
ಶೇಷಮೂರ್ತಿ ಅವಧಾನಿ
ಕಲಬುರಗಿ(ನ.16): ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಆರೋಪ ಹೊತ್ತಿರುವ ಆರ್.ಡಿ. ಪಾಟೀಲ್ ಈ ಬಾರಿ ತನ್ನ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಪ್ತರನ್ನೇ ಬಳಸಿರೋದು ಸಿಐಡಿ ವಿಚಾರಣೆಯಿಂದ ಬಯಲಾಗಿದೆ.
ಎರಡು ದಿನಗಳ ಹಿಂದಷ್ಟೇ ಪ್ರಕರಣದ ವಿಚಾರಣೆ ವಹಿಸಿಕೊಂಡಿರುವ ಸಿಐಡಿ ಈಗಾಗಲೇ ಅಕ್ರಮಕೋರ ಆರ್‌ಡಿಪಿ ಆಪ್ತರ ಬಳಗದ ಐವರನ್ನು ಬಂಧಿಸಿ ಜಾತಕ ಜಾಲಾಡುತ್ತಿದೆ. ಈ ಅಕ್ರಮ ಕೂಟದ ಸೆರೆಸಿಕ್ಕಿರುವ ಐವರು ಸಿಐಡಿ ಮುಂದೆ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾರೆಂದು ಗೊತ್ತಾಗಿದೆ.
ತನಿಖೆಯ ಭಾಗವಾಗಿ ಮಂಗಳವಾರ ಸಿಐಡಿ ವಶಕ್ಕೆ ಪಡೆದಿರುವ ನೆಲೋಗಿಯ ಶಿವಕುಮಾರ್ ಗುಜಗೊಂಡ, ಸಿದ್ದರಾಮ ದತ್ತು ಕೋಳಿ (ಆರ್‌ಡಿಪಿ ಅಳಿಯ) , ಸಹಾಯಕ ಇಂಜಿನಿಯರ್ ರುದ್ರಗೌಡ, ರಹೀಂ ಚೌಧರಿ ಹಾಗೂ ರವಿಕುಮಾರ್ ಉಕ್ಕಲಿ ಇವರ ವಿಚಾರಣೆ ನಡೆಸಿದ್ದು ಇವರೆಲ್ಲರೂ ತಾವು ಕಿಂಪಿನ್ ಅತ್ಯಾಪ್ತ ಬಳಗದಲ್ಲಿದ್ದುಕೊಂಡು ಹಗರಣದಲ್ಲಿ ಏನೆಲ್ಲಾ ಕೆಲಸಗಳನ್ನು ನಿರ್ಹಹಿಸಿದ್ದೇವೆ ಎಂಬುದನ್ನು ಬಾಯಿ ಬಿಟ್ಟಿದ್ದಾರೆಂದು ಗೊತ್ತಾಗಿದೆ.
ಕೆಇಎ ಹಗರಣದಲ್ಲಿನ ಐವತ್ತಕ್ಕೂ ಹೆಚ್ಚು ಅಭ್ಯರ್ಥಿಗಳ ಜೊತೆಗೆ ಡೀಲ್‌ಗಳನ್ನು ತಾವೇ ಮಾಡಿದ್ದಾಗಿ ಆಪ್ತರ ಗುಂಪು ಒಪ್ಪಿಕೊಂಡಿದೆ. ಅದರಲ್ಲೂ ನೆಲೋಗಿಯ ಶಿವಕುಮಾರ್ ಗುಜಗೊಂಡ, ಸಿದ್ದರಾಮ ಕೋಳಿ ಡೀಲ್‌ನ ಮುಂಚೂಣಿಯಲ್ಲಿರೋದನ್ನು ಕೂಡಾ ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಕಿಂಗ್‌ಪಿನ್ ಆರ್.ಡಿ.ಪಾಟೀಲ್ ತವರಿಂದಲೇ ಕೆಇಎ ಪ್ರಶ್ನೆಪತ್ರಿಕೆ ಸೋರಿಕೆ?
ಹೀಗೆ ನಡೀತಿತ್ತು ಡೀಲ್!
ಆರ್‌ಡಿಪಿ ಆಪ್ತರಾದ ನೆಲೋಗಿಯ ಶಿವಕುಮಾರ್ ಅಲಿಯಾಸ್ ಶಿವು ಈತ ಆಪ್ತರ ತಂಡದ ಇನ್ನೋರ್ವ ಸಾಗರ್ ಜೊತೆ ಸೇರಿಕೊಂಡು ಸೂತ್ರಧಾರ ಆರ್‌ಡಿಪಿ ನಿರ್ದೇಶನದಂತೆ ಡೀಲ್ ಕುದುರಿಸುತ್ತಿದ್ದರು. ಹೀಗೆ ಡೀಲ್‌ನಲ್ಲಿ ಪರಸ್ಪರ ಒಪ್ಪಿಗೆಯಾದ ಅಭ್ಯರ್ಥಿಗಳ ಯಾದಿ ಮಾಡಿ ಅಂತಹವರಿಗೇ ಬ್ಲೂಟೂತ್ ಪೂರೈಸಲಾಗುತ್ತಿತ್ತು. ಇಂತಹವರಿಗೇ ಬ್ಲೂಟೂತ್ ಡಿವೈಸ್ ಕೊಡಬೇಕು ಎಂಬ ಪ್ರತ್ಯೇಕ ಪಟ್ಟಿಯೇ ಸಿದ್ದವಾಗಿರುತ್ತಿತ್ತು,ಆ ಪಟ್ಟಿಯಂತೆಯೇ ಉಪಕರಣಗಳು ಪೂರೈಕೆಯಾಗುತ್ತಿದ್ದು. ಕೆಇಎ ಹಗರಣದಲ್ಲಿ ಶಿವಕುಮಾರ್ ನೆಲೋಗಿ ಈತ 20 ಜನ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದ ಅದರಂತೆಯೇ ಬ್ಲೂಟೂತ್ ಪೂರೈಕೆಯಾಗಿತ್ತೆಂಬ ಸ್ಫೋಟಕ ಮಾಹಿತಿ ಸಿಐಡಿ ಮುಂದೆ ಆರ್‌ಡಿಪಿ ಆಪ್ತರು ಬಾಯಿಬಿಟ್ಟಿದ್ದಾರೆ.
ಬ್ಲೂಟೂತ್ ಪೂರೈಕೆಯಾದ ನಂತರ ಅಭ್ಯರ್ಥಿಯೊಬ್ಬರಿಗೆ ಸರಿ ಉತ್ತರ ಪೂರೈಸಲು ತಂಡ ರಚಿಸಲಾಗಿತ್ತಲ್ಲದೆ ಈ ತಂಡದಲ್ಲಿದ್ದವರಿಗೆ ₹10 ಸಾವಿರ ಹಣ, ಹೊಸ ಮೊಬೈಲ್ ಸೆಟ್ ಕೂಡಾ ಪೂರೈಕೆ ತಾವೇ ಮಾಡಿದ್ದಾಗಿ ಪಂಚ ಆಪ್ತರು ಬಾಯಿಬಿಟ್ಟಿದ್ದಾರೆ. ಬ್ಲೂಟೂತ್ ಯಾರ ಕೈ ಸೇರಿದೆಯೋ ಅಂತಹ ಅಭ್ಯರ್ಥಿಗೆ ಮಾತ್ರ ಆರ್‌ಡಿಪಿ ಅಳಿಯ ಸಿದ್ದರಾಮ ಹೊಚ್ಚಹೊಸ ಮೊಬೈಲ್ ಕೊಟ್ಟು ಸ್ಥಳದಲ್ಲೇ ಹಣ ಪಡೆಯುತ್ತಿದ್ದನಂತೆ!
ಕೆಇಎ ಪರೀಕ್ಷಾ ಅಕ್ರಮ: ಚಾಪೆ ತಿರಸ್ಕರಿಸಿ ಠಾಣೆಯ ನೆಲದ ಮೇಲೆಯೇ ಮಲಗಿದ ಪಾಟೀಲ್
ಒಬ್ಬ ಅಭ್ಯರ್ಥಿ ಜೊತೆ ಒಬ್ರಿಗೆ ಉತ್ತರ ಹೇಳಲು 10 ಸಾವಿರ ರು. ಮತ್ತು ಒಂದು ಹೊಸ ಮೊಬೈಲ್ ಕೋಡ್ತಿದ್ವಿ, ಶಶಿ ಕೊಟ್ಟ ಲಿಸ್ಟ್ ಪ್ರಕಾರ ಹೊಸಾ ಮೊಬೈಲ್ ಕೋಡ್ತಿದ್ದೆ ಎಂದು ಆಪ್ತರು ಒಬ್ಬೊಬ್ಬರೇ ವಿಚಾರಣೆಯಲ್ಲಿ ಸಿಐಡಿ ಮಂದೆ ಬಾಯಿ ಬಿಟ್ಟಿರೋದು ಗೊತ್ತಾಗಿದೆ. ಹೀಗೆ ಅಕ್ರಮದ ಈ ಪ್ರಕ್ರಿಯೆಯಲ್ಲಿ ಹೊಸಹೊಸ ಅಭ್ಯರ್ಥಿಗಳನ್ನು ಪತ್ತೆಹಚ್ಚಿ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಶಿವಕುಮಾರ್, ಸಿದ್ದರಾಮ ಅವರೊಂದಿಗೆ ಸ್ಥಳದಲ್ಲೇ ಡೀಲ್ ಮಾಡಿಕೊಳ್ಳುವ ಹುನ್ನಾರವನ್ನು ನಡೆಸಿದ್ದು ವಿಚಾರಣೆಯಲ್ಲಿ ಬಯಲಾಗಿದೆ.
ಹೇಗೂ ಈ ತಂಡ ತನ್ನ ಆಪ್ತರೆಂಬುದು ಅರಿತಿದ್ದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ತಾನು ಹೆಣೆದಂತಹ ಅಕ್ರಮದ ಎಲ್ಲಾ ಹಂತಗಳಲ್ಲಿ ತನ್ನ ಐಡಿಯಾಗಳು ಪಕ್ಕಾ ಹಾಗೂ ಸುಸೂತ್ರವಾಗಿ ಅನುಷ್ಠಾನಗೊಂಡ ನಂತರ ತನ್ನ ಅಳಿಯ ಸಿದ್ದರಾಮ ಕೋಳಿ ಈತನಿಂದಲೇ ಡೀಲ್ ಕುದಿರಿದ್ದವರಿಂದ ಮಾತಿನಂತೆ ಹಣ ಸಂಗ್ರಹಿಸಿಕೊಂಡು ತಾನು ಪಡೆಯುತ್ತಿದ್ದನೆಂಬ ಕಟು ಸತ್ಯವೂ ಸೆರೆ ಸಿಕ್ಕ ಆಪ್ತರ ಅಕ್ರಮ ಕೂಟ ಬಾಯಿ ಬಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ