
ಬೆಂಗಳೂರು (ಆ.18): ಮಾಜಿ ಮುಖ್ಯಮಂತ್ರಿ ಮತ್ತು ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸಭೆಯ ಸದಸ್ಯರಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರ ನೇಮಕಾತಿ ಆದೇಶ ಹೊರ ಬರುತ್ತಿದ್ದಂತೆಯೇ ಮುಖ್ಯಮಂತ್ರಿಗಳು ಕರೆ ಮಾಡಿ ಶುಭ ಕೋರಿದರು. ಬಳಿಕ ಅವರ ನಿವಾಸಕ್ಕೆ ತೆರಳಿ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಬಿಜೆಪಿಯ ಅತ್ಯಂತ ಉನ್ನತ ಎನ್ನಿಸಿರುವ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಅವರನ್ನು ನೇಮಕ ಮಾಡುವುದರ ಮೂಲಕ ಪಕ್ಷ ಅವರಿಗೆ ಅತಿ ದೊಡ್ಡ ಗೌರವದ ಸ್ಥಾನ ನೀಡಿದೆ. ಈ ಹುದ್ದೆಗೆ ಏರಿರುವುದರಿಂದ ರಾಜ್ಯ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ರಾಜ್ಯ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಕ್ಕಂತಾಗಿದೆ ಎಂದು ತಿಳಿಸಿದರು.
ಮಾಧುಸ್ವಾಮಿ ಹೇಳಿಕೆ ಸಾಕು ಸರಕಾರ ಅಸಮರ್ಥ ಎನ್ನಲು: ಕಾಂಗ್ರೆಸ್
2023ರಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ನಿಶ್ಚಿತ. ಯಡಿಯೂರಪ್ಪ ಅವರನ್ನು ಉನ್ನತ ಹುದ್ದೆಗೆ ನೇಮಕ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದ ಅವರು, ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನೀಡಿದ ಸ್ಥಾನದಿಂದ ಸರ್ಕಾರದ, ಸಂಪುಟದ, ಶಾಸಕರ ಮತ್ತು ನಮ್ಮ ಬಲ, ಹುರುಪು ಇಮ್ಮಡಿಯಾಗಿದೆ. ಗುಡ್ ಗವರ್ನೆನ್ಸ್, ಗುಡ್ ಪಾಲಿಟಿಕ್ಸ್ ಅನ್ನು ನಾವು ಮುಂದುವರೆಸಲಿದ್ದೇವೆ ಎಂದು ಹೇಳಿದರು.
ಬಿಜೆಪಿಗೆ ಇವತ್ತು ದೊಡ್ಡ ಶಕ್ತಿಯ ದಿನ. ನೆಚ್ಚಿನ ನಾಯಕ, ಕರ್ನಾಟಕದ ಕಣ್ಮಣಿ ಯಡಿಯೂರಪ್ಪ ಅವರಿಗೆ ಅತ್ಯಂತ ನಿರ್ಣಯ ಮಾಡುದ ಸ್ಥಾನ ಲಭಿಸಿದೆ. ಬಿಜೆಪಿಗೆ ಹುರುಪು ಬಂದಿದೆ. ಕಾರ್ಯಕರ್ತರಿಗೆ ಉತ್ಸಾಹ ಬಂದಿದೆ. ಯಡಿಯೂರಪ್ಪ ಅವರ ರಾಜಕೀಯ ಅನುಭವ ಮತ್ತು ಸುದೀರ್ಘ ಹೋರಾಟಕ್ಕೆ ವರಿಷ್ಠರು ಮನ್ನಣೆ ಕೊಟ್ಟಿದ್ದಾರೆ. ರಾಜಕೀಯವಾಗಿ ಅತ್ಯಂತ ಮಹತ್ವದ ನಿರ್ಣಯ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ಸಮಗ್ರ ಭಾರತದ ಅಭಿವೃದ್ಧಿ ಜತೆಗೆ ಬಿಜೆಪಿಯನ್ನು ಅಖಂಡ ಭಾರತದಲ್ಲಿ ಶಕ್ತಿಶಾಲಿಯಾಗಿ ಮಾಡಬೇಕು ಎನ್ನುವ ಆಶಯ ಇದೆ.
ನೆಹರು ಚಿತ್ರ ಹಾಕದ್ದಕ್ಕೆ ಕಾಂಗ್ರೆಸ್ಸಿಗೆ ದುಃಖ: ಸಿಎಂ ಬೊಮ್ಮಾಯಿ
ಹೈದರಾಬಾದ್ ಕಾರ್ಯಕಾರಿಣಿಯಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷ ಶಕ್ತಿಶಾಲಿಯಾಗಿ ಕಟ್ಟಬೇಕು ಎಂಬ ಸಂಕಲ್ಪ ತೊಡಲಾಗಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಹೆಚ್ಚಿನ ಸ್ಥಾನಗಳಿಸಲು ಮಿಷನ್ ದಕ್ಷಿಣ್ ಬಗ್ಗೆ ಮೋದಿ ಮಾತನಾಡಿದ್ದರು. ಆ ನಿಟ್ಟಿನಲ್ಲಿ ಈಗ ಯಡಿಯೂರಪ್ಪಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿರುವುದು ಬಲ ತರಲಿದೆ. ಇದರ ಒಟ್ಟು ಪರಿಣಾಮ 2023ರಲ್ಲಿ ಕಾಣಲಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಶತಃಸಿದ್ದ. ವಿಪಕ್ಷಗಳ ಸರ್ವೆ ಯಾವ ರೀತಿ ಇದೆ ಎಂಬುದು ಗೊತ್ತಿದೆ. ರಾಜ್ಯದ ಜನರ ಮೂಡ್ ಇರುವುದೇ ಬೇರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ