ಹೊಲದಲ್ಲಿ ಮಲಗಿದ್ದ ಮಹಿಳೆಯೊಬ್ಬಳ ಮೇಲೆರಿದ ಹಾವು ಹೆಡೆ ಎತ್ತಿ ನಿಂತ ಅಪರೂಪದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಈ ವಿಸ್ಮಯಕಾರಿ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದು ನೆಟ್ಟಿಗರ ನೆತ್ತಿ ಬಿಸಿ ಮಾಡಿದೆ.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ (ಆ.27): ಹೊಲದಲ್ಲಿ ಮಲಗಿದ್ದ ಮಹಿಳೆಯೊಬ್ಬಳ ಮೇಲೆರಿದ ಹಾವು ಹೆಡೆ ಎತ್ತಿ ನಿಂತ ಅಪರೂಪದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಈ ವಿಸ್ಮಯಕಾರಿ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದು ನೆಟ್ಟಿಗರ ನೆತ್ತಿ ಬಿಸಿ ಮಾಡಿದೆ.
ಸರ್ಪದ ದರ್ಪ: ಹಾವು ಶಿವನ ಕೊರಳು ಸುತ್ತಿಕೊಂಡಿರುವುದು ಪೌರಾಣಿಕ ಕಥೆಯಲ್ಲಿ ಕೇಳಿದ್ದೇವೆ. ಸಿನಿಮಾಗಳಲ್ಲಿ ನೋಡಿದ್ದೇವೆ. ಆದ್ರೆ ನಿಜ ಜೀವನದಲ್ಲಿ ಹಾವು ಮನುಷ್ಯನ ಬಳಿ ಬರೋದು ಅಪರೂಪದಲ್ಲಿ ಅಪರೂಪವೇ. ಯಾಕಂದ್ರೆ ಹಾವಿಗೆ ಮನುಷ್ಯನ ಕಂಡ್ರೆ ಭಯ. ಮನುಜನಿಗೆ ಹಾವನ್ನು ಕಂಡ್ರೆ ಎಲ್ಲಿಲ್ಲದ ಭಯ. ಹಾಗಾಗಿ ಹಾವು ಮನುಷ್ಯನ ಬಳಿ ಬರುವುದು ಅಪರೂಪದಲ್ಲಿ ಅಪರೂಪವೇ ಸರಿ.
ಆಗಿದ್ದೇನು?: ಈ ಅಪರೂಪದ ಘಟನೆ ನಡೆದಿದ್ದು, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ ಗ್ರಾಮದಲ್ಲಿ. ಭಾಗಮ್ಮ ಬಡದಾಳ ಎನ್ನುವ ಹೆಸರಿನ ಮಧ್ಯವಯಸ್ಸಿನ ಮಹಿಳೆ, ಮಧ್ಯಾಹ್ನದ ಹೊತ್ತಲ್ಲಿ ತನ್ನ ಹೊಲದಲ್ಲಿ ಮರದ ನೆರಳಿಗೆ ಮೈಯೊಡ್ಡಿ ಮಲಗಿದ್ದಾಳೆ. ತಣ್ಣನೆಯ ಗಾಳಿಗೆ ಕೆಲವೇ ಹೊತ್ತಲ್ಲಿ ನಿದ್ರೆಗೆ ಜಾರಿದ್ದಾಳೆ. ಕೆಲ ಸಮಯದ ನಂತರ ಮೈ ಮೇಲೆ ಏನೋ ಬಂದಂತಾಗಿ ಕಣ್ಣು ಮಿಟುಕಿಸಿದ್ದಾಳೆ. ಅಷ್ಟೇ, ಆಗ ಆಕೆಯ ಕಣ್ಣಿಗೆ ಕಂಡ ದೃಶ್ಯ ಸ್ವತಃ ಆಕೆಗೂ ಮಾತು ಬಾರದಂತಾಗಿದೆ. ಮೈಯಲ್ಲಿ ನಡುಕ ಶುರುವಾಗಿದೆ. ಯಾಕಂದ್ರೆ ಆಕೆ ಕಣ್ಣು ತೆರೆದಾಗ ಕಂಡಿದ್ದು, ದೊಡ್ಡ ನಾಗರ ಹಾವೊಂದು ಆಕೆಯ ಮೇಲೆಯೇ ಹತ್ತಿ ಹೆಡೆ ಎತ್ತಿ ನಿಂತಿದೆ.
ಕಲಬುರಗಿ: ತೋಳ ದಾಳಿಗೆ 9 ತಿಂಗಳ ಹಸುಗೂಸು ಬಲಿ
ಮಲ್ಲಯ್ಯನ ಜಪ ಮಾಡಿದ ಮಹಿಳೆ: ಹಾವು ಮೈ ಮೇಲೆ ಹತ್ತಿ ಹೆಡೆ ಎತ್ತಿ ನಿಂತಿರುವುದನ್ನು ಕಂಡು ಹೌಹಾರಿದ ಭಾಗಮ್ಮ, ಏನು ಮಾಡಬೇಕೆಂದು ದೋಚದೆ ಮೊದಲು ಸೈಲೆಂಟಾಗಿದ್ದಾಳೆ. ಆಗಲಾದರೂ ಹಾವು ಹೋಗಬಹುದು ಎಂದು ಆಕೆ ನಂಬಿಕೊಂಡಿದ್ದಳು. ಆದ್ರೂ ಸರ್ಪ ಕೆಲ ಹೊತ್ತು ಆಕೆಯ ಮೈಮೇಲಿನಿಂದ ಸರಿದೇ ಇಲ್ಲ. ಕದಲಿದ್ರೆ ಎಲ್ಲಿ ಕಚ್ಚಿ ಬಿಡುತ್ತೋ ಎನ್ನುವ ಭಯದಿಂದ ಆ ಮಹಿಳೆ ಕದಲದೇ ಹಾಗೆಯೇ ಮಲಗಿದ್ದಾಳೆ. ಅಷ್ಟೇ ಅಲ್ಲ, ಮಲ್ಲಯ್ಯ.. ಶ್ರೀಶೈಲ ಮಲ್ಲಯ್ಯ ಕಾಪಾಡೋ ತಂದೆ ಎಂದು ಜಪ ಬೇರೆ ಶುರು ಮಾಡಿದ್ದಾಳೆ.
ವಿಡಿಯೋ ಮಾಡಿದ ಯುವಕ: ಇದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಈ ದೃಶ್ಯ ನೋಡಿ ಹೌಹಾರಿದ್ದಾನೆ. ಅಲ್ಲದೇ ಹೊಲದಲ್ಲಿದ್ದ ತನ್ನ ಇನ್ನೊಬ್ಬ ಸ್ನೇಹಿತನಿಗೆ ಕರೆದು ತೋರಿಸಿದ್ದಾನೆ. ಅಷ್ಟೇ ಅಲ್ಲ ಹಾವು ಮಲಗಿದ್ದ ಮಹಿಳೆಯ ಮೈಮೇಲೆ ಹತ್ತಿರುವುದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಸಹ ಮಾಡಿಕೊಂಡಿದ್ದಾನೆ.
ಕೆಲ ಹೊತ್ತಿನ ನಂತರ ಹೋದ ನಾಗರಾಜ: ಕೆಲ ಹೊತ್ತು ಮಹಿಳೆಯ ಮೈ ಮೇಲೆ ಏರಿ ದರ್ಪ ತೋರಿದ ಸರ್ಪರಾಜ, ಕೆಲ ಹೊತ್ತಿನ ನಂತರ ತನ್ನ ಪಾಡಿಗೆ ನಾನು ನಿಧಾನವಾಗಿ ಅಲ್ಲಿಂದ ತೆರಳಿದ್ದಾನೆ. ಸರ್ಪ ಹೋದ ಕೆಲ ಹೊತ್ತಿನ ನಂತರವೂ ಭಾಗಮ್ಮ ಅಕ್ಷರಶಃ ಬೆವೆತು ಹೋಗಿದ್ದಳು. ನಂತರ ಸಾವರಿಸಿಕೊಂಡು ಮನೆಗೆ ಹೋದಳು ಎನ್ನಲಾಗಿದೆ.
ವಿಡಿಯೋ ವೈರಲ್: ಮಲಗಿದ್ದ ಮಹಿಳೆಯ ಮೇಲೆರಿದ ಸರ್ಪ ಹೆಡೆ ಎತ್ತಿರುವ ನಿಂತಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಮಹಿಳೆಯ ಧೈರ್ಯ ಮತ್ತು ದೈವ ಭಕ್ತಿಗೆ ಹಲವರು ಶಹಾಬ್ಬಾಶ್‌ಗಿರಿ ನೀಡಿದ್ದಾರೆ. ಮಹಿಳೆ ಕೊಂಚ ಆತುರ ಪಟ್ಟಿದ್ದರೂ ಅಪಾಯವಾಗುವ ಸಾಧ್ಯತೆ ಇತ್ತು.
ಅನ್ನದಾತ ರೈತೋದ್ಯಮಿಯಾಗಬೇಕು; ಸಚಿವ ಬಿ.ಸಿ ಪಾಟೀಲ್
ಭಾಗ್ಯವಂತಿ ಕೃಪೆ: ಈ ಮಹಿಳೆ ಮತ್ತು ಸರ್ಪದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜನ ಆಕೆಯ ಮನೆಗೆ ಬಂದು ಭೇಟಿ ನೀಡಿ ಹೋಗುತ್ತಿದ್ದಾರೆ. ಅಪರಿಚಿತರು ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದರೆ, ಇನ್ನು ಕೆಲವರು ಮಹಿಳೆಯ ಅನುಭವ ಕೇಳಲು ಆಗಮಿಸುತ್ತಿದ್ದಾರೆ. ಇನ್ನು ಕೆಲವರು ಈ ಮಹಿಳೆಯ ಬಳಿ ದೈವಿ ಶಕ್ತಿ ಇದೆ ಎಂದು ಭಾವಿಸಿ ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ನಾಗರಾಜನ ಪ್ರಭಾವದಿಂದಾಗಿ ಭಾಗಮ್ಮ ಇದೀಗ ತಾಲೂಕಿನಲ್ಲಿ ಸಖತ್ ಫೇಮಸ್ ಆಗಿದ್ದಾಳೆ.