ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಮಂಜುನಾಥನ ದರ್ಶನ ಪಡೆದು ಡಾ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾತುಕತೆ ನಡೆಸಿದರು.
ದಕ್ಷಿಣ ಕನ್ನಡ (ಮೇ.25): ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.
ಸಂಜೆ ಮಂಗಳೂರು ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ, ಡಿಸಿಎಂ ಅದಕ್ಕೂ ಮೊದಲು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಗ್ಯಾರಂಟಿ ಯೋಜನೆ ಸಕ್ಸೆಸ್ ಆದ ಹಿನ್ನೆಲೆ ಮಂಜುನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಪಡೆದ ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನ ಭೇಟಿ ಮಾಡಿದರು. ಈ ವೇಳೆ ಧರ್ಮಾಧಿಕಾರಿ ಹೆಗ್ಗಡೆಯವರ ಕಾಲಿಗೆ ಬಿದ್ದು ಡಿಕೆ ಶಿವಕುಮಾರ ಆಶೀರ್ವಾದ ಪಡೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ರಾಜ್ಯದ ದೊರೆಗೆ ಪೂರ್ಣ ಕುಂಭ, ವಾದ್ಯಘೋಷಗಳೊಂದಿಗೆ ಕ್ಷೇತ್ರದ ಪರವಾಗಿ ಹೆಗ್ಗಡೆ ಸಹೋದರ ಹರ್ಷೇಂದ್ರ ಹೆಗ್ಗಡೆ ಸ್ವಾಗತಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಮುಖ್ಯ ದ್ವಾರದಿಂದ ನಡೆದುಕೊಂಡೇ ದೇವಸ್ಥಾನ ಪ್ರವೇಶಿಸಿದರು.
ಜೈಶ್ರೀರಾಮ್ ಘೊಷಣೆ
ಸಿಎಂ ಸಿದ್ದರಾಮಯ್ಯ ದೇವಸ್ಥಾನ ಪ್ರವೇಶದ ವೇಳೆ ಸಾಲುಗಟ್ಟಿ ನಿಂತ ಸಾವಿರಾರು ಭಕ್ತರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಕ್ಷೇತ್ರಕ್ಕೆ ಸಿಎಂ ಆಗಮನ ಹಿನ್ನೆಲೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅರ್ಧ ಗಂಟೆಯಿಂದ ನಿರ್ಬಂಧಿಸಲಾಗಿತ್ತು. ತಾಸುಗಟ್ಟಲೇ ಕಾದರೂ ಸಿಎಂ ಡಿಸಿಎಂ ಆಗಮಿಸದ ಹಿನ್ನೆಲೆ ಸಿಎಂ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಸಿಎಂ ಆಗಮಿಸುತ್ತಿದ್ದಂತೆ ಪ್ರವೇಶ ದ್ವಾರದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದರು.