ರಾಜ್ಯದ ದಕ್ಷಿಣ ಕನ್ನಡ, ಚಾಮರಾಜನಗರ ಹಾಗೂ ಉತ್ತರಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಬೆಂಗಳೂರು(ಅ.21): ರಾಜ್ಯದ ದಕ್ಷಿಣ ಕನ್ನಡ, ಚಾಮರಾಜನಗರ ಹಾಗೂ ಉತ್ತರಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು(ಶುಕ್ರವಾರ) ಆದೇಶ ಹೊರಡಿಸಿದೆ. ದ.ಕ ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿ.ರಾಜೇಂದ್ರ ವರ್ಗಾವಣೆ ಅವರನ್ನ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸದ್ಯ ದ.ಕ ಜಿಲ್ಲಾ ಪಂಚಾಯತ್ ಸಿಇಓ ಕುಮಾರ್ ದ.ಕ ಜಿಲ್ಲಾಧಿಕಾರಿಯಾಗಿ ನಿಯುಕ್ತಿ ಪಡೆದಿದ್ದಾರೆ. ಡಾ.ಕೆ.ವಿ.ರಾಜೇಂದ್ರ ಅವರು ಕಳೆದ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದರು.
ಚಾಮರಾಜನಗರ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಡಿ.ಎಸ್.ರಮೇಶ್ ನೇಮಕವಾಗಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಡಿ.ಎಸ್.ರಮೇಶ್ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಚಾರುಲತಾ ಸೋಮಲ್ ಅವರು 2021ರ ನ. 16ರಿಂದ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಒಂದೇ ವರ್ಷದೊಳಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ವರ್ಗಾವಣೆಯಾಗಿದ್ದಾರೆ.
ಚಾಮರಾಜನಗರ ಆಕ್ಸಿಜನ್ ದುರಂತ : ಜಿಲ್ಲಾಧಿಕಾರಿ ವರ್ಗಾವಣೆ
ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಮುಲ್ಲೈ ಮುಹಿಲನ್ ಅವರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಹರೀಶ್ ಕುಮಾರ್ ಬಳಿಕ ಮುಲ್ಲೈ ಮುಹಿಲನ್ 2021 ಫೆ.7ರಂದು ಉತ್ತರ ಕನ್ನಡಕ್ಕೆ ಡಿಸಿಯಾಗಿ ಆಗಮಿಸಿದ್ದರು. ಮುಹಿಲನ್ ಅವರು ಸರಳ ವ್ಯಕ್ತಿತ್ವ ಹಾಗೂ ಉತ್ತಮ ಆಡಳಿತಗಾರರಾಗಿ ಜನಾನುರಾಗಿಯಾಗಿದ್ದರು. ಮುಲ್ಲೈ ಮುಹಿಲನ್ ಜಾಗಕ್ಕೆ ಹಟ್ಟಿ ಗೋಲ್ಡ್‌ಮೈನ್ಸ್ ಕಂಪೆನಿಯ ಆಡಳಿತ ನಿರ್ದೇಶಕ ಪ್ರಭುಲಿಂಗ ಕವಲಿಕಟ್ಟಿ ಅವರು ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.