ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅತ್ಯಗತ್ಯ: ಸಚಿವ ಈಶ್ವರ ಖಂಡ್ರೆ

By Kannadaprabha News  |  First Published Mar 11, 2024, 7:03 AM IST

ವನ್ಯಜೀವಿ ಸಂಘರ್ಷ, ಕಳ್ಳಬೇಟೆ ತಡೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಒಗ್ಗೂಡಿ ಶ್ರಮಿಸಲು ತೀರ್ಮಾನಿಸಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು. 


ಚಾಮರಾಜನಗರ (ಮಾ.11): ವನ್ಯಜೀವಿ ಸಂಘರ್ಷ, ಕಳ್ಳಬೇಟೆ ತಡೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಒಗ್ಗೂಡಿ ಶ್ರಮಿಸಲು ತೀರ್ಮಾನಿಸಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ಸ್ವಾಗತ ಕೇಂದ್ರದ ಬಳಿ ನಿರ್ಮಿಸಲಾಗಿದ್ದ ಸಭಾಂಗಣದಲ್ಲಿ ಕೇರಳದ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಅವರೊಂದಿಗೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಪ್ರಥಮ ಸಮನ್ವಯ ಸಭೆಯಲ್ಲಿ ಮಾತನಾಡಿ, ಇದು ಕೇಂದ್ರ ಸರ್ಕಾರದ ಆದೇಶದ ಮೇಲೆ ನಡೆಯುತ್ತಿರುವ ಸಭೆಯಲ್ಲ ಬದಲಾಗಿ, ದಕ್ಷಿಣದ ಮೂರು ರಾಜ್ಯಗಳ ಕಳಕಳಿ ಮತ್ತು ಸ್ವಯಂ ಪ್ರಯತ್ನದ ಫಲವಾದ ಸಭೆಯಾಗಿದೆ ಎಂದು ತಿಳಿಸಿದರು.

ವನ್ಯ ಜೀವಿಗಳು ಸ್ವಚ್ಛಂದವಾಗಿ ಒಂದು ಕಾಡಿನಿಂದ ಮತ್ತೊಂದಕ್ಕೆ ಸಂಚರಿಸುತ್ತವೆ. ಹಲವಾರು ಶತಮಾನಗಳಿಂದ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ನಡುವೆ ಆನೆಗಳು ಮುಕ್ತವಾಗಿ ಓಡಾಡುತ್ತಿದ್ದು, ಯಾವುದೇ ವನ್ಯ ಜೀವಿಗೆ ರಾಜ್ಯದ ಗಡಿಯ ಮಿತಿ ಇರುವುದಿಲ್ಲ. ಆನೆ ಕಾರಿಡಾರ್ ಇದೆ. ಹುಲಿಗಳು ಕೂಡ ಒಂದು ಕಾಡಿನಿಂದ ಮತ್ತೊಂದಕ್ಕೆ ಹೋಗುತ್ತವೆ. ಈ ವನ್ಯಜೀವಿಗಳಿಂದ ಯಾವುದೇ ರಾಜ್ಯದಲ್ಲಿ ಅಮೂಲ್ಯ ಜೀವ ಅಥವಾ ಬೆಳೆ ಹಾನಿ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದ್ದು ಶೀಘ್ರದಲ್ಲೇ ಇದಕ್ಕೆ ಒಂದು ಮೂರ್ತ ರೂಪ ನೀಡಲಾಗುವುದು ಎಂದರು.

Tap to resize

Latest Videos

undefined

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ದಕ್ಷಿಣದ ಈ ಮೂರೂ ರಾಜ್ಯಗಳಲ್ಲಿರುವ ಉತ್ತಮ ರೂಢಿಗಳನ್ನು ಅಳವಡಿಸಿಕೊಂಡು ಪ್ರಕೃತಿ ಪರಿಸರ ಉಳಿಸಲು ಪರಸ್ಪರ ಸಹಯೋಗ ನೀಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು. ವನ್ಯಜೀವಿಗಳ, ಜನಸಂಖ್ಯೆಯ ಹೆಚ್ಚಳದಿಂದ ವಸತಿ ಪ್ರದೇಶಗಳು ಅರಣ್ಯದಂಚಿಗೆ ಬರುತ್ತಿರುವ ಕಾರಣ ವನ್ಯಜೀವಿ-ಮಾನವ ಸಂಘರ್ಷ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ನಿಟ್ಟಿನಲ್ಲಿ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಹೀಗಾಗಿ ಕಾಡಿನಂಚಿನ ವಸತಿ ಪ್ರದೇಶಗಳ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅಗತ್ಯ ಎಂದು ಪ್ರತಿಪಾದಿಸಿದರು.

ವರಿಷ್ಠರು ಸೂಚನೆ ನೀಡಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಜಗದೀಶ್ ಶೆಟ್ಟರ್‌

ತಮಿಳುನಾಡಿನ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೂ ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಮೂರೂ ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗಿರುವ ಉತ್ತಮ ರೂಢಿಗಳ ಕುರಿತಂತೆ ಚರ್ಚಿಸಿ, ಜ್ಞಾನ ವಿನಿಮಯ ಮಾಡಲಾಯಿತು, ಜೊತೆಗೆ ಹೊಸ ಅನ್ವೇಷಣೆಗಳ ಬಗ್ಗೆಯೂ ಚರ್ಚಿಸಲಾಯಿತು ಎಂದರು. ವನ್ಯಜೀವಿ -ಮಾನವ ಸಂಘರ್ಷ ಮತ್ತು ಕಳ್ಳಬೇಟೆ ತಡೆ, ಕಾಡ್ಗಿಚ್ಚು ನಿಯಂತ್ರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಗತ್ಯವಿದೆ. ಈ ಬಗ್ಗೆಯೂ ಸಭೆಯಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮೂರೂ ರಾಜ್ಯಗಳ ನಡುವೆ ನಡೆಯುವ ಸಭೆಗಳಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುವುದು. ಜೊತೆಗೆ ಸನ್ನಾ ಮತ್ತು ಲಾಂಟನಾ ಕಳೆಯ ಸಮಸ್ಯೆಯ ನಿವಾರಣೆಗೂ ಸಹಯೋಗ ಅಗತ್ಯವಾಗಿದ್ದು, ತಂತ್ರಜ್ಞಾನ ಅಳವಡಿಕೆ ಮತ್ತು ಕಳೆ ನಾಶಕ್ಕೆ ಒಂದು ಸಲಹಾ ಸಮಿತಿ ರಚಿಸಲು ಪ್ರಸ್ತಾಪಿಸಲಾಗಿದೆ ಎಂದರು.

click me!