ಖಾಸಗಿ ಬಸ್‌ಗಳ ‘ಹಬ್ಬದ ಸುಲಿಗೆ’ ಶುರು, ಟಿಕೆಟ್ ದರ 3 ಪಟ್ಟು ಏರಿಕೆ!

Published : Aug 27, 2022, 10:23 AM ISTUpdated : Aug 27, 2022, 10:25 AM IST
ಖಾಸಗಿ ಬಸ್‌ಗಳ ‘ಹಬ್ಬದ ಸುಲಿಗೆ’ ಶುರು, ಟಿಕೆಟ್ ದರ 3 ಪಟ್ಟು ಏರಿಕೆ!

ಸಾರಾಂಶ

ಖಾಸಗಿ ಬಸ್‌ಗಳ ‘ಹಬ್ಬದ ಸುಲಿಗೆ’ ಶುರು.  ಟಿಕೆಟ್‌ ದರ 2-3 ಪಟ್ಟು ಏರಿಕೆ. ಹಬ್ಬದ ಹಿಂದಿನ 2 ದಿನ ದರ ಹೆಚ್ಚಿಸುತ್ತಿದ್ದ ಖಾಸಗಿ ಬಸ್‌ಗಳಿಂದ ಈ ಸಲ 4 ದಿನ ಮೊದಲೇ ಹೆಚ್ಚಳ.

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಆ.27): ಗೌರಿ-ಗಣೇಶ ಹಬ್ಬಕ್ಕೆ 4-5 ದಿನ ಬಾಕಿ ಇರುವಂತೆಯೇ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆಗೆ ನಿಂತಿದ್ದು, ಬೆಂಗಳೂರಿನಿಂದ ರಾಜ್ಯ ವಿವಿಧೆಡೆ ತೆರಳುವ ಖಾಸಗಿ ಬಸ್‌ಗಳ ಟಿಕೆಟ್‌ ದರ 2-3 ಪಟ್ಟು ಹೆಚ್ಚಳವಾಗಿದೆ. ಅಚ್ಚರಿ ಎಂದರೆ, ಪ್ರತಿ ವರ್ಷ ಹಬ್ಬದ ಹಿಂದಿನ 2 ದಿನ ನಡೆಯುತ್ತಿದ್ದ ಟಿಕೆಟ್‌ ದರ ಸುಲಿಗೆಯು ಈ ಬಾರಿ ಶುಕ್ರವಾರದಿಂದ ಮಂಗಳವಾರದವರೆಗೂ ಸತತ 5 ದಿನಗಳು ನಡೆಯುತ್ತಿದೆ! ಈ ಬಾರಿಯ ಹಬ್ಬದ ಸಂದರ್ಭದಲ್ಲಾದರೂ ಖಾಸಗಿ ಬಸ್‌ಗಳ ದುಬಾರಿ ದರಕ್ಕೆ ಕಡಿವಾಣ ಬೀಳಬಹುದು ಎಂಬ ಪ್ರಯಾಣಿಕರ ನಿರೀಕ್ಷೆ ಹುಸಿಯಾಗಿದೆ. ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕಿಕೊಂಡು ಬಸ್‌ ಟಿಕೆಟ್‌ ಬುಕಿಂಗ್‌ ಮಾಡುತ್ತಿದ್ದಾರೆ. 2 ವರ್ಷ ಕೊರೋನಾ ಸಾಂಕ್ರಾಮಿಕ ಕಾಟದ ಬಳಿಕ ಈ ಬಾರಿ ಗೌರಿ-ಗಣೇಶ ಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಎಲ್ಲರೂ ಸಿದ್ಧವಾಗುತ್ತಿದ್ದಾರೆ. ಇತ್ತ ಖಾಸಗಿ ಬಸ್‌ಗಳು ಕೂಡ ಕಳೆದ 2 ವರ್ಷಗಳಿಗಿಂತ ಈ ಬಾರಿ ಭರ್ಜರಿಯಾಗಿಯೇ ಟಿಕೆಟ್‌ ದರ ಹೆಚ್ಚಿಸಿವೆ. ಈ ಬಾರಿ ಹಬ್ಬ ಮಂಗಳವಾರ ಮತ್ತು ಬುಧವಾರ ಬಂದಿದ್ದು, ಶುಕ್ರವಾರ ಸಂಜೆಯಿಂದಲೇ ಟೆಕ್ಕಿಗಳು, ಕಂಪನಿ ಉದ್ಯೋಗಿಗಳು ಸೇರಿದಂತೆ ಹಲವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಮುಂದಾಗುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ಬಸ್‌ಗಳು ಶುಕ್ರವಾರದಿಂದಲೇ ಟಿಕೆಟ್‌ ದರ ದುಪ್ಪಟ್ಟು ಹೆಚ್ಚಿಸಿ ಸುಲಿಗೆ ಆರಂಭಿಸಿವೆ.

ಖಾಸಗಿ ಬಸ್‌ಗಳ ವೆಬ್‌ಸೈಟ್‌, ಬಸ್‌ ಬುಕ್ಕಿಂಗ್‌ ಆ್ಯಪ್‌ಗಳ ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿವರೆಗೂ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚರಿಸುವ ಖಾಸಗಿ ಬಸ್‌ಗಳ ದರ ಸಾಮಾನ್ಯ ದಿನಗಳಿಗಿಂತ 2-3 ಪಟ್ಟು ಹೆಚ್ಚಾಗಿದೆ.

ಹುಬ್ಬಳ್ಳಿ ರೂಟ್‌ಗೆ ಭಾರಿ ಏರಿಕೆ: ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಒಂದೊಂದು ಮಾರ್ಗಕ್ಕೆ ಒಂದೊಂದು ರೀತಿ ಹೆಚ್ಚಿಸಲಾಗಿದೆ. ಮಂಗಳೂರು, ಮಡಿಕೇರಿ, ಮೈಸೂರು ಮಾರ್ಗದಲ್ಲಿ ಸಾಮಾನ್ಯ ದಿನಗಳಿಗಿಂತ ಒಂದೂವರೆಯಿಂದ ಎರಡು ಪಟ್ಟು ಟಿಕೆಟ್‌ ದರ ಹೆಚ್ಚಿದೆ. ಆದರೆ, ಹೋಲಿಸಿದರೆ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ವಿಜಯನಗರ ಮಾರ್ಗದಲ್ಲಿ ಎರಡೂವರೆ, ಮೂರುಪಟ್ಟು ಟಿಕೆಟ್‌ ದರ ಹೆಚ್ಚಿಸಲಾಗಿದೆ. ಪ್ರವಾಸಿ ಸ್ಥಳ, ಧಾರ್ಮಿಕ ಕೇಂದ್ರಗಳ ಟಿಕೆಟ್‌ ದರ ಕೂಡಾ ಎರಡೂವರೆಯಿಂದ ಮೂರುಪಟ್ಟು ಹೆಚ್ಚಾಗಿದೆ.

ಪ್ರಯಾಣಿಕರ ಕಿಡಿ: ಹಬ್ಬದ ಸಂದರ್ಭದಲ್ಲಿ ಟಿಕೆಟ್‌ ದರ ಹೆಚ್ಚಳವಾಗುತ್ತದೆ ಎಂಬ ಮಾಹಿತಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿದಿರುತ್ತದೆ. ಆದರೆ, ಈವರೆಗೂ ಖಾಸಗಿ ಬಸ್‌ ಆಪರೇಟರ್ಸ್‌ಗೆ ದರ ಹೆಚ್ಚಳ ಮಾಡದಂತೆ ನಿರ್ಬಂಧವಾಗಲಿ, ಕಟ್ಟುನಿಟ್ಟಿನ ಸೂಚನೆಯಾಗಲಿ ಸಾರಿಗೆ ಇಲಾಖೆ ನೀಡಿಲ್ಲ. ಪ್ರಯಾಣಿಕರು ದೂರು ನೀಡಲು ಸಹಾಯವಾಣಿಯನ್ನೂ ಆರಂಭಿಸಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಆ್ಯಪ್‌ಗಳಿಂದ ಜಿಎಸ್‌ಟಿ ಬಿಸಿ: ಟ್ರಾವೆಲ್‌ ಅಥವಾ ಪೇಮೆಂಟ್‌ ಆ್ಯಪ್‌ಗಳಿಂದ ಬಸ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವವರಿಗೆ ಈ ಬಾರಿ ಶೇ.5ರಷ್ಟುಜಿಎಸ್‌ಟಿ ಕೂಡ ಅನ್ವಯವಾಗುತ್ತಿದೆ. 1000 ರು. ಮೊತ್ತದ ಟಿಕೆಟ್‌ ಖರೀದಿಸುವವರು 50 ರು. ತೆರಿಗೆ ಕಟ್ಟಬೇಕಿದೆ.

ಯಾವ ಊರಿಗೆ ಟಿಕೆಟ್‌ ದರ ಎಷ್ಟುಹೆಚ್ಚಳ?

ಬೆಂಗಳೂರು-ಬೆಳಗಾವಿ ಸಾಮಾನ್ಯ ದಿನ ದರ: 750-850, ಹಬ್ಬದ ದರ:1500-2000

ಬೆಂಗಳೂರು-ಹುಬ್ಬಳ್ಳಿ ಸಾಮಾನ್ಯ ದಿನ ದರ: 500-750 ಹಬ್ಬದ ದರ:1300-2000

ಬೆಂಗಳೂರು-ಶಿವಮೊಗ್ಗ ಸಾಮಾನ್ಯ ದಿನ ದರ: 400-700 ಹಬ್ಬದ ದರ: 900-1400

ಬೆಂಗಳೂರು-ಮಂಗಳೂರು ಸಾಮಾನ್ಯ ದಿನ ದರ: 650-850 ಹಬ್ಬದ ದರ: 1100-1600

ಬೆಂಗಳೂರು -ದಾವಣಗೆರೆ ಸಾಮಾನ್ಯ ದಿನ ದರ: 400-600 ಹಬ್ಬದ ದರ: 900 -1200

ಬೆಂಗಳೂರು-ಹೊಸಪೇಟೆ ಸಾಮಾನ್ಯ ದಿನ ದರ: 500-750 ಹಬ್ಬದ ದರ: 1000-1400

ಬೆಂಗಳೂರು-ಬೀದರ್‌ ಸಾಮಾನ್ಯ ದಿನ ದರ: 650-900 ಹಬ್ಬದ ದರ: 1200-1800

ಬೆಂಗಳೂರು-ಮುಂಬೈ ಸಾಮಾನ್ಯ ದಿನ ದರ: 1100-1300 ಹಬ್ಬದ ದರ: 1500-3000

ಬೆಂಗಳೂರು- ಪುಣೆ ಸಾಮಾನ್ಯ ದಿನ ದರ: 800-1200 ಹಬ್ಬದ ದರ: 1600-2500

ಬೆಂಗಳೂರು-ಚೆನ್ನೈ ಸಾಮಾನ್ಯ ದಿನ ದರ: 650-800 ಹಬ್ಬದ ದರ: 1200-1500

ಬೆಂಗಳೂರು-ಹೈದರಾಬಾದ್‌ ಸಾಮಾನ್ಯ ದಿನ ದರ: 750-100 ಹಬ್ಬದ ದರ: 1400-1600

ಬಸ್‌ ಇಲ್ಲದೆ ಜೆಸಿಬಿ ಏರಿ ಶಾಲೆಗೆ ಬರ್ತಾರೆ ಮಕ್ಕಳು; ಶಿರಗುಂಪಿ ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ!

ಜಿಲ್ಲೆಗಳಲ್ಲಿ ಬುಧವಾರದಿಂದ ‘ವಾಪಸಿ’ ಸುಲಿಗೆ:  ಹಬ್ಬ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ಟಿಕೆಟ್‌ ದರ ಹೆಚ್ಚಿಸುವ ಖಾಸಗಿ ಬಸ್‌ ಆಪರೇಟರ್ಸ್‌ ಹಬ್ಬ ಮುಗಿದ ಮತ್ತು ನಂತರ ದಿನಗಳಲ್ಲಿ ಅಂದರೆ, ಬುಧವಾರ ಮತ್ತು ಗುರುವಾರ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಬರುವ ಬಸ್‌ಗಳ ದರವನ್ನು ಹೆಚ್ಚಿಸಿವೆ. ಸಾಮಾನ್ಯ ದಿನಗಳಿಗಿಂತ ಈ ದರವು ಒಂದೂವರೆಯಿಂದ ಎರಡು ಪಟ್ಟು ಹೆಚ್ಚಿದೆ. ಹಬ್ಬಕ್ಕೆ 2-3 ಪಟ್ಟು ಹಣ ನೀಡಿ ಊರಿಗೆ ತೆರಳಿದ್ದವರು ಅನಿವಾರ್ಯವಾಗಿ ಮತ್ತೆ ಹೆಚ್ಚುವರಿ ದರ ನೀಡಿ ಬೆಂಗಳೂರಿಗೆ ಹಿಂದಿರುಗಬೇಕಾಗುತ್ತದೆ.

 ಸ್ಲೀಪರ್‌ ಬಸ್‌ ಇಲ್ಲದಕ್ಕೆ ಬಸವಳಿದ ಪ್ರಯಾಣಿಕರು..!

, ‘ಕೊನೆಯ ಕ್ಷಣದಲ್ಲಿ ಕೆಲ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ನೆಪಕ್ಕೆ ಒಂದಿಷ್ಟುಬಸ್‌ಗೆ ಟಿಕೆಟ್‌ ದರಕ್ಕಿಂತಲೂ ಕಡಿಮೆ ದಂಡ ಹಾಕುವ ನಾಟಕವನ್ನು ಸಾರಿಗೆ ಇಲಾಖೆ ಮಾಡುತ್ತದೆ’ ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ