
ಬೆಂಗಳೂರು (ನ.5): ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿಯ ಜಾನಪದ ಕ್ರೀಡಾಕೂಟ ಕಂಬಳ ಆಯೋಜಿಸಲಾಗಿದ್ದು, ನ.25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕ್ರೀಡಾಕೂಟಕ್ಕೆ ದಿನ ನಿಗದಿಪಡಿಸಲಾಗಿದೆ. ತುಳು ಕೂಟಕ್ಕೆ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ಕಂಬಳ ನಡೆಯಲಿದೆ. ಅದಕ್ಕಾಗಿ ಕಂಬಳ ಓಟಕ್ಕೆ ಕೆರೆಯನ್ನು ಸಿದ್ಧಪಡಿಸಲಾಗಿದೆ. ಸಕಲ ಸಿದ್ಧತೆ ನಡೆಯುತ್ತಿದೆ.
ಇದೇ ಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ 'ಬೆಂಗಳೂರು ಕಂಬಳ'ಕ್ಕೆ ಕನಿಷ್ಠ 3ರಿಂದ 5 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಕಂಬಳ ಸಮಿತಿ (ರಿ.) ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ಬೆಂಗಳೂರಿಗೆ ಬರ್ತಿದ್ದಾರೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ: ಯಾಕೆ ಗೊತ್ತಾ?
ಬೆಂಗಳೂರು ಕಂಬಳ ತಯಾರಿ ಸಲುವಾಗಿ ನ.4ರಂದು ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ-ಭಾಷಾ ಸಂಘಟನೆಗಳ ಜೊತೆ ನಡೆದ ಬೃಹತ್ ಸಮಾಲೋಚನಾ ಸಭೆ ಬಳಿಕ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಈ ಬಗ್ಗೆ ಪ್ರಕಾಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕರಾವಳಿಯ ಸಮಸ್ತ ಸಮುದಾಯದವರು ಒಂದೆಡೆ ಒಗ್ಗಟ್ಟಾಗಿ ಸೇರುವ ಬೃಹತ್ ವೇದಿಕೆ ಇದಾಗಲಿದೆ ಎಂದರು. ಇಂದಿನ ಸಮಾಲೋಚನಾ ಸಭೆಯಲ್ಲಿ ಕರಾವಳಿಯ ವಿವಿಧ ಭಾಷೆ-ಜಾತಿಗಳ 50ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದು ಅವರೊಂದಿಗೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದರು.
ಬೆಂಗಳೂರು ಕಂಬಳದಲ್ಲಿ ಗೆದ್ದ ಕೋಣಗಳಿಗೆ ಕೊಡಲಾಗುವ ಬಹುಮಾನ ಎಷ್ಟು ಗೊತ್ತಾ?
ಬೆಂಗಳೂರು ಕಂಬಳಕ್ಕೆ ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಆ ಎಲ್ಲ ಕೋಣಗಳನ್ನು ನ.23ರಂದು ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ ಮಾಡಿ ಬೆಂಗಳೂರಿಗೆ ಕಳಿಸಿಕೊಡಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದರು. ಇದರ ಜೊತೆಗೆ ಈ ಎಲ್ಲಾ ಕೋಣಗಳನ್ನು ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದು. ಅಲ್ಲದೆ ಪ್ರತಿ ತಾಲೂಕಲ್ಲೂ ಸ್ವಾಗತ-ಬೀಳ್ಕೊಡುಗೆ ಇರಲಿದೆ ಎಂದರು.
ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ, ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. 'ಬೆಂಗಳೂರು ಕಂಬಳ ನಮ್ಮ ಕಂಬಳ' ಎಂಬ ಥೀಮ್ ಸಾಂಗ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಥೀಮ್ ಸಾಂಗ್ ವಿ.ಮನೋಹರ್ ಸಾಹಿತ್ಯ, ಗುರುಕಿರಣ್ ಸಂಗೀತ ಸಂಯೋಜನೆ, ಮಣಿಕಾಂತ್ ಕದ್ರಿ ಪ್ರೋಗ್ರಾಮಿಂಗ್‌ನಲ್ಲಿ ಮೂಡಿ ಬಂದಿದೆ.
ರಾಜ್ಯ ಸರ್ಕಾರದಿಂದ 1 ಕೋಟಿ ರೂ. ಘೋಷಣೆ: ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1 ಕೋಟಿ ರೂ. ಅನುದಾನ ಘೋಷಿಸಿದ್ದಾರೆ ಎಂದು ಕಂಬಳ ಸಮಿತಿ ಉಪಾಧ್ಯಕ್ಷ ಗುಣರಂಜನ್ ಶೆಟ್ಟಿ ತಿಳಿಸಿದ್ದಾರೆ.
ತಾರಾ ಮೆರುಗು: ಬೆಂಗಳೂರು ಕಂಬಳಕ್ಕೆ ಮಾಜಿ ವಿಶ್ವಸುಂದರಿ ನಟಿ ಐಶ್ವರ್ಯಾ ರೈ, ಕರಾವಳಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಆಗಮಿಸಲಿದ್ದಾರೆ ಎಂದು ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದ್ದಾರೆ.
ಬೆಂಗಳೂರು ಕಂಬಳಕ್ಕೆ ಆಭರಣ ಜುವೆಲ್ಲರ್ಸ್ ಅವರು ಶೀರ್ಷಿಕೆ ಪ್ರಾಯೋಜಕರಾಗಿದ್ದು, ಆಭರಣ ಜುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕಾಮತ್, ಬೆಂಗಳೂರು ಕಂಬಳ ಸಮಿತಿ ಗೌರವ ಸಲಹೆಗಾರ ಉಪೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ