ಇಂದಿರಾ ಕ್ಯಾಂಟೀನಲ್ಲಿ ಚಪಾತಿ, ಮುದ್ದೆ ಭಾಗ್ಯ?: ಹೊಸ ಆಹಾರದ ಮೆನು ಸಿದ್ಧಪಡಿಸುವಂತೆ ಸಿದ್ದು ಸೂಚನೆ

By Kannadaprabha NewsFirst Published Jun 4, 2023, 4:00 AM IST
Highlights

ಗ್ಯಾರಂಟಿ ಯೋಜನೆಗಳ ಜಾರಿ ನಂತರ ಇದೀಗ ಇಂದಿರಾ ಕ್ಯಾಂಟೀನ್‌ಗಳ ದುರಸ್ತಿಯತ್ತ ರಾಜ್ಯ ಸರ್ಕಾರ ಗಮನಹರಿಸಿದೆ. ಅದರಲ್ಲೂ ಕ್ಯಾಂಟೀನ್‌ಗಳಲ್ಲಿ ನೀಡಲು ಹೊಸದಾಗಿ ಆಹಾರದ ಮೆನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಬೆಂಗಳೂರು (ಜೂ.04): ಗ್ಯಾರಂಟಿ ಯೋಜನೆಗಳ ಜಾರಿ ನಂತರ ಇದೀಗ ಇಂದಿರಾ ಕ್ಯಾಂಟೀನ್‌ಗಳ ದುರಸ್ತಿಯತ್ತ ರಾಜ್ಯ ಸರ್ಕಾರ ಗಮನಹರಿಸಿದೆ. ಅದರಲ್ಲೂ ಕ್ಯಾಂಟೀನ್‌ಗಳಲ್ಲಿ ನೀಡಲು ಹೊಸದಾಗಿ ಆಹಾರದ ಮೆನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವ ಸಲುವಾಗಿ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೊಳಿಸಲಾಗಿತ್ತು. ಅದಾದ ನಂತರ ಬಂದ ಸರ್ಕಾರಗಳು ಇಂದಿರಾ ಕ್ಯಾಂಟೀನ್‌ ಬಗ್ಗೆ ಅಷ್ಟಾಗಿ ಮುತುವರ್ಜಿ ವಹಿಸದ ಕಾರಣ ಕ್ಯಾಂಟೀನ್‌ಗಳಲ್ಲಿ ಸಮರ್ಪಕವಾಗಿ ಆಹಾರ ದೊರೆಯದಂತಾಗಿತ್ತು. 

ಇದೀಗ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಿದ್ದು ತಮ್ಮ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಕಾಯಕಲ್ಪ ನೀಡಲು ಮುಂದಾಗಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಇರುವ 250ಕ್ಕೂ ಹೆಚ್ಚಿನ ಇಂದಿರಾ ಕ್ಯಾಂಟೀನ್‌ಗಳ ದುರಸ್ತಿ ಸೇರಿ ಇನ್ನಿತರ ಕಾರ್ಯ ಮಾಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲೆಯ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಹೊಸ ಬಗೆಯಲ್ಲಿ ಮತ್ತೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಪ್ರವಾಹ ಅವಘಡ ತಡೆಗಟ್ಟಲು ಎಚ್ಚೆ​ತ್ತು​ಕೊ​ಳ್ಳಿ: ಆರಗ ಜ್ಞಾನೇಂದ್ರ

ಚಪಾತಿ, ಮುದ್ದೆ, ಸಿಹಿ ತಿಂಡಿ: ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡಬೇಕಾದ ಆಹಾರದ ಕುರಿತಂತೆ ಹೊಸ ಬಗೆಯ ಮೆನು ಸಿದ್ಧಪಡಿಸಲಾಗುತ್ತಿದೆ. ಈವರೆಗೆ ಬೆಳಗ್ಗೆ ಇಡ್ಲಿ ಹಾಗೂ ರೈಸ್‌ಬಾತ್‌ ನೀಡಲಾಗುತ್ತಿತ್ತು. ಆದರೆ, ಹೊಸ ಮೆನುವಿನಂತೆ ಇಡ್ಲಿ ಜತೆಗೆ ವಡೆ ಹಾಗೂ ವಾರದ ಎಲ್ಲ 7 ದಿನಗಳಲ್ಲಿ ಒಂದು ಬಗೆಯ ರೈಸ್‌ ಬಾತ್‌ ಅನ್ನು ನೀಡಲಾಗುತ್ತದೆ. ಈ ನಡುವೆ, ಈಗ ಮಧ್ಯಾಹ್ನದ ಊಟಕ್ಕೆ ಸಂಬಂಧಿಸಿದಂತೆ ಅನ್ನ, ಸಾಂಬಾರ್‌ ಜತೆಗೆ ಚಪಾತಿ ಅಥವಾ ಮುದ್ದೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ವಾರದಲ್ಲಿ ಮೂರು ದಿನ ಸಿಹಿ ತಿಂಡಿ ನೀಡುವುದರ ಸಾಧಕ-ಬಾಧಕಗಳ ಕುರಿತಂತೆ ಚರ್ಚಿಸಲಾಗುತ್ತಿದೆ. ಮೂರು ದಿನಗಳಲ್ಲಿ ತಲಾ ಒಂದು ದಿನ ಹೋಳಿಗೆ, ಅಕ್ಕಿ ಪಾಯಸ ಮತ್ತು ಕೇಸರಿಬಾತ್‌ ನೀಡುವ ಸಾಧ್ಯತೆಗಳಿವೆ. ಹೀಗೆ ಆಹಾರದ ಮೆನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು. ನಂತರ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ಅದನ್ನು ನೀಡಿ ಅದರ ಪ್ರಕಾರ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವಂತೆ ಸೂಚಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನೀಡಲಾಗುವ ಆಹಾರವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಕುರಿತು ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಗತಿ ಕುರಿತ ವರದಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಡಳಿತ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಲಿದೆ. ಅದನ್ನು ಅವಲೋಕಿಸಿ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಪುನಶ್ಚೇತಗೊಳಿಸಲಾಗುತ್ತದೆ.

ಸಂಸತ್‌ ಭವನ ಉದ್ಘಾಟನೆ ಮೋದಿ ಪಟ್ಟಾಭಿಷೇಕದಂತೆ ನಡೆದಿದೆ: ಎಚ್‌.ವಿಶ್ವನಾಥ್‌ ಆರೋಪ

ಬೆಂಗಳೂರಿನಲ್ಲಿ ವಾರ್ಡ್‌ಗೊಂದರಂತೆ ಇಂದಿರಾ ಕ್ಯಾಂಟೀನ್‌ ಕಾರ್ಯನಿರ್ವಹಿಸುತ್ತಿದೆ. ಕ್ಯಾಂಟೀನ್‌ ಕಟ್ಟಡ ಇಲ್ಲದ ವಾರ್ಡ್‌ಗಳಲ್ಲಿ ಮೊಬೈಲ್‌ ಕ್ಯಾಂಟೀನ್‌ಗಳು ಸೇವೆ ನೀಡುತ್ತಿವೆ. ಇದು ಜನರ ಬಳಕೆಗಾಗಿದೆ. ಅದೇ ರೀತಿ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನಕ್ಕೆ ಬರುವವರು, ಅಲ್ಲಿ ಕಾರ್ಯನಿರ್ವಹಿಸುವವರಿಗಾಗಿ ಹೊಸದಾಗಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಬಿಬಿಎಂಪಿ ನಿರ್ಧರಿಸಿದೆ. ಈ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ.

click me!