ಕುಸ್ತಿ ಫೆಡರೇಷನ್‌ ಕಚ್ಚಾಟ ರಾಜ್ಯದ 10 ಸಾವಿರ ಕುಸ್ತಿಪಟುಗಳು ಅತಂತ್ರ!

By Kannadaprabha News  |  First Published Jan 1, 2024, 5:29 AM IST

ಅಪ್ಪ-ಮಕ್ಕಳ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ, ಭಾರತೀಯ ಕುಸ್ತಿ ಫೆಡರೇಷನ್‌ ಹಾಗೂ ಅಂತಾರಾಷ್ಟ್ರೀಯ ಕುಸ್ತಿಪಟುಗಳ ನಡುವಿನ ಹಗ್ಗಜಗ್ಗಾಟದಲ್ಲಿ ಯುವ, ಪ್ರತಿಭಾವಂತ ಕುಸ್ತಿಪಟುಗಳ ಭವಿಷ್ಯ ಅತಂತ್ರವಾಗಿದೆ. ಬರೀ ಕರ್ನಾಟಕ ಒಂದರಲ್ಲೇ 10000 ಕುಸ್ತಿಪಟುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.


ಬೆಂಗಳೂರು (ಜ.1):  ಅಪ್ಪ-ಮಕ್ಕಳ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ, ಭಾರತೀಯ ಕುಸ್ತಿ ಫೆಡರೇಷನ್‌ ಹಾಗೂ ಅಂತಾರಾಷ್ಟ್ರೀಯ ಕುಸ್ತಿಪಟುಗಳ ನಡುವಿನ ಹಗ್ಗಜಗ್ಗಾಟದಲ್ಲಿ ಯುವ, ಪ್ರತಿಭಾವಂತ ಕುಸ್ತಿಪಟುಗಳ ಭವಿಷ್ಯ ಅತಂತ್ರವಾಗಿದೆ. ಬರೀ ಕರ್ನಾಟಕ ಒಂದರಲ್ಲೇ 10000 ಕುಸ್ತಿಪಟುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದೊಂದು ವರ್ಷದ ಆಗು-ಹೋಗುಗಳು ಹೆಚ್ಚಿನ ಪ್ರಭಾವ ಬೀರಿದ್ದು ಕುಸ್ತಿಪಟುಗಳ ಭವಿಷ್ಯದ ಮೇಲೆ. ಜನವರಿಯಲ್ಲಿ ಆರಂಭಗೊಂಡು, ಈ ದಿನದವರೆಗೂ ಮುಂದುವರಿಯುತ್ತಲೇ ಇರುವ ಕುಸ್ತಿ ಫೆಡರೇಷನ್‌ ವಿವಾದ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆಯ ಕುಸ್ತಿಪಟುಗಳ ಜೀವನವನ್ನು ಅತಂತ್ರಗೊಳಿಸಿದೆ. ವಿವಾದಗಳ ನಡುವೆಯೂ ರಾಜ್ಯದಲ್ಲಿ ಚಾಂಪಿಯನ್‌ಶಿಪ್‌ಗಳು ನಿರಂತರವಾಗಿ ನಡೆಯುತ್ತಿದ್ದರೂ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತಿಲ್ಲ. ಇದರಿಂದಾಗಿ ಒಂದೆಡೆ ಆರ್ಥಿಕ ಸಮಸ್ಯೆ, ಮತ್ತೊಂದೆಡೆ ಕೆಲಸಕ್ಕಾಗಿ ನೇಮಕಾತಿಯೂ ಇಲ್ಲದೆ ಕುಸ್ತಿಪಟುಗಳು ಕಂಗಾಲಾಗಿದ್ದಾರೆ.

Tap to resize

Latest Videos

ರಾಹುಲ್‌ ಜಿಯು-ಜಿತ್ಸು ಆಟ ನೋಡಿ ಭಜರಂಗ್ ಪೂನಿಯಾ ಶಾಕ್‌! ವಿಡಿಯೋ ವೈರಲ್‌

ಕೂಟಗಳು ಸ್ಥಗಿತ:

ಕಳೆದ ಜನವರಿಯಲ್ಲಿ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ)ನ ಆಗಿನ ಅಧ್ಯಕ್ಷ ಬ್ರಿಜ್‌ಭೂಷಣ್‌ ವಿರುದ್ಧ ದೇಶದ ಅಗ್ರ ಕುಸ್ತಿಪಟುಗಳು ಹೋರಾಟಕ್ಕಿಳಿದ ಬಳಿಕ, ಕ್ರೀಡಾ ಸಚಿವಾಲಯ ಕುಸ್ತಿ ಸಂಸ್ಥೆಯನ್ನೇ ಅಮಾನತುಗೊಳಿಸಿತ್ತು. ಬಳಿಕ ಮೇಲುಸ್ತುವಾರಿಗಾಗಿ ಸಂಸ್ಥೆಗೆ ಸ್ವತಂತ್ರ ಸಮಿತಿ ನೇಮಿಸಲಾಗಿತ್ತು. ಆದರೆ ಯಾವುದೇ ಕೂಟಗಳನ್ನು ಆಯೋಜಿಸುವ ಅಧಿಕಾರ ಸ್ವತಂತ್ರ ಸಮಿತಿಗೆ ಇರಲಿಲ್ಲ. ಹೀಗಾಗಿ ಅಂದಿನಿಂದ ಈ ವರೆಗೂ ದೇಶದಲ್ಲಿ ಯಾವುದೇ ವಯೋಮಾನದ, ಯಾವ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಕೂಡ ನಡೆದಿಲ್ಲ.

ವಿಭಾಗ, 3 ಟೂರ್ನಿ

ಸಾಮಾನ್ಯವಾಗಿ 5 ವಿಭಾಗಗಳಲ್ಲಿ ಅಂದರೆ ಅಂಡರ್‌-15, ಅಂಡರ್‌ 17(ಕೆಡೆಟ್), ಅಂಡರ್‌-20, ಅಂಡರ್‌-23 ಹಾಗೂ ಹಿರಿಯರ ವಿಭಾಗದಲ್ಲಿ ಸ್ಪರ್ಧೆಗಳು ಆಯೋಜನೆಗೊಳ್ಳುತ್ತವೆ. ರಾಷ್ಟ್ರೀಯ ಕೂಟ, ರ್‍ಯಾಂಕಿಂಗ್‌ ಸೀರಿಸ್‌ ಹಾಗೂ ಫೆಡರೇಷನ್‌ ಕಪ್‌ ಎಂದು 3 ಟೂರ್ನಿಗಳು ನಡೆಯುತ್ತವೆ. ಆದರೆ ವಿವಾದದ ಬಳಿಕ ಒಂದೂ ಕೂಟ ನಡೆದಿಲ್ಲ.

‘ಕರ್ನಾಟಕದಲ್ಲಿ ಕೂಟಗಳು ನಡೆಯುತ್ತಲೇ ಇವೆ. ಆದರೆ ರಾಷ್ಟ್ರೀಯ ಕೂಟಗಳು ನಿಂತಿವೆ. ಇದರಿಂದ ಕುಸ್ತಿಪಟುಗಳ ಭವಿಷ್ಯವೇ ಇಲ್ಲವಾಗುತ್ತದೆ. ಹಲವಾರು ಪ್ರತಿಭಾವಂತರು ಈಗಾಗಲೇ ಕುಸ್ತಿ ತೊರೆದಿದ್ದಾರೆ’ ಎಂದು ಕರ್ನಾಟಕ ಕುಸ್ತಿ ಸಂಸ್ಥೆ ತಾಂತ್ರಿಕ ಅಧಿಕಾರಿ, ಭಾರತದ ಕುಸ್ತಿ ಕೋಚ್‌ ವಿನೋದ್‌ ಕುಮಾರ್‌ ‘ಕನ್ನಡಪ್ರಭ’ ಜೊತೆ ಬೇಸರ ಹಂಚಿಕೊಂಡಿದ್ದಾರೆ.

-ಕರ್ನಾಟಕದ 10 ಸಾವಿರ ರೆಸ್ಲರ್ಸ್‌ಗಳು ಅತಂತ್ರ!

ರಾಜ್ಯ ಕುಸ್ತಿ ಸಂಸ್ಥೆ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 10000ಕ್ಕೂ ಹೆಚ್ಚಿನ ಕುಸ್ತಿಪಟುಗಳಿದ್ದಾರೆ. ಆದರೆ ರಾಷ್ಟ್ರೀಯ ಕೂಟಗಳು ನಡೆಯದಿದ್ದರೆ ಈ ಸಂಖ್ಯೆ ಕಡಿಮೆಯಾಗಲಿದೆ. ರಾಜ್ಯದಲ್ಲಿ ನಿರಂತರವಾಗಿ ಸ್ಪರ್ಧೆ ನಡೆಸಿದರೆ ಕುಸ್ತಿಪಟುಗಳಿಗೆ ಪ್ರೋತ್ಸಾಹ ಸಿಕ್ಕರೂ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ಇಲ್ಲದಿದ್ದಾಗ ಸಹಜವಾಗಿ ಹಲವು ಕುಸ್ತಿಪಟುಗಳು ಅಖಾಡ ತ್ಯಜಿಸುತ್ತಾರೆ. ಈಗಾಗಲೇ ಸಾವಿರಾರು ಮಂದಿ ಕುಸ್ತಿಯಿಂದ ವಿಮುಖರಾಗಿದ್ದಾರೆ.

ರಾಷ್ಟ್ರೀಯ ಕೂಟವಿಲ್ಲದಿದ್ರೂ ರಾಜ್ಯದಲ್ಲಿ ನಾನ್‌ ಸ್ಟಾಪ್‌!

ಕಳೆದೊಂದು ವರ್ಷದಿಂದ ಯಾವುದೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ನಡೆದಿಲ್ಲ. ಆದರೆ ಕಳೆದ ಡಿಸೆಂಬರ್‌ನಿಂದ ಈವರೆಗೂ ಕರ್ನಾಟಕದಲ್ಲಿ ವಿವಿಧ ವಯೋಮಾನದ 18 ಕೂಟಗಳು ನಡೆದಿವೆ. ತೀರಾ ಇತ್ತೀಚೆಗೆ ಡಿ.22ರಿಂದ 26ರ ವರೆಗೂ ಹರಿಹರದಲ್ಲಿ ಕೂಟ ಆಯೋಜನೆಗೊಂಡಿತ್ತು. 1281 ಸ್ಪರ್ಧಿಗಳು ಪಾಲ್ಗೊಂಡಿದ್ದರು. ‘ಏನೇ ಸಮಸ್ಯೆ ಎದುರಾದರೂ ಯಾವ ಕಾರಣಕ್ಕೂ ಕೂಟ ಸ್ಥಗಿತಗೊಳಿಸಬಾರದು ಎಂಬುದು ಗುಣರಂಜನ್‌ ಶೆಟ್ಟಿ ಅಧ್ಯಕ್ಷರಾಗಿರುವ ರಾಜ್ಯ ಕುಸ್ತಿ ಸಂಸ್ಥೆಯು ನಿರ್ಧಾರ. ಅದು ಮುಂದುವರಿಯಲಿದೆ’ ಎನ್ನುತ್ತಾರೆ ವಿನೋದ್‌ ಕುಮಾರ್‌.

ಕಾನೂನಿಗೆ ವಿರುದ್ಧವಾಗಿ ಕುಸ್ತಿ ಸಂಸ್ಥೆ ಅಮಾನತು: ಸಂಜಯ್ ಸಿಂಗ್ ಆರೋಪ

ರಾಷ್ಟ್ರೀಯ ಫೆಡರೇಶನ್‌ನಲ್ಲಿ ಏನೇ ಸಮಸ್ಯೆಗಳಿದ್ದರೂ, ರಾಜ್ಯದಲ್ಲಿ ಕುಸ್ತಿ ಚಟುವಟಿಕೆ ನಿಲ್ಲಿಸಬಾರದು ಎಂದು ಮೊದಲೇ ನಿರ್ಧರಿಸಿದ್ದೆವು. ದೇಶದ ಇತರ ಯಾವ ರಾಜ್ಯದಲ್ಲೂ ಕರ್ನಾಟಕದಂತೆ ಸ್ಪರ್ಧೆಗಳು ನಡೆಯುತ್ತಿಲ್ಲ. ನಮ್ಮ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿದೆ. ಹೀಗಾಗಿ ನಾವು ಯಾವ ಕಾರಣಕ್ಕೂ ಕೂಟಗಳನ್ನು ನಿಲ್ಲಿಸುವುದಿಲ್ಲ.

-ಗುಣರಂಜನ್‌ ಶೆಟ್ಟಿ, ರಾಜ್ಯ ಕುಸ್ತಿ ಸಂಸ್ಥೆ ಅಧ್ಯಕ್ಷ

---

-

click me!