ಭಾರತಾಂಬೆ ರಕ್ಷಣೆಯಲ್ಲಿ ಹುತಾತ್ಮರಾದ ಕನ್ನಡಾಂಬೆಯ 3 ಮಕ್ಕಳು; ಮೂವರು ಹುತಾತ್ಮ ಯೋಧರ ವಿವರ ಇಲ್ಲಿದೆ..!

By Sathish Kumar KH  |  First Published Dec 25, 2024, 2:05 PM IST

ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸೇನಾ ವಾಹನವೊಂದು 350 ಅಡಿ ಕಮರಿಗೆ ಬಿದ್ದು, ಐವರು ಯೋಧರು ಹುತಾತ್ಮರಾಗಿದ್ದಾರೆ. ಈ ದುರಂತದಲ್ಲಿ ಕರ್ನಾಟಕದ ಮೂವರು ಯೋಧರು ಸೇರಿದ್ದಾರೆ. ಇವರ ವಿವರ ಇಲ್ಲಿದೆ..


ಬೆಂಗಳೂರು (ಡಿ.25): ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕನ್ನಡಾಂಬೆಯ ಮೂವರು ಮಕ್ಕಳು (ಕರ್ನಾಟಕದ ಮೂಲದ ಮೂವರು ಯೋಧರು) ಸೇರಿದಂತೆ ಒಟ್ಟು ಐವರು ಯೋಧರು ಜಮ್ಮುವಿನ ಪೂಂಚ್ ಜಿಲ್ಲೆಯ ಗಡಿರೇಖೆ ಬಳಿ ಭೂಕುಸಿತದಿಂದ 350 ಅಡಿ ಕಮರಿಗೆ ಬಿದ್ದ ಸೇನಾ ವಾಹನದಲ್ಲಿ ಹುತಾತ್ಮರಾಗಿದ್ದಾರೆ. ಇಲ್ಲಿದೆ ಮೂವರು ಯೋಧರ ವಿವರ..

ಬೆಳಗಾವಿಯ ಸುಬೇದಾರ್ ದಯಾನಂದ ತಿರಕಣ್ಣವರ: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿರೇಖೆ ಬಳಿ ಭೂಕುಸಿತದ ವೇಳೆ ಹುತಾತ್ಮರಾದ ಯೋಧರ ಪೈಕಿ ಬೆಳಗಾವಿ ತಾಲೂಕಿನ ಸಾಂಬ್ರಾ‌ ಗ್ರಾಮದ ಯೋಧ ದಯಾನಂದ ತಿರಕಣ್ಣವರ ಹುತಾತ್ಮರಾಗಿದ್ದಾರೆ. ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ತಿರಕಣ್ಣವರ ಅವರು ಗಡಿ ರೇಖೆ ಬಳಿ ಗಸ್ತು ತಿರುಗುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ವೇಳೆ ಬೆಳಗಾವಿ ಜಿಲ್ಲೆಯ ಒಬ್ಬ ಯೋಧ ಸೇರಿ ಕರ್ನಾಟಕದ ಮೂವರು ಯೋಧರು ದುರ್ಮರಣ ಹೊಂದಿದ್ದಾರೆ. ಘಟನೆಯಿಂದ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹುತಾತ್ಮ ಯೋಧನ ಪಾರ್ಥಿವಶರೀರ ನಾಳೆ ಬೆಳಗಾವಿಗೆ ಬರುವ ಸಾಧ್ಯತೆಯಿದೆ.

Tap to resize

Latest Videos

undefined

ಉಡುಪಿ ಯೋಧ ಅನೂಪ್ ಪೂಜಾರಿ: ಜಮ್ಮುವಿನ ಕಾಶ್ಮೀರ್ ಪುಂಚ್‌ ಗಡಿ ರೇಖೆಯ ಬಳಿ ನಡೆದ ಸೇನಾವಾಹನ ದುರಂತದಲ್ಲಿ ಮರಾಠಾ ರೆಜಮೇಂಟ್‌ನ ಐವರು ಯೋಧರ ಹುತಾತ್ಮರ ಪೈಕಿ ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಬಿಜಾಡಿಯ ಯೋಧ ಅನೂಪ್ ಪೂಜಾರಿ (33) ಕೂಡ ಹುತಾತ್ಮರಾಗಿದ್ದಾರೆ. ಪುಂಚ್ ಪ್ರದೇಶದಲ್ಲಿ ಮಂಜುಗಡ್ಡೆಯಲ್ಲಿ ಕುಸಿತವಾಗಿದ್ದರಿಂದ ಸೇನಾ ವಾಹನ ಜಾರಿ 350 ಅಡಿ ಕಂದಕಕ್ಕೆ ಬಿದ್ದಿದೆ. ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೆಲವೇ ವರ್ಷಗಳಲ್ಲಿ ಸೇನೆಯಿಂದ ನಿವೃತ್ತಿ ಪಡೆದು ವಾಪಸ್ ಮನೆಗೆ ಬರುತ್ತಿದ್ದರು. ಆದರೆ, ಇದೀಗ ವಿಧಿಯೇ ಅವರನ್ನು ಕರೆಸಿಕೊಂಡಿದೆ. ಇನ್ನು ಅನೂಪ್ ಅವರಿಗೆ ಹೆಂಡತಿ, ತಂದೆ-ತಾಯಿ ಹಾಗೂ 2 ವರ್ಷದ ಪುಟ್ಟ ಮಗುವಿದೆ. ಅನೂಪ್ ಸಾವಿನ ಬಗ್ಗೆ ಕುಟುಂಬದವರಿಗೆ ಮಾಹಿತಿ ಲಭ್ಯವಾಗಿದ್ದು, ಕುಟುಂಬದಲ್ಲಿ ನೀರವ ಮೌನ ಮನೆ ಮಾಡಿದೆ.

ಇಲ್ಲಿದೆ ವಿಡಿಯೋ:  ಜಮ್ಮು ಕಾಶ್ಮೀರ ಸೇನಾ ವಾಹನ ದುರಂತದಲ್ಲಿ 5 ಯೋಧರ ಹುತಾತ್ಮ; ಈ ಪೈಕಿ ಮೂವರು ಕರ್ನಾಟಕದ ಯೋಧರು!

ಬಾಗಲಕೋಟೆ ಯೋಧ ಮಹೇಶ್ ಮಾರಿಗೊಂಡ:  ಜಮ್ಮು ಕಾಶ್ಮೀರದಲ್ಲಿ ಯೋಧರ ವಾಹನ ಪ್ರಪಾತಕ್ಕೆ ಬಿದ್ದ ಘಟನೆಯಲ್ಲಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ಯೋಧ ಮಹೇಶ್ ನಾಗಪ್ಪ ಮಾರಿಗೊಂಡ (25) ಹುತಾತ್ಮರಾಗಿದ್ದಾರೆ. ಈ ಘಟನೆಯಲ್ಲಿ ಹುತಾತ್ಮರಾದ ಅತಿ ಚಿಕ್ಕ ವಯಸ್ಸಿನ ಯೋಧ ಇವರಾಗಿದ್ದಾರೆ. ಇವರು 11ನೇ ಮರಾಠಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 6 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಮಹೇಶ್ ಮಾರಿಗೊಂಡ ಅವರಿಗೆ ಕಳೆದ 3 ವರ್ಷಗಳ ಹಿಂದೆ ಮದುವೆಯಾಗಿತ್ತು. ಲಕ್ಷ್ಮೀ ಎಂಬ ಯುವತಿ ಮದುವೆಯಾಗಿದ್ದ ಮಹೇಶ್ ಇದೀಗ ಇಹಲೋಕ ತ್ಯಜಿಸಿದ್ದಾರೆ. ಇನ್ನು ಯೋಧ ಮಹೇಶ್ ಅವರಿಗೆ ತಾಯಿ ಹಾಗೂ ತಂಗಿ ಮತ್ತು ಒಬ್ಬ ತಮ್ಮ ಇದ್ದಾರೆ. ಮಹೇಶ್ ಹಿರಿಮಗನಾಗಿ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ಇದೀಗ ಮಗನನ್ನು ಕಳೆದುಕೊಂಡ ಕುಟುಂಬ ಶೋಕದಲ್ಲಿ ಮುಳುಗಿದೆ. ನಾಳೆ ಮೃತದೇಹ ಬೆಳಗಾವಿಗೆ ಬರಲಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಮೂಲದ ಮೂವರು ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಯೋಧರ ಮೃತದೇಹಗಳನ್ನು ನಾಳೆ ಸ್ವಗ್ರಾಮಕ್ಕೆ ತರಲಾಗುತ್ತಿದೆ. ಇಲ್ಲಿ ಯೋಧರ ಗ್ರಾಮದಲ್ಲಿ ಅಂತಿಮ ವಿಧಿ-ವಿಧಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

click me!