
ಹಾಸನ(ಡಿ.04) ಕಳೆದ 8 ವರ್ಷಗಳಿಂದ ಮೈಸೂರು ತಾಯಿ ಚಾಮಂಡೇಶ್ವರಿ ಸೇವೆಗೈಯುತ್ತಾ ಜನರ ಪ್ರೀತಿಗೆ ಪಾತ್ರವಾಗಿದ್ದ ಅರ್ಜುನ ಆನೆ ದುರ್ಘಟನೆಯಲ್ಲಿ ಮೃತಪಟ್ಟಿದೆ. ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಏಕಾಂಗಿಯಾಗಿ ಹೋರಾಡಿದ ಅರ್ಜುನ ಮೃತಪಟ್ಟಿದೆ. ಅರ್ಜುನ ಧೈರ್ಯ ಸಾಹಸದಿಂದ ಮಾವುತ ಸೇರಿದಂತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರ್ಜುನ ಇನ್ನಿಲ್ಲ ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ ಕನ್ನಡಿಗರಿಗ ಆಘಾತವಾಗಿದೆ. ಸಿಎಂ ಸಿದ್ದರಾಮಯ್ಯ, ಸಚಿವರು ಸೇರಿದಂತೆ ಗಣ್ಯರು ಅರ್ಜುನನಿಗೆ ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅರ್ಜುನ ಜೊತೆಗಿನ ಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ಜನ, ಕಣ್ಮೀರ ವಿದಾಯ ಹೇಳುತ್ತಿದ್ದಾರೆ.
ಸಕಲೇಶಪುರದ ಬಾಳೆಕೆರೆ ಅರಣ್ಯದ ಅಂಚಿನಲ್ಲಿ ಪುಂಡಾನೆ ಸೆರೆಹಿಡಿಯಲು ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ಆರಂಭಿಸಿತ್ತು. ಪುಂಡಾನೆ ಸೆರೆ ಹಿಡಿಯುವಲ್ಲಿ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದ ಅರ್ಜುನ ಮುಂಚೂಣಿಯಲ್ಲಿ ನಿಂತು ಕಾರ್ಯಚರಣೆ ನಡೆಸುತ್ತಿತ್ತು. ಈ ವೇಳೆ ಕೆರಳಿದ ಪುಂಡಾನೆ ಏಕಾಏಕಿ ದಾಳಿ ನಡೆಸಿದೆ. ಅರ್ಜುನ ಒಂದಿಂಚು ಕದಲದೆ ಹೋರಾಡಿದ್ದಾನೆ. ಅರ್ಜುನನ ಜೊತೆಗಿದ್ದ ಆನೆಗೆ ಓಡಿದೆ. ಇತ್ತ ಅಧಿಕಾರಿಗಳು, ಮಾವುತರು ಮೇಲೂ ಪಂಡಾನೆ ದಾಳಿಗೆ ಮುಂದಾಗಿದೆ. ಆದರೆ ಅರ್ಜುನ ವೀರಾವೇಶದಿಂದ ಹೋರಾಡಿ ಎಲ್ಲರನ್ನೂ ಕಾಪಾಡಿದ್ದಾನೆ. ದುರಂತ ಎಂದರೆ ಈ ಕಾದಾಟದಲ್ಲಿ ಅರ್ಜುನ ಮೃತಪಟ್ಟಿದ್ದಾನೆ.
ಮೈಸೂರು ದಸರಾದಲ್ಲಿ 7 ಬಾರಿ ಅಂಬಾರಿ ಹೊತ್ತ ಅರ್ಜುನ ಆನೆ ವೀರಮರಣ: ಮಾವುತನ ಪ್ರಾಣಕ್ಕಾಗಿ ತನ್ನ ಜೀವ ಬಲಿದಾನ
ಅರ್ಜುನ ಸಾವಿನ ಸುದ್ದಿ ಬೆನ್ನಲ್ಲೇ ತೀವ್ರ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂಬನಿ ಮಿಡಿದಿದ್ದಾರೆ. ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಪಾತ್ರವಾಗಿದ್ದ ಆನೆ ‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು. ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇನ್ನು ಸಚಿವ ಈಶ್ವರ್ ಖಂಡ್ರೆ ಕೂಡ ಸಂತಾಪ ಸೂಚಿಸಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಹಲವು ಬಾರಿ ಅಂಬಾರಿ ಹೊತ್ತಿದ್ದ 64 ವರ್ಷದ ಅರ್ಜುನ ಆನೆಯ ಸಾವಿನ ಸುದ್ದಿ ತಿಳಿದು ಬಹಳ ದುಃಖವಾಗಿದೆ. ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯ ವೇಳೆ ದುರ್ಘಟನೆ ಸಂಭವಿಸಿದ್ದು, ಮದಗಜವೊಂದು, ಅರ್ಜುನನ ಮೇಲೆ ದಾಳಿ ಮಾಡಿ, ತನ್ನ ದಂತದಿಂದ ಚುಚ್ಚಿ ಘಾಸಿಗೊಳಿಸಿ, ಸಾವಿಗೆ ಕಾರಣವಾಗಿರುವುದು ಅತ್ಯಂತ ದುರಾದೃಷ್ಟಕರ.ಕಾರ್ಯಾಚರಣೆಯಲ್ಲಿ ಪುಂಡಾನೆ ರೌದ್ರಾವತಾರ ತಾಳಿ, ಅರ್ಜುನನ ಮೇಲೆ ದಾಳಿ ಮಾಡಿದೆ. ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಜಗ್ಗದೆ ದಾಳಿ ಮಾಡಿದೆ. ಮಾವುತ ಮತ್ತು ಪಶುವೈದ್ಯರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಮೂರು ಆನೆಗಳು ಹಿಮ್ಮೆಟ್ಟಿವೆ. ಆದರೆ ಅರ್ಜುನ ಪುಂಡಾನೆಯೊಂದಿಗೆ ಏಕಾಂಗಿಯಾಗಿ ಹೋರಾಡುವಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜುನ ಆನೆ ಈ ಹಿಂದೆ ಹಲವು ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿತ್ತು ಮತ್ತು ತರಬೇತಿ ಕೂಡಾ ಪಡೆದಿತ್ತು. ತಾಯಿ ಶ್ರೀ ಚಾಮುಂಡೇಶ್ವರಿಯು ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಖಂಡ್ರೆ ಟ್ವೀಟ್ ಮಾಡಿದ್ದಾರೆ.
ಹಾಸನದಲ್ಲಿ ನಾಡಿಗೆ ಲಗ್ಗೆಯಿಟ್ಟ ಕಾಡಾನೆಗಳ ಕಾರ್ಯಾಚರಣೆ: 4ನೇ ದಿನ ಇನ್ನೊಂದು ಆನೆ ಸೆರೆ !
ಸಾಮಾಜಿಕ ಮಾಧ್ಯಮಲ್ಲಿ ಕನ್ನಡಿಗರು ಅರ್ಜುನನಿಗೆ ನೋವಿನ ವಿದಾಯ ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ