ಕೆಂಪೇಗೌಡ ಥೀಮ್‌ ಪಾರ್ಕ್‌ಗೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

By Kannadaprabha News  |  First Published Oct 22, 2022, 9:22 AM IST

* ವಿಧಾನಸೌಧ ಮೆಟ್ಟಿಲ ಬಳಿ ಅಭಿಯಾನಕ್ಕೆ ಸಿಎಂ, ಗಣ್ಯರ ಚಾಲನೆ
* ರಾಜ್ಯದ ವಿವಿಧೆಡೆ ಮಣ್ಣು ಸಂಗ್ರಹಕ್ಕಾಗಿ 20 ರಥಗಳ ಸಂಚಾರ
* ನ.11ರಂದು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣ


ಬೆಂಗಳೂರು (ಅ.22): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಬರುವ ನ.11ರಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣದ ಜತೆಗೆ ಕೆಂಪೇಗೌಡರ ಥೀಮ್‌ಪಾರ್ಕ್ಗೆ ಬಳಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನ’ಕ್ಕೆ ಹಸಿರು ನಿಶಾನೆ ತೋರಲಾಗಿದೆ. ಶುಕ್ರವಾರ ವಿಧಾನಸೌಧದ ಬೃಹತ್‌ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಗಣ್ಯರು ವಿಧಾನಸೌಧದ ಆವರಣದಲ್ಲಿರುವ ಎಲ್ಲ ಪ್ರತಿಮೆಗಳ ಸ್ಥಳದಿಂದ ಸಂಗ್ರಹಿಸಿದ ಮಣ್ಣು ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮುಂದಾಳತ್ವದಲ್ಲಿ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ ಕೈಗೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯದ ವಿವಿಧೆಡೆ ಮಣ್ಣು ಸಂಗ್ರಹಕ್ಕಾಗಿ 20 ನಾಡಪ್ರಭು ಕೆಂಪೇಗೌಡ ರಥಗಳು ಪ್ರಯಾಣ ಬೆಳೆಸಿವೆ. ಶುಕ್ರವಾರದಿಂದ ನ.7ರವರೆಗೆ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ರಥಗಳು ಆಯಾಯ ಪ್ರದೇಶ/ ಜಿಲ್ಲೆಗಳನ್ನು ಪ್ರವೇಶಿಸಿದಾಗ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು, ಸಾಹಿತಿಗಳು, ಪ್ರಗತಿಪರ ರೈತರು, ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.

Tap to resize

Latest Videos

ಜಾಗತಿಕ ಸ್ತರದಲ್ಲಿ ಕೆಂಪೇಗೌಡ ವಿರಾಜಮಾನ: ಸಚಿವ ಅಶ್ವತ್ಥ ನಾರಾಯಣ

ಪವಿತ್ರ ಮೃತ್ತಿಕಾ ಸಂಗ್ರಹಣಕ್ಕೆ ವಾಹನಗಳು ತೆರಳುವ ಮುನ್ನ ವಿಧಾನಸೌಧದ ಆವರಣದಲ್ಲಿನ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್‌ ಹನುಮಂತಯ್ಯ, ದೇವರಾಜು ಅರಸು, ಲಾಲ್‌ ಬಹದ್ದೂರ್‌ ಶಾಸ್ತ್ರಿ ಸೇರಿದಂತೆ ಇತರೆ ಗಣ್ಯರ ಪ್ರತಿಮೆಗಳ ಬಳಿಯಿಂದ ಮಣ್ಣನ್ನು ಸಂಗ್ರಹಿಸಲಾಯಿತು. ನಂತರ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರಾಜ್ಯದೆಲ್ಲೆಡೆಯಿಂದ ಸಂಗ್ರಹಿಸುವ ಮಣ್ಣನ್ನು ವಿಮಾನ ನಿಲ್ದಾಣ ಆವರಣದಲ್ಲಿ ಅಭಿವೃದ್ಧಿಪಡಿಸುತ್ತಿರುವ 23 ಎಕರೆ ವಿಶಾಲವಾದ ಕೆಂಪೇಗೌಡ ಥೀಮ್‌ಪಾರ್ಕ್ನಲ್ಲಿ ಬಳಕೆ ಮಾಡಲಾಗುತ್ತದೆ. ರಾಜಧಾನಿಯಿಂದ ಹೊರಟ 20 ಕೆಂಪೇಗೌಡ ರಥಗಳು ಜಿಲ್ಲಾ ಮಟ್ಟದಲ್ಲಿಯೂ ಅಧಿಕೃತವಾಗಿ ಹಸಿರು ನಿಶಾನೆ ಕಾಣಲಿವೆ. ಇದರ ಪ್ರಯುಕ್ತ ಪ್ರತಿ ಜಿಲ್ಲೆಯ ಪ್ರಮುಖ ತಾಣದಲ್ಲಿಯೂ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗಿಯಾಗಲಿದ್ದಾರೆ.

ಎಲ್ಲೆಲ್ಲಿ ಪವಿತ್ರ ಮೃತ್ತಿಕಾ ಸಂಗ್ರಹ?: ಅಭಿಯಾನದ ಪ್ರಯುಕ್ತ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಣಿ, ಪುಣ್ಯ ಪುರುಷರ ಸಮಾಧಿ ಸ್ಥಳಗಳಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುವುದು. ಪ್ರತಿಯೊಂದು ರಥದ ಮಾರ್ಗನಕ್ಷೆಯನ್ನೂ ಸಿದ್ದಪಡಿಸಲಾಗಿದೆ. ಅಲ್ಲದೇ, ರಥಗಳಲ್ಲಿ ಎಲ್‌ಇಡಿ ಸ್ಕ್ರೀನ್‌ ಪ್ಲೇ ಕೂಡ ಇರಲಿದೆ. ಇದರಲ್ಲಿ ಮಣ್ಣು ಸಂಗ್ರಹದ ಮಹತ್ವದ ಕುರಿತು ಮತ್ತು ಕೆಂಪೇಗೌಡ ಅವರ ಸಾಧನೆಗಳ ಬಗ್ಗೆ ಮಾಹಿತಿ ಇರಲಿದೆ. ಪ್ರಮುಖ ಸ್ಥಳಗಳಲ್ಲಿ ಸಂಗ್ರಹಿಸುವ ಪವಿತ್ರ ಮಣ್ಣನ್ನು ನೋಡೆಲ್‌ ಅಧಿಕಾರಿಗಳು ರಥಗಳಿಗೆ ಹಿರಿಯರೊಬ್ಬರ ಮೂಲಕ ಸಮರ್ಪಿಸಲಿದ್ದಾರೆ. ಬೆಂಗಳೂರಲ್ಲಿಯೂ ಸಹ ವಲಯ ಆಯುಕ್ತರು/ಜಂಟಿ ಆಯುಕ್ತರು ರಥಗಳು ಯಾವ ವಾರ್ಡ್‌ಗಳಲ್ಲಿ, ಎಲ್ಲೆಲ್ಲಿ ಸಾಗಬೇಕು ಎನ್ನುವುದನ್ನು ನಿರ್ಧರಿಸಲಿದ್ದಾರೆ. ಪ್ರತಿ ವಾರ್ಡ್‌ನಲ್ಲಿಯೂ ದೇವಸ್ಥಾನ, ಕೆರೆ ಸೇರಿದಂತೆ ಇತರ ತಾಣಗಳು ಸೇರಿದಂತೆ ಕನಿಷ್ಠ 10 ಕಡೆಗಳಿಂದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಲಾಗುವುದು.

‘ಪ್ರಗತಿ ಪ್ರತಿಮೆ’ ಹೆಸರಿಟ್ಟಿದ್ದು ಸಚಿವ ಡಾ.ಅಶ್ವತ್ಥ: ಕೆಂಪೇಗೌಡ ಅವರ ಪ್ರತಿಮೆಗೆ ‘ಪ್ರಗತಿಯ ಪ್ರತಿಮೆ’ ಎಂದು ಹೆಸರು ಇಟ್ಟಿದ್ದೇ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರಾಗಿದ್ದಾರೆ. ಪ್ರತಿಮೆಗೆ ಏನು ಹೆಸರು ಇಡಬೇಕು ಎನ್ನುವುದರ ಬಗ್ಗೆ ಚರ್ಚಿಸಲು ಸಭೆ ಕರೆದಾಗ ಸಚಿವರೇ ಹೆಸರು ಇಟ್ಟರೆ ಹೇಗೆ ಎಂಬುದನ್ನು ಸಲಹೆ ನೀಡಿದರು. ‘ಏಕತಾ ಪ್ರತಿಮೆ’, ‘ಸ್ಟ್ಯಾಚು ಆಪ್‌ ಲಿಬರ್ಟಿ’ ಹೀಗೆ ಜಗತ್ತಿನ ಗಮನಸೆಳೆದಿರುವ ಪ್ರತಿಮೆಗಳ ಸಾಲಿಗೆ ಪ್ರಗತಿಯ ಪ್ರತಿಮೆ ಕೂಡ ಸೇರುತ್ತಿದೆ. ನಗರದ ನಿರ್ಮಾತೃಗಳ ಇಷ್ಟು ಎತ್ತರದ ಪ್ರತಿಮೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿ ಇದಕ್ಕೆ ಗಿನ್ನೆಸ್‌ ಬುಕ್‌ ಆಫ್‌ ವಲ್ಡ್‌ರ್‍ ರೆಕಾರ್ಡ್ಸ್ನಲ್ಲಿ ಗೌರವ ಲಭಿಸಿದೆ.

ಕೆಂಪೇಗೌಡ ಥೀಮ್‌ ಪಾರ್ಕ್‌ಗೆ ನಾಳೆಯಿಂದ ಮಣ್ಣು ಸಂಗ್ರಹ: ಸಚಿವ ಅಶ್ವತ್ಥ್‌ ನಾರಾಯಣ

ರಾಮ್‌ ಸುತಾರ್‌ ಕೈಯಲ್ಲಿ ಅರಳಿರುವ ಪ್ರತಿಮೆ: ವಿಮಾನ ನಿಲ್ದಾಣದಲ್ಲಿ ನ.11ರಂದು ಲೋಕಾರ್ಪಣೆಯಾಗಲಿರುವ ಕೆಂಪೇಗೌಡರ 108 ಅಡಿ ಪ್ರತಿಮೆಯನ್ನು ಸೃಷ್ಟಿಸಿರುವವರು ಖ್ಯಾತ ಶಿಲ್ಪಿ ನೋಯ್ಡಾದ ರಾಮ್‌ ಸುತಾರ್‌. ಗುಜರಾತ್‌ನಲ್ಲಿನ ಸರ್ದಾರ್‌ ವಲಭಬಾಯಿ ಪಟೇಲ್‌ ಪ್ರತಿಮೆಯೂ ಸೇರಿದಂತೆ ಹಲವು ಪ್ರತಿಮೆಗಳನ್ನು ಅರಳಿಸಿರುವ ಸಾಧಕರಾಗಿದ್ದಾರೆ. ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಉತ್ಕೃಷ್ಟದರ್ಜೆಯ ಕಬ್ಬಿಣ ಮತ್ತು ಉಕ್ಕನ್ನು ಬಳಸಲಾಗಿದ್ದು, ಇದಕ್ಕಾಗಿ 84 ಕೋಟಿ ರು. ವೆಚ್ಚ ಮಾಡಲಾಗಿದೆ. ಅಲ್ಲದೇ, ಪ್ರತಿಮೆಯ ಪರಿಸರದಲ್ಲಿ 23 ಎಕರೆ ವಿಶಾಲವಾದ ಕೆಂಪೇಗೌಡ ಥೀಮ್‌ ಪಾರ್ಕ್ ಸಹ ಅಭಿವೃದ್ಧಿ ಪಡಿಸಲಾಗುತ್ತದೆ. ರಾಜ್ಯದೆಲ್ಲೆಡೆಯಿಂದ ಸಂಗ್ರಹಿಸುವ ಪವಿತ್ರ ಮೃತ್ತಿಕೆಯನ್ನು ಈ ಥೀಮ್‌ಪಾರ್ಕ್ ಮತ್ತು ಕೆಂಪೇಗೌಡರ ಪ್ರತಿಮೆಯ ನಾಲ್ಕು ಗೋಪುರಗಳಿಗೆ ಬಳಕೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಅಭಿವೃದ್ಧಿ ನಿರಂತರವಾಗಿ ನಡೆಯಬೇಕೆಂಬ ಆಶಯದಿಂದ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುತ್ತಿದೆ. ಕರ್ನಾಟಕಕ್ಕೆ ಒಳ್ಳೆಯ ದಿನಗಳು ಬರುವ ಸೂಚನೆಯನ್ನು ಇದು ನೀಡುತ್ತಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣದ ಧ್ಯೇಯವನ್ನು ಸಾಧಿಸುವ ಆತ್ಮವಿಶ್ವಾಸವನ್ನು ಈ ಪ್ರಗತಿಯ ಪ್ರತಿಮೆ ನೀಡಲಿದೆ.
- ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

click me!