ಉಡುಪಿ ಫ್ಯಾಮಿಲಿ ಮರ್ಡರ್ ಆರೋಪಿ ಮಹಜರು: 30 ಸೆಕೆಂಡ್‌ ನಮಗೊಪ್ಪಿಸಿ ನಾವೇ ಶಿಕ್ಷೆ ಕೊಡ್ತೀವೆಂದ ಜನರು

By Sathish Kumar KH  |  First Published Nov 16, 2023, 6:21 PM IST

ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲು 15 ನಿಮಿಷ ತೆಗೆದುಕೊಂಡ ಆರೋಪಿಯನ್ನು, ಕೇವಲ 30 ಸೆಕೆಂಡ್‌ ನಮಗೊಪ್ಪಿಸಿ ನಾವೇ ಶಿಕ್ಷೆ ಕೊಡುತ್ತೇವೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.. 


ಉಡುಪಿ (ನ.16): ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲು 15 ನಿಮಿಷ ತೆಗೆದುಕೊಂಡ ಆರೋಪಿಯನ್ನು, ಕೇವಲ 30 ಸೆಕೆಂಡ್‌ ನಮಗೊಪ್ಪಿಸಿ ನಾವೇ ಶಿಕ್ಷೆ ಕೊಡುತ್ತೇವೆ ಎಂದು ಸ್ಥಳ ಮಹಜರಿಗೆ ಬಂದಿದ್ದ ಪೊಲೀಸರ ಮುಂದೆ ಸಾರ್ವಜನಿಕರು ಪ್ರತಿಭಟನೆ ಮಾಡಿದ್ದಾರೆ.

ಉಡುಪಿಯಲ್ಲಿ ದೀಪಾವಳಿ ಹಬ್ಬದ ದಿನ ಬೆಳ್ಳಂಬೆಳಗ್ಗೆ ಉಡುಪಿಯ ಬಳಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಸ್ಥಳ ಮಹಜರು ಮಾಡಲು ಕರೆದೊಯ್ದ ವೇಳೆ ಸಾರ್ವಜನಿಕರು ಆರೋಪಿಗೆ 10 ದಿನದಲ್ಲಿ ಗಲ್ಲು ಶಿಕ್ಷೆ ಕೊಡುವಂತೆ ಆಗ್ರಹಿಸಿದ್ದಾರೆ. ಇಲ್ಲವಾದರೆ ಕುಟುಂಬದ 4 ಜನರನ್ನು ಕೊಲೆ ಮಾಡಲು 15 ನಿಮಿಷ ತೆಗೆದುಕೊಂಡಿದ್ದಾನೆ. ಈಗ ಆರೋಪಿಯನ್ನು ಕೇವಲ 30 ಸೆಕೆಂಡ್‌ ನಮ್ಮ ಕೈಗೊಪ್ಪಿಸಿ ನಾವು ಶಿಕ್ಷೆ ಕೊಡುತ್ತೇವೆ ಎಂದು ಸ್ಥಳೀಯ ಜನರು ಆಗ್ರಹಿಸಿದ್ದಾರೆ.

Latest Videos

undefined

ಭಾನುವಾರ ಬೆಳ್ಳಂಬೆಳಗ್ಗೆ ಉಡುಪಿ ಜಿಲ್ಲೆ ಮಲ್ಪೆ ಠಾಣಾ ವ್ಯಾಪ್ತಿಯ ತೃಪ್ತಿನಗರದ ಮನೆಯೊಂದಕ್ಕೆ ಹಾಡ ಹಗಲೇ ನುಗ್ಗಿ ಒಂದೇ ಕುಟುಂಬದ ತಾಯಿ, ಇಬ್ರು ಹರೆಯದ ಹೆಣ್ಣು ಮಕ್ಕಳು ಹಾಗೂ ಒಬ್ಬ 12 ವರ್ಷದ ಬಾಲಕನನ್ನು ಕೊಲೆ ಮಾಡಿದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ದೀಪಾವಳಿ ಸಂಭ್ರಮದಲ್ಲಿ ಜನರಿಗೆ ಒಮ್ಮೆಲೆ ಶಾಕ್‌ ಉಂಟಾಗಿತ್ತು. ಇದಾದ ಕೆಲವೇ ನಿಮಿಷಗಳಲ್ಲಿ ಹಸೀನಾ(46), ಅಫ್ನಾನ್(23), ಅಯ್ನಾಝ್(21) ಹಾಗೂ ಆಸಿಂ(12) ಎಂಬುವರನ್ನ ದುಷ್ಕರ್ಮಿ ಚೂರಿಯಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ ಎಂಬ ಸುದ್ದಿ ತಿಳಿಯಿತು. ಆರೋಪಿಯ ಪತ್ತೆಗೆ ಬಲೆ ಬೀಸಿದ ಪೊಲೀಸರು 3 ದಿನದಲ್ಲಿ ಬೆಳಗಾವಿಯಲ್ಲಿ ಕೊಲೆಗಾರರನ್ನು ಬಂಧಿಸಿ ಕರೆತಂದಿದ್ದರು. ಇದಾದ ನಂತರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ 14 ದಿನ ಪೊಲೀಸ್‌ ಕಸ್ಟಡಿಗೆ ಪಡೆಯುವಂತೆ ಆದೇಶ ನೀಡಲಾಯಿತು.

ಉಡುಪಿ ಕುಟುಂಬದ ನಾಲ್ವರ ಕೊಲೆ: ಆರೋಪಿ ಪ್ರವೀಣ್‌ ಚೌಗಲೆಯನ್ನು 14 ದಿನ ಪೊಲೀಸರಿಗೊಪ್ಪಿಸಿದ ಕೋರ್ಟ್

ನ್ಯಾಯಾಲಯದ ಆದೇಶದಂತೆ 14 ದಿನಗಳ ಕಾಲ ಕಸ್ಟಡಿಗೆ ಪಡೆದ ಪೊಲೀಸರು, ಮೊದಲ ದಿನ ವಿಚಾರಣೆ ಮಾಡಿದ್ದಾರೆ. ನಂತರ, ಸ್ಥಳ ಮಹಜರು ಮಾಡಲು ಕೊಲೆಯ ಘಟನೆ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆ ತರಲಾಗಿತ್ತು. ಇನ್ನು ಗುರುವಾರ ಆರೋಪಿಯನ್ನು ಸ್ಥಳ ಮಹಜರಿಗೆ ಕರೆದುಕೊಂಡು ಬಂದಾಗಲೇ ಮುತ್ತಿಗೆ ಹಾಕಿ ಆರೋಪಿಯನ್ನು ಥಳಿಸಿ ಶಿಕ್ಷೆ ಕೊಡಿಸಬೇಕು ಎಂದು ಜನರು ನಿರ್ಧರಿಸಿದ್ದರು. ಪೊಲೀಸರು ಆರೋಪಿಯನ್ನು ಸ್ಥಳ ಮಹಜರಿಗೆ ಕರೆತರುತ್ತಾರೆಂದು ಬೆಳಗ್ಗೆಯಿಂದಲೇ ಊರಿನ ಜನರು ಕಾಯುತ್ತಾ ಕುಳಿತಿದ್ದರು.

3 ನಿಮಿಷ ನಮಗೊಪ್ಪಿಸಿ ಎಂದು ಆಗ್ರಹ: ಇನ್ನು ಕೊಲೆ ಆರೋಪಿಯನ್ನು ಪೊಲೀಸರು ಬಿಗಿ ಭದ್ರತೆಯ ನಡುವೆಯೇ ಸ್ಥಳ ಮಹಜರಿಗೆ ಉಡುಪಿಯ ತೃಪ್ತಿ ನಗರಕ್ಕೆ ಕರೆತರಲಾಗಿತ್ತು. ಈ ವೇಳೆ ಪೊಲೀಸರಿಗೆ ಮುಗಿಬಿದ್ದ ಸಾರ್ವಜನಿಕರು ಆತನನ್ನು ನಮಗೊಪ್ಪಿಸಿ ಎಂದು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಅವನು ಒಂದೇ ಕುಟುಂಬದ ನಾಲ್ವರನ್ನು 15 ನಿಮಿಷದಲ್ಲಿ ಕೊಲೆ ಮಾಡಿದ್ದಾನೆ. ಆದ್ರೆ ಈಗ ಆತನನ್ನು ಕೇವಲ 30 ಸೆಕೆಂಡ್‌ ನಮಗೊಪ್ಪಿಸಿ ಎಂದು ಪೊಲೀಸರ ಜೀಪು ತಡೆದು ಪ್ರತಿಭಟನೆಗೆ ಮುಂದಾದರು. ಆದರೆ, ಬಿಗಿ ಪೊಲೀಸ್‌ ಬಂದೋಬಸ್ತ್‌ ಇದ್ದುದರಿಂದ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಜನರನ್ನು ಅಲ್ಲಿಂದ ಓಡಿಸಿದರು. ನಂತರ, ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಿಕೊಂಡು ಬಂದರು.

ಉಡುಪಿಯ ಒಂದೇ ಕುಟುಂಬದ ನಾಲ್ವರ ಹತ್ಯೆಗೈದ ಆರೋಪಿ ಬೆಳಗಾವಿಯಲ್ಲಿ ಅರೆಸ್ಟ್‌!

10 ದಿನದಲ್ಲಿ ಗಲ್ಲಿಗೇರಿಸಿ: ಪೊಲೀಸರು ಸ್ಥಳ ಮಹಜರಿಗೆ ಒಳಗೆ ಹೋದಾಗ ಪುನಃ ಒಂದೆಡೆ ಸೇರಿದ ಜನರು ನ್ಯಾಯಕ್ಕಾಗಿ ಆಗ್ರಹಿಸಿದರು. ಆರೋಪಿಗೆ 10 ದಿನದಲ್ಲಿ ಗಲ್ಲಿಗೇರಿಸಬೇಕು. ಇಲ್ಲದಿದ್ದರೆ ಆತನ ಸಾವು ಸಂಭವಿಸುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ, ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಘಟನೆಗೆ ಕಾರಣವಾದವನನ್ನು ಜನರು ಕಾನೂನು ಕೈಗೆ ತೆಗೆದುಕೊಂಡು ಹಲ್ಲೆ ಮಾಡಲು ಯೋಜನೆ ರೂಪಿಸಿದ್ದರು. ಆದರೆ, ಪೊಲೀಸರು ಕಾನೂನಿನಲ್ಲಿರುವಂತೆ ಆತನಿಗೆ ಶಿಕ್ಷೆ ಕೊಡಲಾಗುತ್ತದೆ ಎಂದು ಮನವೊಲಿಸಿ ಆರೋಪಿಯನ್ನು ಅಲ್ಲಿಂದ ಪುನಃ ಠಾಣೆಗೆ ಕರೆದೊಯ್ದರು.

click me!