ಮಳೆ ಮೋಡ ಇಲ್ಲದ ಕಾರಣ ಶುಭಾಕಾಶ ನಿರ್ಮಾಣ, ಕನಿಷ್ಠ ಉಷ್ಣಾಂಶದಲ್ಲಿ ಸುಮಾರು 5 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆ ಹಾಗೂ ಉತ್ತರ ದಿಕ್ಕಿನಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವುದರಿಂದ ಉತ್ತರ ಒಳನಾಡಿನ ಮೂರು ಜಿಲ್ಲೆಗಳಲ್ಲಿ ಜ.6ರ ವರೆಗೆ ಶೀತ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ ಹವಾಮಾನ ಇಲಾಖೆ
ಬೆಂಗಳೂರು(ಜ.05): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಬೀದರ್, ರಾಯಚೂರು ಹಾಗೂ ವಿಜಯಪುರ ಮೂರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಕೋಲ್ಡ್ ವೇವ್ (ಶೀತ ಅಲೆ) ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಳೆ ಮೋಡ ಇಲ್ಲದ ಕಾರಣ ಶುಭಾಕಾಶ ನಿರ್ಮಾಣ, ಕನಿಷ್ಠ ಉಷ್ಣಾಂಶದಲ್ಲಿ ಸುಮಾರು 5 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆ ಹಾಗೂ ಉತ್ತರ ದಿಕ್ಕಿನಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವುದರಿಂದ ಉತ್ತರ ಒಳನಾಡಿನ ಮೂರು ಜಿಲ್ಲೆಗಳಲ್ಲಿ ಜ.6ರ ವರೆಗೆ ಶೀತ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ಮುಂದಿನ 4 ದಿನ ಶೀತಗಾಳಿ ಭೀತಿ: ಮೈಕೊರೆವ ಚಳಿಗೆ ಥಂಡಾ ಹೊಡೆದ ಜನ!
ಈಗಾಗಲೇ ವಿಜಯಪುರದಲ್ಲಿ ವಾಡಿಕೆ ಪ್ರಮಾಣಕ್ಕಿಂತ 5.9 ಡಿ.ಸೆ.ನಷ್ಟು ಕನಿಷ್ಠದವರೆಗೆ ಉಷ್ಣಾಂಶದಲ್ಲಿ ಇಳಿಕೆಯಾಗಿದೆ. ಇನ್ನು ಬೀದರ್ ನಲ್ಲಿ 3.6 ನಷ್ಟು, ರಾಯಚೂರಿನಲ್ಲಿ 4.6 ನಷ್ಟಿದ್ದ ಕನಿಷ್ಠ ಉಷ್ಣಾಂಶ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ರಾಜ್ಯದ ಒಳನಾಡಿನ ಒಂದೆರಡು ಕಡೆ ಬೆಳಗಿನ ವೇಳೆ ಮಂಜು ಮುಸುಕಿದ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಚಳಿ ಹೆಚ್ಚಳ ಸಾಧ್ಯತೆ:
ರಾಜಧಾನಿ ಬೆಂಗಳೂರಿನಲ್ಲಿ ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಡಿಕೆಗಿಂತ 2 ರಿಂದ 3 ಡಿ.ಸೆ.ನಷ್ಟು ಕಡಿಮೆಯಾಗಿದೆ. ಶನಿವಾರ ಬೆಂಗಳೂರು ನಗರದಲ್ಲಿ ಕನಿಷ್ಠ ಉಷ್ಣಾಂಶ 14 ಡಿ.ಸೆ. ದಾಖಲಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಕನಿಷ್ಠ ಉಷ್ಣಾಂಶ 11 ಡಿ.ಸೆ. ವರೆಗೂ ಇಳಿಕೆಯಾಗುವ ಲಕ್ಷಣ ಇವೆ. ನಗರದಲ್ಲಿ ಮುಂದಿನ ಎರಡು ದಿನ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡು ಬರದಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.