
ಹುಬ್ಬಳ್ಳಿ (ಜು.12): ಕೇಂದ್ರ ಸರ್ಕಾರ ಧ್ವಜ ಸಂಹಿತೆ 2002ಕ್ಕೆ ತಂದಿರುವ ತಿದ್ದುಪಡಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಜು.13ರಂದು ನಡೆಯಲಿರುವ ಕೆಪಿಸಿಸಿ ಸಭೆಯಲ್ಲಿ ಖಾದಿ ರಾಷ್ಟ್ರಧ್ವಜ ಹೋರಾಟದ ಕುರಿತು ಚರ್ಚಿಸಿ ರೂಪುರೇಷೆ ನಿರ್ಧರಿಸಲಾಗುವುದು ಎಂದರು. ಸೋಮವಾರ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವರ್ಣ ಧ್ವಜವನ್ನು ಖಾದಿ ಬಟ್ಟೆಯಲ್ಲಿ ಮಾತ್ರ ರೂಪಿಸಬೇಕು ಎಂಬ ಕಾನೂನು ಪುನಃ ಜಾರಿಯಾಗುವವರೆಗೆ ಕಾಂಗ್ರೆಸ್ ಹೋರಾಟ ಮಾಡಲಿದೆ. ರಾಷ್ಟ್ರಧ್ವಜ ವಿಚಾರ ಬದಲಿಸುವುದು ರಾಷ್ಟ್ರದ್ರೋಹದ ಕೆಲಸವಾಗಿದೆ.
ವಿಧಾನ ಪರಿಷತ್, ವಿಧಾನ ಸಭೆಯಲ್ಲಿ ಕಾಂಗ್ರೆಸ್ ಹೋರಾಟ ಮಾಡಲಿದೆ. ಕೇಂದ್ರದ ನಾಯಕರ ಜೊತೆಗೂ ಈ ಬಗ್ಗೆ ಚರ್ಚಿಸಲಿದ್ದೇವೆ ಎಂದರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಎಲ್ಲ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಬೇಕು ಎಂದು ಘೋಷಣೆ ಹೊರಡಿಸಿರುವ ಸರ್ಕಾರ ಅದಕ್ಕಾಗಿ ಖಾದಿಯಿಂದ ಅಷ್ಟುಉತ್ಪಾದನೆ ಮಾಡಲು ಸಾಧ್ಯವಿಲ್ಲ ಎಂದು ಕಾರಣ ಕೊಟ್ಟು, ಪಾಲಿಸ್ಟರ್‌ಗೆ ಅನುಮತಿ ನೀಡಿದೆ. ಇದು ರಾಷ್ಟ್ರದ ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿರುವ ಅವಮಾನವಾಗಿದೆ. ಇಂದು ರಾಷ್ಟ್ರಧ್ವಜಕ್ಕೆ ಕೈಹಾಕಿರುವ ಸರ್ಕಾರ ಮುಂದೆ ಸಂವಿಧಾನಕ್ಕೆ ಕೈ ಹಾಕಲಿದೆ ಎಂದು ಕಿಡಿಕಾರಿದರು.
ಚಿತ್ರಗಳು ಬರೀ ಮಾತಾಡುವುದಿಲ್ಲ, ಸತ್ಯವನ್ನೂ ಬೆತ್ತಲೆ ಮಾಡುತ್ತವೆ: ಶೆಟ್ಟರ್‌ಗೆ ಹರಿಪ್ರಸಾದ್ ಟಾಂಗ್
ಧ್ವಜ ಸಂಹಿತೆ ವಿರುದ್ಧ ಜಾಗೃತಿಗೆ ‘ಲೆಟ್ ಸ್ಪಿನ್’: ಕೇಂದ್ರ ಸರ್ಕಾರ ಧ್ವಜ ಸಂಹಿತೆಯಿಂದ ಖಾದಿ ಧ್ವಜ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದು, ಈ ನಡೆ ಖಂಡಿಸಿ ಶನಿವಾರದಿಂದ ‘ಲೆಟ್ ಸ್ಪಿನ್’ ಕಾರ್ಯಕ್ರಮ ಏರ್ಪಡಿಸಿ ಮನೆ ಮನೆಗೂ ಚರಕ ಕೊಂಡ್ಯೊಯ್ದು ಜನರಲ್ಲಿ ಖಾದಿ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2002ಕ್ಕೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜ ಬಳಕೆಗೆ ಅನುಮತಿ ನೀಡುವ ಮೂಲಕ ಖಾದಿ ನಂಬಿ ಜೀವನ ನಡೆಸುತ್ತಿರುವ ಜನರ ಹೊಟ್ಟೆಮೇಲೆ ಕಲ್ಲು ಹಾಕಲು ಮುಂದಾಗಿದೆ. ಕೇಂದ್ರ ಸರ್ಕಾರ 75ನೇ ಸ್ವಾತಂತ್ರ್ಯ ನಿಮಿತ್ತ ಹರ್ ಘರ್ ತಿರಂಗಾ ಅಭಿಮಾನದಡಿ ದೇಶದ ಪ್ರತಿಯೊಬ್ಬರ ಮನೆಯಲ್ಲಿ ಪಾಲಿಸ್ಟರ್ ಧ್ವಜಗಳನ್ನು ಹಾರಿಸಲು ನಿರ್ಧರಿಸಿದೆ. ಇದರಿಂದ ಖಾದಿ ನಂಬಿ ಬದುಕುತ್ತಿರುವ ಕುಟುಂಬಗಳು ಬೀದಿಗೆ ಬಿಳ್ಳಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮದ್ಯೋಗದಿಂದ ಈ ವರೆಗೂ ರಾಷ್ಟ್ರಕ್ಕೆ ಬೇಕಾಗುವ ಧ್ವಜ ತಯಾರಾಗುತ್ತಿದೆ.
Uttara Kannada: ಬಿಜೆಪಿಯವರು ತಲವಾರು, ಪಿಸ್ತೂಲು ಕೊಡ್ತಾರೆ: ಬಿ.ಕೆ.ಹರಿಪ್ರಸಾದ್
ಕೊರೋನಾ ಅವಧಿಯ ಎರಡು ವರ್ಷ ಬೆಂಗೇರಿ ಖಾದಿ ಗ್ರಾಮದ್ಯೋಗ ತೀರಾ ಸಂಕಷ್ಟಕ್ಕೆ ಸಿಲುಕಿತ್ತು. ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದವು. ಈಗ ಪಾಲಿಸ್ಟರ್ ಧ್ವಜ ಬಳಕೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಹಲವು ಬಡ ಕುಟುಂಬಗಳು ಮತ್ತಷ್ಟುಸಂಕಷ್ಟಕ್ಕೊಳಗಾಗಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ಕಡೆ ಮೇಕ್ ಇನ್ ಇಂಡಿಯಾ ಎನ್ನುತ್ತಿರುವ ಸರ್ಕಾರ ಇನ್ನೊಂದೆಡೆ ದೇಶೀಯ ಉತ್ಪನ್ನಕ್ಕೆ ಉತ್ತೇಜನ ನೀಡುತ್ತಿಲ್ಲ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ