
ಬೆಂಗಳೂರು (ಮೇ.18) : ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ (ಬಿಎಸ್‌ಆರ್‌ಪಿ) ಬೋಗಿಗಳನ್ನು ಪೂರೈಸಲು ಕೆ-ರೈಡ್ ಆಹ್ವಾನಿಸಿದ್ದ ರಿಕ್ವೆಸ್ವ್ ಫಾರ್ ಕ್ವಾಲಿಫಿಕೆಷನ್‌ಗೆ (ಎಫ್‌ಆರ್‌ಕ್ಯೂ-ಅರ್ಹತೆ ನಿಗದಿಗೆ ಮನವಿ) ಮೂರು ಬಿಡ್ಡರ್‌ಗಳು ಮುಂದೆ ಬಂದಿದ್ದು, ಮೌಲ್ಯಮಾಪನ ಸಮಿತಿ ಪರಿಷ್ಕರಣೆ ಆರಂಭಿಸಿದೆ.
ಕಳೆದ ಜ.25ರಂದು ಬೋಗಿ/ ರೋಲಿಂಗ್ ಸ್ಟಾಕ್ ಪೂರೈಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್) ಎರಡು ಹಂತದ ಟೆಂಡರ್ ಭಾಗವಾಗಿ ಆರ್‌ಎಫ್‌ಕ್ಯೂ ಆಹ್ವಾನಿಸಿತ್ತು. ಇದರಲ್ಲಿ ಜಾಗತಿಕ ಮಟ್ಟದ ರೋಲಿಂಗ್ ಸ್ಟಾಕ್ ತಯಾರಿಕಾ ಕಂಪನಿ ಸ್ಪೇನ್ ಮೂಲದ ಕನ್ಸಸ್ಟ್ರಕ್ಷಿಯನ್ಸ್ ಆಕ್ಸಿಲಿಯರ್ ಡೆ ಫೆರೋಕರಿಲೆಸ್ (ಸಿಎಎಫ್) ಸೇರಿದಂತೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಮತ್ತು ಭಾರತ್ ಅಥ್‌ರ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಕಂಪನಿಗಳು ಆಸಕ್ತಿ ತೋರಿ ಮುಂದೆ ಬಂದಿವೆ.
ಶೀಘ್ರ ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸೇವೆ : ಮಾಸಾಂತ್ಯಕ್ಕೆ ಟೆಂಡರ್
ಮೇ 15ರವರೆಗೆ ಆರ್‌ಎಫ್‌ಕ್ಯೂ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ಮಂಗಳವಾರ ಕೆ ರೈಡ್ ಸಂಸ್ಥೆಯಲ್ಲಿ ಬಿಡ್‌ದಾರರ ಸಮಕ್ಷಮದಲ್ಲಿ ಟೆಂಡರ್ ತೆರೆಯಲಾಯಿತು. ಮೂರು ಬಿಡ್ ಕಂಪನಿಗಳು ಮೊದಲ ಹಂತದ ಪ್ರಕಾರ ತಮ್ಮ ತಾಂತ್ರಿಕ ಮತ್ತು ಆರ್ಥಿಕ ಸಾಮರ್ಥ್ಯವನ್ನು ಒಳಗೊಂಡಂತೆ ಟೆಂಡರ್ ದಾಖಲೆಯಲ್ಲಿ ಸೂಚಿಸಿದಂತೆ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ತಮ್ಮ ಆಸಕ್ತಿಯನ್ನು ಸಲ್ಲಿಸಿವೆ.
ಇದೀಗ ಟೆಂಡರ್ ಮೌಲ್ಯಮಾಪನ ಸಮಿತಿಯು ಬಿಡ್‌ದಾರರು ಅಪ್‌ಲೋಡ್ ಮಾಡಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಬಿಡ್‌ದಾರರು ಸಲ್ಲಿಸಿದ ದಾಖಲೆಗಳ ವಿಸ್ತೃತ ಪರಿಶೀಲನೆ ಮತ್ತು ಸಂಪೂರ್ಣ ಮೌಲ್ಯಮಾಪನದ ಬಳಿಕ, ಎರಡನೇ ಹಂತವಾಗಿ ಹಣಕಾಸಿನ ಬಿಡ್ (ಆರ್‌ಎಫ್‌ಪಿ) ಹಂತಕ್ಕೆ ಅವರ ಅರ್ಹತೆ ಅಂತಿಮಗೊಳಿಸಲಾಗುವುದು. ಅಂತಿಮವಾಗಿ ಕಂಪನಿಯ ಅರ್ಹತೆ, ಹಣಕಾಸಿನ ಪ್ರಸ್ತಾವನೆ ಆಧರಿಸಿ ಕಡಿಮೆ ಬಿಡ್ ದಾರರಿಗೆ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರೈಲ್ವೇ ಬೋಗಿಗಳನ್ನು ಪೂರೈಕೆ, ನಿರ್ವಹಣೆ ಮತ್ತು ತರಬೇತಿ ಪಡೆದ ಸಿಬ್ಬಂದಿ ನಿಯೋಜಿಸಲು ಗುತ್ತಿಗೆ ನೀಡಲಾಗುವುದು ಎಂದು ಕೆ-ರೈಡ್ ಪ್ರಕಟಣೆಯಲ್ಲಿ ವಿವರಿಸಿದೆ.
Kolara: ಹಳಿ ತಪ್ಪಿದ ಡಬಲ್‌ಡೆಕ್ಕರ್ ರೈಲು, ತಪ್ಪಿದ ಭಾರಿ ದುರಂತ
35 ವರ್ಷಕ್ಕೆ ಗುತ್ತಿಗೆ
ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 264 ರೈಲ್ವೆ ಬೋಗಿಗಳನ್ನು 35 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ಪಡೆಯಲು ಕೆ-ರೈಡ್ ಯೋಜಿಸಿದೆ. ಮೊದಲ ಹಂತದ ‘ಮಲ್ಲಿಗೆ ಕಾರಿಡಾರ್’ ಅಂದರೆ ಚಿಕ್ಕಬಾಣಾವರದಿಂದ ಬೈಯಪ್ಪನಹಳ್ಳಿವರೆಗಿನ 25 ಕಿ.ಮೀ. ಮಾರ್ಗ ಮುಂದಿನ ಮೂರು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ