ಮಳೆ ಹಾನಿ ಪ್ರದೇಶಕ್ಕೆ ಇಂದು, ನಾಳೆ ಸಿಎಂ ಬೊಮ್ಮಾಯಿ ಭೇಟಿ: ಪರಿಶೀಲನೆ

By Govindaraj S  |  First Published Jul 12, 2022, 5:15 AM IST

ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಮಳೆಯಿಂದ ವ್ಯಾಪಕವಾಗಿ ಹಾನಿಗೊಳಗಾಗಿರುವ 4 ಜಿಲ್ಲೆಗಳಿಗೆ ಎರಡು ದಿನಗಳ ಪ್ರವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರದಿಂದ ಆರಂಭಿಸಲಿದ್ದಾರೆ. 


ಬೆಂಗಳೂರು (ಜು.12): ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಮಳೆಯಿಂದ ವ್ಯಾಪಕವಾಗಿ ಹಾನಿಗೊಳಗಾಗಿರುವ 4 ಜಿಲ್ಲೆಗಳಿಗೆ ಎರಡು ದಿನಗಳ ಪ್ರವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರದಿಂದ ಆರಂಭಿಸಲಿದ್ದಾರೆ. ಈ ವೇಳೆ ಅವರು ಖುದ್ದಾಗಿ ಮಳೆ ಹಾನಿ ಹಾಗೂ ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ. ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಇದೇ ವೇಳೆ ನಿರ್ದೇಶನ ನೀಡಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿನ ಮಳೆ ಅನಾಹುತ ಪರಿಶೀಲನೆ ನಡೆಸಲಿರುವ ಅವರು ಅನಂತರ ಸಂಬಂಧಪಟ್ಟಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಇಂದು ಕೊಡಗು, ಮಂಗಳೂರಿಗೆ: ಮಂಗಳವಾರ ಬೆಳಗ್ಗೆ 9 ಗಂಟೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಮೈಸೂರಿಗೆ ವಿಶೇಷ ವಿಮಾನದ ಮೂಲಕ ಪ್ರಯಾಣಿಸಲಿದ್ದಾರೆ. ಬೆಳಗ್ಗೆ 9.45ರ ಸುಮಾರಿಗೆ ಮೈಸೂರಿನಿಂದ ರಸ್ತೆ ಮೂಲಕ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಲಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ಮಡಿಕೇರಿಯಲ್ಲಿನ ಪರಿಸ್ಥಿತಿ ಕುರಿತು ವೀಕ್ಷಿಸಲಿದ್ದಾರೆ. ತದ ನಂತರ ಮಂಗಳೂರಿಗೆ ತೆರಳಲಿದ್ದಾರೆ. ಮಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಉಡುಪಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

Tap to resize

Latest Videos

ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೀದಿಗಿಳಿದ ಅನ್ನದಾತರು,ಸಿಎಂ ಕಚೇರಿ ಮುತ್ತಿಗೆ ಯತ್ನ!

ನಾಳೆ ಉಡುಪಿ, ಉತ್ತರ ಕನ್ನಡಕ್ಕೆ: ಬುಧವಾರ ಬೆಳಗ್ಗೆ 9 ಗಂಟೆಗೆ ಮಳೆ ಹಾನಿಗೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡು ಪರಿಹಾರ ಕಾರ್ಯ ಸಂಬಂಧ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ. ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಗೆ ತೆರಳಿ ಅಲ್ಲಿನ ಪರಿಸ್ಥಿತಿ ಕುರಿತು ಅವಲೋಕಿಸಲಿದ್ದಾರೆ. ರಾತ್ರಿ 7.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಅನ್ಯ ಧರ್ಮಿಯರನ್ನು ಗೌರವಿಸಿದಾಗ ಸಂಘರ್ಷ ದೂರ: ಸಿಎಂ ಬೊಮ್ಮಾಯಿ

ಸ್ಥಳದಲ್ಲೇ ಪರಿಹಾರಕ್ಕೆ ಸೂಚಿಸುವೆ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕುರಿತು ಸೋಮವಾರ ಆರ್‌.ಟಿ.ನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಾಗುತ್ತಿದೆ. ಮಲೆನಾಡು, ಕೊಡಗು, ಕರಾವಳಿ ಮತ್ತು ಉತ್ತರ ಕನ್ನಡ ಭಾಗದಲ್ಲಿ ಕಳೆದ 10 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದದ ಮೂಲಕ ಮತ್ತು ನೇರವಾಗಿಯೂ ಮಾತನಾಡಿದ್ದು, ಮಳೆ ತಗ್ಗಿರುವುದರಿಂದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ಸ್ಥಿತಿಗತಿಯನ್ನು ಅವಲಂಬಿಸಿ ಪರಿಹಾರಕ್ಕೆ ಸೂಚನೆ ನೀಡಲಾಗುವುದು’ ಎಂದರು.

click me!