ರಾಜ್ಯದಲ್ಲಿ ಸಂಭಾವ್ಯ 4ನೇ ಅಲೆ ಲಕ್ಷಣಗಳು ಕಾಣುತ್ತಿದ್ದರೂ ಸೋಂಕು ನಿಯಂತ್ರಣಕ್ಕೆ ಯಾವುದೇ ಕಠಿಣ ನಿರ್ಬಂಧಗಳನ್ನು ವಿಧಿಸದಿರಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸದೆ, ಲಸಿಕೆ ಹಾಗೂ ಪರೀಕ್ಷೆ ಹೆಚ್ಚಳಕ್ಕೆ ಆದ್ಯತೆ ನೀಡುವ ಮೂಲಕ ಸೋಂಕು ನಿಯಂತ್ರಿಸಬೇಕು ಎಂದು ತೀರ್ಮಾನಿಸಿದೆ.
ಬೆಂಗಳೂರು (ಏ.28): ರಾಜ್ಯದಲ್ಲಿ (Karnataka) ಸಂಭಾವ್ಯ 4ನೇ ಅಲೆ ಲಕ್ಷಣಗಳು ಕಾಣುತ್ತಿದ್ದರೂ ಸೋಂಕು ನಿಯಂತ್ರಣಕ್ಕೆ ಯಾವುದೇ ಕಠಿಣ ನಿರ್ಬಂಧಗಳನ್ನು ವಿಧಿಸದಿರಲು ರಾಜ್ಯ ಸರ್ಕಾರ (State Govt) ನಿರ್ಧಾರ ಮಾಡಿದೆ. ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸದೆ, ಲಸಿಕೆ (Vaccine) ಹಾಗೂ ಪರೀಕ್ಷೆ ಹೆಚ್ಚಳಕ್ಕೆ ಆದ್ಯತೆ ನೀಡುವ ಮೂಲಕ ಸೋಂಕು ನಿಯಂತ್ರಿಸಬೇಕು ಎಂದು ತೀರ್ಮಾನಿಸಿದೆ.
ಬುಧವಾರ ರಾಜ್ಯದ ಕೊರೋನಾ (Coronavirus) ಸ್ಥಿತಿಗತಿಗಳ ಕುರಿತು ವಿಡಿಯೋ ಸಂವಾದದ ಮೂಲಕ ಮಾಹಿತಿ ಪಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಸೂಚನೆ ಮೇರೆಗೆ 6ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ, 15ರಿಂದ 18 ವರ್ಷದ ವಯಸ್ಸಿನವರಿಗೆ ಲಸಿಕೆ ನೀಡುವುದಕ್ಕೆ ವೇಗ, 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಹೆಚ್ಚು ಒತ್ತು ನೀಡಲು ನಿರ್ಧರಿಸಿದೆ.
ಪ್ರಧಾನಿ ಜೊತೆಗಿನ ವಿಡಿಯೋ ಸಂವಾದದ ಬಳಿಕ ಗೃಹ ಕಚೇರಿ ಕೃಷ್ಣಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು, ಅನಾವಶ್ಯಕವಾಗಿ ಯಾವುದೇ ನಿರ್ಬಂಧ ಹೇರಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಅದರಂತೆ ರಾಜ್ಯದಲ್ಲಿ ಕೊರೋನಾ 4ನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದೇ ಹೊರತು ಯಾವುದೇ ಅನಗತ್ಯ ಹಾಗೂ ಕಠಿಣ ನಿರ್ಬಂಧ ವಿಧಿಸುವುದಿಲ್ಲ. ಆರ್ಥಿಕ ಚಟುವಟಿಕೆಗೆ ನಿರ್ಬಂಧ ವಿಧಿಸದೆ 4ನೇ ಅಲೆ ನಿಯಂತ್ರಿಸಲಾಗುವುದು ಎಂದರು.
Covid 19 Spike: ಕೋವಿಡ್ 4ನೇ ಅಲೆ ಭೀತಿ ಎದುರಿಸಲು ರಾಜ್ಯ ಸರ್ಕಾರದಿಂದ ಸಿದ್ದತೆ!
ಮಕ್ಕಳಿಗೆ ಲಸಿಕೆ ಅಭಿಯಾನ: ಲಸಿಕಾಕರಣ ಉತ್ತಮವಾಗಿದ್ದ ಕಾರಣ 3ನೇ ಅಲೆ ನಿಯಂತ್ರಣ ಸಾಧ್ಯವಾಯಿತು. ಹೀಗಾಗಿ ಈಗಲೂ ಲಸಿಕೆಗೆ ಹೆಚ್ಚು ಒತ್ತು ನೀಡಲಾಗುವುದು. ಈಗಾಗಲೇ ಶೇ.98 ರಷ್ಟುಮಂದಿಗೆ ಲಸಿಕೆ ಹಾಕಲಾಗಿದೆ. 6ರಿಂದ 12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಲು ಕೇಂದ್ರ ಅನುಮತಿಸಿದೆ. ಹೀಗಾಗಿ ಎಲ್ಲಾ ವಯೋಮಾನದವರಿಗೂ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು ಎಂದು ಸಿಎಂ ಹೇಳಿದರು.
ಪರೀಕ್ಷೆ ಹೆಚ್ಚಳ: ರಾಜ್ಯದಲ್ಲಿ ಏ.9ರ ಬಳಿಕವಷ್ಟೇ ಪಾಸಿಟಿವಿಟಿ ದರ ಹೆಚ್ಚಾಗಿದೆ. ಹೀಗಾಗಿ ಕೊರೋನಾ ಪ್ರಮಾಣ ಅರಿಯಲು ನಿತ್ಯ 10ರ ಬದಲಿಗೆ 30 ಸಾವಿರ ಪರೀಕ್ಷೆ ನಡೆಸಲಾಗುವುದು. ಈ ಪೈಕಿ ಬೆಂಗಳೂರಿನಲ್ಲೇ 10 ಸಾವಿರ ಪರೀಕ್ಷೆ ನಡೆಸಲಾಗುವುದು. ಜತೆಗೆ ಎಲ್ಲಾ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಪರೀಕ್ಷೆ ನಡೆಸಲಾಗುವುದು. ಅಲ್ಲಿ ಪಾಸಿಟಿವ್ ಬಂದ ರೋಗಿಯ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುವುದು. ರೂಪಾಂತರಿಗಳ ಬಗ್ಗೆ ಹೆಚ್ಚು ಗಮನ ನೀಡಲಾಗುವುದು ಎಂದರು.
ಜತೆಗೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ಶೇ.2 ರಷ್ಟುಮಂದಿಗೆ ರಾರಯಂಡಮ್ ಪರೀಕ್ಷೆ ನಡೆಸಲಾಗುತ್ತಿದೆ. ಅವರ ಟೆಲಿ ಟ್ರಾಕಿಂಗ್ ಕೂಡ ಮಾಡಲಾಗುತ್ತಿದೆ. ಆಸ್ಪ್ರೇಲಿಯಾ ಇಂಡೋನೇಷ್ಯಾ, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ ಕಡೆಯಿಂದ ಬರುವವರ ಮೇಲೆ ಎಚ್ಚರಿಕೆ ವಹಿಸಲಾಗಿದೆ. ರಾಜ್ಯದ ಗಡಿಗಳಲ್ಲಿ ಪರೀಕ್ಷೆ, ಅಗತ್ಯ ಬೆಡ್ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಕೊರೋನಾ ಎದುರಿಸಲು ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
1.43 ಲಕ್ಷ ಆಮ್ಲಜನಕ ಬೆಡ್: 50 ಸಾವಿರಕ್ಕೂ ಹೆಚ್ಚು ಬೆಡ್ ಸರ್ಕಾರಿ ವಲಯದ ಆಸ್ಪತ್ರೆಯಲ್ಲಿವೆ. ಒಟ್ಟಾರೆ ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಂದ 1.43 ಲಕ್ಷ ಆಕ್ಸಿಜನ್ ಬೆಡ್ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಸ್ತುತ 1,220 ಟನ್ ಆಕ್ಸಿಜನ್ ದಾಸ್ತಾನು ಇದ್ದು, ಹೊಸ 243 ಆಕ್ಸಿಜನ್ ಘಟಕಗಳ ಪೈಕಿ 242 ರ ನಿರ್ಮಾಣ ಪೂರ್ಣಗೊಂಡಿದೆ. ಆಕ್ಸಿಜನ್ ಘಟಕಗಳಲ್ಲಿ 1,100 ಟನ್ ಸಾಮರ್ಥ್ಯಕ್ಕೆ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಅಗ್ನಿ ಅವಘಡಗಳು ಆಗದಂತೆ ಆಸ್ಪತ್ರೆಗಳ ಆಡಿಟ್ ಮಾಡಿಸಬೇಕು ಎಂದು ಸೂಚನೆ ಕೊಡಲಾಗಿದೆ ಎಂದು ಹೇಳಿದರು. ಸಂವಾದದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ವಸತಿ ಸಚಿವ ವಿ. ಸೋಮಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ಮೋದಿ ಸಭೆ ವೇಳೆ ಮೈಮುರಿದ ಕೇಜ್ರಿವಾಲ್, ಮ್ಯಾನರ್ಸ್ ಇಲ್ಲ ಎಂದ ಬಿಜೆಪಿ!
4ನೇ ಅಲೆ ಬಗ್ಗೆ ಆತಂಕ ಬೇಡ: ಏಪ್ರಿಲ್ 9ರವರೆಗೆ ಪಾಸಿಟಿವಿಟಿ ದರ ಕಡಿಮೆ ಇತ್ತು. ನಂತರದಲ್ಲಿ ಸರಾಸರಿ ಶೇ.0.3 ನಿಂದ ಶೇ.1.38 ವರೆಗೆ ಹಾಗೂ ಬೆಂಗಳೂರಿನಲ್ಲಿ ಶೇ.0.4ರಿಂದ ಶೇ.2.07 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ 1686 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಆದರೆ, ಕೊರೋನಾದಿಂದ ಯಾವುದೇ ಹೊಸ ಸಾವು ವರದಿಯಾಗಿಲ್ಲ. ರಾಜ್ಯದಲ್ಲಿನ ಶೇ.98 ರಷ್ಟುಮಂದಿಗೆ ಲಸಿಕೆ ಹಾಕಿದ್ದು, 15 ರಿಂದ 17ನೇ ವರ್ಷದ ಮಕ್ಕಳಿಗೆ 50 ಲಕ್ಷ ಡೋಸ್ ನೀಡಲಾಗಿದೆ. ಶೇ.27 ರಷ್ಟುಜನರು ಮುಂಜಾಗ್ರತಾ ಲಸಿಕೆ (ಬೂಸ್ಟರ್ ಡೋಸ್) ಪಡೆದಿದ್ದಾರೆ. ರಾಜ್ಯದಲ್ಲಿ 61 ಲಕ್ಷ ಲಸಿಕೆಗಳ ದಾಸ್ತಾನು ಲಭ್ಯವಿದೆ. ಹೀಗಾಗಿ ಯಾರೂ ಸಹ 4ನೇ ಅಲೆ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.