'ಯು ನೋ ಕನ್ನಡ' ಎಂದ ಸಿದ್ದರಾಮಯ್ಯಗೆ 'ನಂಗೆ ಎಲ್ಲ ಭಾಷೆಗಳೂ ಇಷ್ಟ, ಕನ್ನಡವೂ ಅರ್ಥವಾಗುತ್ತೆಂದ' ರಾಷ್ಟ್ರಪತಿ!

Published : Sep 01, 2025, 08:08 PM IST
Droupadi Murmu and Siddaramaiah

ಸಾರಾಂಶ

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ನಡುವೆ ನಡೆದ ಹಾಸ್ಯಮಯ ಭಾಷಾ ಜುಗಲ್‌ಬಂದಿ ನಡೆಯಿತು. ಸಿಎಂ ಅವರು ರಾಷ್ಟ್ರಪತಿಯವರಿಗೆ 'ಯು ನೋ ಕನ್ನಡ?' ಎಂದು ಪ್ರಶ್ನಿಸಿದರು. ರಾಷ್ಟ್ರಪತಿಯವರು 'ನನಗೆ ಎಲ್ಲ ಭಾಷೆಯೂ ಇಷ್ಟ, ಕನ್ನಡ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ' ಎಂದರು.

ಮೈಸೂರು (ಸೆ.01): ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ನಡುವೆ ನಡೆದ ಹಾಸ್ಯಮಯ ಭಾಷಾ ಜುಗಲ್‌ಬಂದಿ ನೆರೆದಿದ್ದವರಲ್ಲಿ ನಗೆಯ ಅಲೆ ಎಬ್ಬಿಸಿತು. ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಆರಂಭಕ್ಕೂ ಮುನ್ನ ರಾಷ್ಟ್ರಪತಿಯವರತ್ತ ತಿರುಗಿ, 'ಯು ನೋ ಕನ್ನಡ?" (ನಿಮಗೆ ಕನ್ನಡ ಗೊತ್ತೇ?) ಎಂದು ಹಾಸ್ಯಭರಿತವಾಗಿ ಪ್ರಶ್ನಿಸಿದರು. ಇದಕ್ಕೆ ಮುರ್ಮು ಅವರು ತಮ್ಮ ಭಾಷಣದ ವೇಳೆ 'ನನಗೆ ದೇಶದ ಎಲ್ಲಾ ಭಾಷೆಗಳೂ ಇಷ್ಟ, ಮತ್ತು ಕನ್ನಡ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ' ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ಕೊಟ್ಟರು.

ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಮೊದಲಿಗೆ ಭಾಷಣ ಮಾಡಲು ಪ್ರಾರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಭಾಷಣವನ್ನು ಶುರು ಮಾಡುವ ಮುನ್ನ ರಾಷ್ಟ್ರಪತಿಯವರತ್ತ ತಿರುಗಿ, 'ಯು ನೋ ಕನ್ನಡ?" (ನಿಮಗೆ ಕನ್ನಡ ಗೊತ್ತೇ?) ಎಂದು ಹಾಸ್ಯಭರಿತವಾಗಿ ಪ್ರಶ್ನಿಸಿದರು. ಸಿಎಂ ಅವರ ಈ ಅನಿರೀಕ್ಷಿತ ಪ್ರಶ್ನೆಗೆ ರಾಷ್ಟ್ರಪತಿ ಮುರ್ಮು ಮತ್ತು ವೇದಿಕೆಯ ಮೇಲಿದ್ದ ಗಣ್ಯರು ನಕ್ಕರು. ನಂತರ ಸಿಎಂ, 'ನಿಮಗೆ ಕನ್ನಡ ಬರುತ್ತಾ? ನಾನು ಕನ್ನಡದಲ್ಲಿ ಮಾತನಾಡುತ್ತೇನೆ' ಎಂದು ಹೇಳಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಾಸ್ಯಭರಿತವಾಗಿ ಉತ್ತರ ನೀಡಿದರು. 'ನನಗೆ ಎಲ್ಲಾ ಭಾಷೆಗಳೂ ಇಷ್ಟ, ಮತ್ತು ಕನ್ನಡ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ' ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ಕೊಟ್ಟರು. ರಾಷ್ಟ್ರಪತಿ ಮುರ್ಮು ಅವರ ಈ ಮಾತು ಮತ್ತೊಮ್ಮೆ ನೆರೆದಿದ್ದವರಲ್ಲಿ ನಗೆಯನ್ನು ಉಕ್ಕಿಸಿದವು. ಗಂಭೀರವಾದ ಕಾರ್ಯಕ್ರಮದ ನಡುವೆ ಇಂತಹ ಭಾಷಾ ವಿನೋದವು ವಾತಾವರಣವನ್ನು ಹಗುರಗೊಳಿಸಿತು. ಈ ಘಟನೆಯು ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ನಡುವಿನ ಸೌಹಾರ್ದ ಸಂಬಂಧವನ್ನು ಬಿಂಬಿಸಿತು ಮತ್ತು ಎಲ್ಲರ ಗಮನ ಸೆಳೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮಗು ಹೊಟ್ಟೆಯಲ್ಲಿರುವಾಗಲೇ ಮಗುವಿನ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆ. ಇದಕ್ಕಾಗಿ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಗೆ ಅಭಿನಂದನೆಗಳು. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮತ್ತು ಪ್ರಗತಿ ಕಾಣಬೇಕಾಗಿದೆ. ಇದಕ್ಕಾಗಿ ನಮ್ಮ‌ ಸರ್ಕಾರ ಈಗಾಗಲೇ ಸಂಸ್ಥೆಗೆ 10 ಎಕರೆ ಜಾಗ ಒದಗಿಸಿದೆ. ಇಷ್ಟಲ್ಲದೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸಲು ನಾವು ಸಿದ್ಧರಿದ್ದೇವೆ. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು (AIISH), ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಏಷ್ಯಾದ ಅತ್ಯುತ್ತಮ ಸಂಸ್ಥೆಗಳಲ್ಲೊಂದಾಗಿರುವುದು ನಮ್ಮ ಜಿಲ್ಲೆಯ ಮತ್ತು ರಾಜ್ಯದ ಹೆಮ್ಮೆ ಎಂದರು.

ಬಿಜೆಪಿ ಧರ್ಮಸ್ಥಳ ಚಲೋ: ಬುರುಡೆ ಗ್ಯಾಂಗ್ ಷಡ್ಯಂತ್ರ ತನಿಖೆ ಎನ್‌ಐಎಗೆ ಕೊಡಲಿ, ಸೌಜನ್ಯಗೂ ನ್ಯಾಯ ಸಿಗಲಿ!

ಧ್ವನಿಯಿಲ್ಲದವರಿಗೆ ಧ್ವನಿಯಾಗಿರುವ, ಕಿವಿ ಕೇಳದೆ ಮೌನವಾಗಿರುವವರಿಗೆ ಮಾತಿನ ಚೈತನ್ಯ ತುಂಬಿರುವ ಇಂಥ ಸಂಸ್ಥೆಯು ಮೈಸೂರಿನಲ್ಲಿರುವುದು ಹಾಗೂ ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಮನುಷ್ಯರಿಗೆ ದೇಹದ ಎಲ್ಲಾ ಅಂಗಗಳು ಮುಖ್ಯವಾದರೂ ಕಣ್ಣು, ಕಿವಿಗಳು ಅತಿ ಮುಖ್ಯವಾದ ಅಂಗಗಳಾಗಿವೆ. ದೃಷ್ಟಿ ಮತ್ತು ಶಬ್ಧಗಳ ಗ್ರಹಿಕೆಯು ಮನುಷ್ಯರ ಮಾತುಗಳನ್ನು ರೂಪಿಸುತ್ತವೆ ಹಾಗೂ ನಿಯಂತ್ರಿಸುತ್ತವೆ. 2011 ರ ರಾಷ್ಟ್ರೀಯ ಜನಗಣತಿಯ ಪ್ರಕಾರ ರಾಜ್ಯದಲ್ಲಿ 3.3 ಲಕ್ಷ ಜನರು ಮಾತು ಬಾರದವರು ಹಾಗೂ ಕಿವಿ ಕೇಳಿಸದವರಿದ್ದಾರೆ. ಶೇ.0.5 ರಷ್ಟಿರುವ ಈ ಅಸಹಾಯಕರು ನಮಗೆ ಅಂಕಿ ಸಂಖ್ಯೆಗಳಲ್ಲ, ಜೀವಂತ ಮನುಷ್ಯರ ನಿರಂತರ ಕಷ್ಟದ ಉದಾಹರಣೆಗಳು. ಹಾಗಾಗಿ ಈ ಸಮಸ್ಯೆಯಿರುವವರನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ನಾಗರಿಕ ಸಮಾಜದ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ನವಜಾತ ಶಿಶು ತಪಾಸಣೆಗೆ ಎಲ್ಲ ಆಸ್ಪತ್ರೆಗಳಲ್ಲೂ ಜಾಗ ಕೊಡುತ್ತೇವೆ:

1966ರಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂದಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ, ಚಿಕಿತ್ಸೆ, ಪುನರ್ವಸತಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಒದಗಿಸುತ್ತಿರುವ ಮಹತ್ವದ ರಾಷ್ಟ್ರೀಯ ಸಂಸ್ಥೆಯಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿರುವ ಈ ಸಂಸ್ಥೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು Centre of Excellence ಎಂದು ಗುರುತಿಸಿದ್ದರೆ, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು Science and Technology Institute ಎಂದು ಗುರುತಿಸಿದೆ. ಈ ಸಂಸ್ಥೆಯ ಹೊರವಲಯ ಸೇವಾ ಕೇಂದ್ರಗಳು ಮತ್ತು ನವಜಾತ ಶಿಶು ತಪಾಸಣೆ ಘಟಕಗಳಿಗೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ಥಳಾವಕಾಶ ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು.

ಶ್ರವಣ ಸಂಜೀವಿನಿ ಯೋಜನೆಗೆ ₹32 ಕೋಟಿ ಮೀಸಲು:

ರಾಜ್ಯ ಸರ್ಕಾರದ ಪ್ರಾಯೋಜಿತ ಕಾಕ್ಲಿಯರ್ ಇಂಪ್ಲಾಂಟ್ ಕಾರ್ಯಕ್ರಮವಾದ 'ಶ್ರವಣ ಸಂಜೀವಿನಿ' ಯೋಜನೆಗೆ ರಾಜ್ಯ ಸರ್ಕಾರವು 2024-25ರ ಬಜೆಟ್‌ನಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ದುಬಾರಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸಲು 32 ಕೋಟಿ ರೂಗಳನ್ನು ಮೀಸಲಿಟ್ಟಿದೆ. ಈ ಸಂಸ್ಥೆಯ ಕ್ಲಿನಿಕಲ್ ಮತ್ತು ಪುನರ್ವಸತಿ ಕಾರ್ಯವನ್ನು ಇನ್ನಷ್ಟು ವಿಸ್ತರಿಸಲು ಪೂರಕವಾಗಿ ವರುಣಾದಲ್ಲಿ ನಮ್ಮ ಸರ್ಕಾರ ಉಚಿತವಾಗಿ 10 ಎಕರೆ ಜಮೀನನ್ನು ಸಂಸ್ಥೆಗೆ ನೀಡಿದೆ. ಸಂಸ್ಥೆಯ ಅಂಗಳದಲ್ಲಿ ರೂ.2.55 ಕೋಟಿ ವೆಚ್ಚದಲ್ಲಿ ಮೈಸೂರು ಮಹಾನಗರ ಪಾಲಿಕೆಯಿಂದ ಅಂಗವಿಕಲ ಮಕ್ಕಳಿಗೆ ಆಂಫಿಥಿಯೇಟರ್ ನಿರ್ಮಾಣ, ಅಂಗವಿಕಲ ಸ್ನೇಹಿ ಸಲಕರಣೆಗಳು, ಉದ್ಯಾನವನ ಅಭಿವೃದ್ಧಿ, ಮಾತು ಬಾರದ, ಕಿವಿ ಕೇಳದ ಮಕ್ಕಳಿಗೆ ನಿರೀಕ್ಷಣಾ ಕೊಠಡಿ ಮತ್ತು ಮ್ಯೂಸಿಯಂ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!