸಿದ್ದರು. ಮೊಟ್ಟೆ ಎಸೆಯುತ್ತಾರೆ ಅನ್ನೋದು ಪೊಲೀಸರು ಕೂಡ ಊಹಿಸಿರಲಿಲ್ಲ. ಹೀಗಾಗಿ, ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು ವಿಕೃತಿ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜಾತಿ ನಿಂದನೆ ಕೇಸ್: ಬಿಜೆಪಿ ಶಾಸಕ ಮುನಿರತ್ನ ಅಮಾನತಿಗೆ ಕಾಂಗ್ರೆಸ್ ಆಗ್ರಹ