ಬಿಜೆಪಿ ಧರ್ಮಸ್ಥಳ ಚಲೋ: ಬುರುಡೆ ಗ್ಯಾಂಗ್ ಷಡ್ಯಂತ್ರ ತನಿಖೆ ಎನ್‌ಐಎಗೆ ಕೊಡಲಿ, ಸೌಜನ್ಯಗೂ ನ್ಯಾಯ ಸಿಗಲಿ!

Published : Sep 01, 2025, 07:26 PM IST
BJP Dharmasthala Rally

ಸಾರಾಂಶ

ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ವಿರೋಧ ಮತ್ತು ಬುರುಡೆ ಗ್ಯಾಂಗ್ ಷಡ್ಯಂತ್ರದ ತನಿಖೆಯನ್ನು ಸಿಬಿಐ ಅಥವಾ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ನಾಯಕರು 'ಧರ್ಮಸ್ಥಳ ಚಲೋ' ಸಮಾವೇಶದಲ್ಲಿ ಒಕ್ಕೂರಲ ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ, ಸೌಜನ್ಯಾ ಕೇಸಿನ ತನಿಖೆಯನ್ನೂ ಸ್ವಾಗತ ಕೋರಿದರು.

ದಕ್ಷಿಣ ಕನ್ನಡ (ಸೆ.01): ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ವಿಚಾರವನ್ನು ಖಂಡಿಸಿ ಬಿಜೆಪಿ ರಾಜ್ಯ ಘಟಕವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಧರ್ಮಸ್ಥಳ ಚಲೋ' ಬೃಹತ್ ಸಮಾವೇಶವನ್ನು ನಡೆಸಿತು. ಎಸ್‌ಐಟಿ ತನಿಖೆಯಿಂದ ನ್ಯಾಯ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ, ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಅಥವಾ ಎನ್ಐಎ ತನಿಖೆ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು.

ಬಿ.ವೈ. ವಿಜಯೇಂದ್ರ: 'ಇದು ಸ್ವಾಭಿಮಾನಿ ಹಿಂದೂ ಕಾರ್ಯಕರ್ತರ ಹೋರಾಟ'

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, 'ಧರ್ಮಸ್ಥಳ ಚಲೋ ರಾಜಕೀಯ ಹೋರಾಟ ಎಂದು ಟೀಕಿಸಿದವರಿಗೆ, ಇದು ಪಕ್ಷದ ಧ್ವಜದಿಂದ ನಡೆಯುತ್ತಿರುವ ಹೋರಾಟವಲ್ಲ. ಇದು ಸ್ವಾಭಿಮಾನಿ ಹಿಂದೂ ಕಾರ್ಯಕರ್ತರು ಮತ್ತು ಭಕ್ತರ ಹೋರಾಟ' ಎಂದು ಸ್ಪಷ್ಟಪಡಿಸಿದರು. 'ಕೋಟ್ಯಾಂತರ ಭಕ್ತರ ಶ್ರದ್ಧಾಕೇಂದ್ರವಾದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಮೌನವಾಗಿ ಕುಳಿತಿದೆ. ಪ್ರಾಥಮಿಕ ತನಿಖೆಯನ್ನೂ ನಡೆಸದೆ ಭೂಮಿ ಅಗೆದು, ಕ್ಷೇತ್ರದ ಘನತೆಗೆ ಕುಂದು ತಂದಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಎಸ್‌ಐಟಿ ತನಿಖೆಯಿಂದ ನ್ಯಾಯ ಸಿಗುತ್ತದೆ ಎಂದು ಸ್ವಾಗತ ಮಾಡಿದ್ದೆವು. ಆದರೆ, ನ್ಯಾಯದ ಭರವಸೆ ಕಾಣಿಸದೇ, ಒಬ್ಬೊಬ್ಬರನ್ನೇ ರಕ್ಷಣೆ ಮಾಡಲಾಗುತ್ತಿದೆ. ಹೀಗಾಗಿ, ಧರ್ಮಸ್ಥಳ ಪ್ರಕರಣವನ್ನು ಸಿಬಿಐ ಅಥವಾ ಎನ್‌ಐಎಗೆ ತನಿಖೆಗೆ ವಹಿಸಬೇಕು. ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಆರ್. ಅಶೋಕ್: ‘ಎಸ್ಐಟಿ ಮೀನು ಹಿಡಿಯುತ್ತಿದೆ, ತಿಮಿಂಗಿಲ ಹಿಡಿಯಲಿ’

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, 'ಸೌಜನ್ಯ ಪ್ರಕರಣದ ತನಿಖೆಗಾಗಿ ರಚಿಸಲಾದ ಎಸ್‌ಐಟಿ ಮೀನು ಹಿಡಿಯುತ್ತಿದೆ. ಅವರಿಗೆ ಬೇಕಾಗಿರುವುದು ತಿಮಿಂಗಿಲಗಳು. ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗೆ ಒಪ್ಪಿಸಬೇಕು. ಆಗ ಮಾತ್ರ ಸತ್ಯ ಹೊರಬರುತ್ತದೆ ಮತ್ತು ನ್ಯಾಯ ಸಿಗುತ್ತದೆ. ಯಾವುದಾದರೂ ಮಸೀದಿಯ ಮುಂದೆ ನಿಂತು ಇದು ಮುಸ್ಲಿಮರದ್ದಲ್ಲ ಎಂದು ಹೇಳುವ ತಾಕತ್ತು ಇದೆಯೇ? ಎಂದು ಸವಾಲೆಸೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ನಕ್ಸಲ್ ಗ್ಯಾಂಗ್' ಸುತ್ತುವರಿದಿದೆ ಎಂದು ಆರೋಪಿಸಿದ ಅಶೋಕ್, ಕಾಂಗ್ರೆಸ್ ಸರ್ಕಾರ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ದೂರಿದರು.

ಪ್ರಹ್ಲಾದ್ ಜೋಶಿ: 'ಕಾಂಗ್ರೆಸ್ ರಕ್ತದಲ್ಲೇ ಹಿಂದೂ ದ್ವೇಷ'

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ 'ಬುರುಡೆ ಸರ್ಕಾರ' ಎಂದು ವಾಗ್ದಾಳಿ ನಡೆಸಿದರು. 'ಕಾಂಗ್ರೆಸ್ ಸದಾ ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಸಿದೆ. ಇದು ಅವರ ರಕ್ತದಲ್ಲೇ ಬಂದ ಗುಣ" ಎಂದು ಆರೋಪಿಸಿದರು. 'ಶಬರಿಮಲೆ, ಶನಿ ಸಿಂಗಾಪುರ ಪ್ರಕರಣಗಳ ನಂತರ ಈಗ ಧರ್ಮಸ್ಥಳದ ಮೇಲೆ ದಾಳಿ ಮಾಡಲು ಹೊರಟಿದ್ದಾರೆ. ಹಿಂದೂಗಳ ಧ್ವನಿಯನ್ನು ಅಡಗಿಸಲು ಈ ಷಡ್ಯಂತ್ರ ಮಾಡಲಾಗಿದೆ. ಧರ್ಮಸ್ಥಳವು ಸಮಾಜದ ಎಲ್ಲ ವರ್ಗದ ಜನರನ್ನು ಆಕರ್ಷಿಸುತ್ತದೆ, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ತಮ್ಮ ಭಕ್ತಿಯನ್ನು ಇಲ್ಲಿ ಸಮರ್ಪಿಸುತ್ತಾರೆ. ಅವರ ನಂಬಿಕೆಗಳಿಗೆ ಧಕ್ಕೆ ತಂದಿರುವುದು ಸರಿಯಲ್ಲ ಎಂದು ತಿಳಿಸಿದರು

ಇತರ ನಾಯಕರ ಅಭಿಪ್ರಾಯಗಳು

  • ಛಲವಾದಿ ನಾರಾಯಣ ಸ್ವಾಮಿ: ಸೌಜನ್ಯ ಪ್ರಕರಣದ ಹೋರಾಟಕ್ಕೆ ಬೆಂಬಲ ನೀಡಿ, 'ಈ ಸರ್ಕಾರ 'ಬುರುಡೆ'ಗಳೊಂದಿಗೆ ಸೇರಿ ಜನರನ್ನು ದಾರಿ ತಪ್ಪಿಸುತ್ತಿದೆ. ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
  • ಎಸ್.ಆರ್. ವಿಶ್ವನಾಥ್: ಸೌಜನ್ಯ ಪ್ರಕರಣದ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದರ ನೆಪದಲ್ಲಿ ದುಷ್ಟಕೂಟಗಳು ಕ್ಷೇತ್ರದ ಹೆಸರು ಕೆಡಿಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕನೂ ಈ ಸಮಾವೇಶಕ್ಕೆ ಬಂದು ಭಕ್ತರಿಗೆ ಧೈರ್ಯ ಹೇಳಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
  • ತುಮಕೂರು ಶಾಸಕ ಸುರೇಶ್ ಗೌಡ: ಈ ಪ್ರಕರಣದ ಹಿಂದೆ ದೆಹಲಿಯ ಕೆಲವು ನಾಯಕರ ಕೈವಾಡವಿದೆ. ಯುಟ್ಯೂಬರ್ ಸಮೀರ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ನ್ಯಾಯಾಧೀಶರಿಂದ ತನಿಖೆ ಮಾಡಿಸಿ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಇದು ಕೇವಲ ಟ್ರೈಲರ್ ಅಷ್ಟೇ. ಸರ್ಕಾರ ಕಿತ್ತೊಗೆಯುವ ದಿನ ದೂರವಿಲ್ಲ' ಎಂದು ಎಚ್ಚರಿಕೆ ನೀಡಿದರು.

ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ಧರ್ಮಸ್ಥಳ ಚಲೋ ಬೃಹತ್ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂ ಸದಾನಂದ ಗೌಡ, ಸಂಸದರಾದ ತೇಜಸ್ವಿಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ವಿಶ್ವನಾಥ, ಚೌಟ, ಸುನೀಲ್ ಕುಮಾರ್, ಮಾಜಿ ಸಚಿವ ಶ್ರೀರಾಮುಲು, ಶಾಸಕ ಮುನಿರತ್ನ, ಛಲವಾದಿ ನಾರಾಯಣ ಸ್ವಾಮಿ, ರವಿ ಕುಮಾರ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಭರತ್ ಶೆಟ್ಟಿ, ಅಪ್ಪಚ್ಚು ರಂಜನ್, ಮುನಿರಾಜು, ಸುರೇಶ್ ಗೌಡ, ಸಿಮೆಂಟ್ ಮಂಜು, ದೊಡ್ಡನಗೌಡ, ದಿನಕರ್ ಸೇರಿ ಎಲ್ಲ ನಾಯಕರು ಒಟ್ಟಾಗಿ ಸೌಜನ್ಯ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಅಥವಾ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಗೆ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಧರ್ಮಸ್ಥಳದ ವಿರುದ್ಧದ ಅಪಪ್ರಚಾರವನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!