ಪ್ರತಿಯೊಂದು ಮನೆಯಲ್ಲೂ ಒಂದು ಕಲಾಕೃತಿ ಇದ್ದರೆ ಅದು ಮನೆಯ ಅಂದ ಚೆಂದ ಹೆಚ್ಚಿಸುತ್ತದೆ. ಜೊತೆಗೆ ಕಲಾವಿದರನ್ನು ಬೆಂಬಲಿಸುವ ದೃಷ್ಟಿಯಿಂದಲೂ ಕಲಾಸಕ್ತರು ಹೆಚ್ಚಿನ ಕಲಾಕೃತಿಯನ್ನು ಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಜ.06): ಪ್ರತಿಯೊಂದು ಮನೆಯಲ್ಲೂ ಒಂದು ಕಲಾಕೃತಿ ಇದ್ದರೆ ಅದು ಮನೆಯ ಅಂದ ಚೆಂದ ಹೆಚ್ಚಿಸುತ್ತದೆ. ಜೊತೆಗೆ ಕಲಾವಿದರನ್ನು ಬೆಂಬಲಿಸುವ ದೃಷ್ಟಿಯಿಂದಲೂ ಕಲಾಸಕ್ತರು ಹೆಚ್ಚಿನ ಕಲಾಕೃತಿಯನ್ನು ಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಭಾನುವಾರ ನಗರದ ಕುಮಾರ ಕೃಪಾ ರಸ್ತೆಯಲ್ಲಿ ಆಯೋಜಿಸಲಾಗಿದ್ದ 22 ನೇ ಚಿತ್ರ ಸಂತೆಯನ್ನು ಕಲಾಕೃತಿಯೊಂದರ ಮೇಲೆ ಸಹಿ ಹಾಕುವ ಮೂಲಕ ಮುಖ್ಯಮಂತ್ರಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಪ್ರಭಾವಶಾಲಿ. ಚಿತ್ರದ ಮೂಲಕ ಜನಜೀವನ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಬಹುದಾಗಿದೆ. ಕಲಾವಿದರ ಶ್ರಮಕ್ಕೆ ಫಲಸಿಗಬೇಕೆಂದರೆ ಪ್ರತಿಯೊಬ್ಬರೂ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜೊತೆಗೆ ತಮ್ಮ ಮನೆಗೆ ಒಂದಾದರೂ ಕಲಾಕೃತಿಯನ್ನು ಕೊಂಡೊಯ್ಯಬೇಕು. ಆಗ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು. ನಾನು ಏಳನೇ ಬಾರಿ ಚಿತ್ರಸಂತೆ ಉದ್ಘಾಟಿಸಿದ್ದೇನೆ. ರಾಜ್ಯದ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಚಿತ್ರದ ಮೂಲಕ ರಾಜ್ಯ ಮತ್ತು ಜಗತ್ತಿಗೆ ತಿಳಿಸಬೇಕೆಂಬ ಪ್ರಯತ್ನವನ್ನು ಚಿತ್ರ ಕಲಾ ಪರಿಷತ್ತು ಮಾಡುತ್ತಾ ಬರುತ್ತಿದೆ. ಜಗತ್ತಿನ ಯಾವ ಭಾಗದಲ್ಲೂ ಚಿತ್ರಸಂತೆ ನಡೆಯುವುದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅನೇಕ ವರ್ಷಗಳಿಂದ ಚಿತ್ರಸಂತೆ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತೀ ವರ್ಷ ಚಿತ್ರಸಂತೆ ಆಯೋಜಿಸುವುದರಿಂದ ಅನೇಕ ಚಿತ್ರಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆ ಪ್ರದರ್ಶಿಸಲು ಹಾಗೂ ಕಲಾಸಕ್ತರಿಗೆ ಕಲಾಕೃತಿಗಳನ್ನು ಕೊಳ್ಳುವ ಅವಕಾಶವನ್ನೂ ಒದಗಿಸಲಾಗುತ್ತಿದೆ. ಒಂದು ದಿನಕ್ಕೆ ನಾಲ್ಕು ಲಕ್ಷ ಜನ ಭೇಟಿ ನೀಡುತ್ತಾರೆಂದರೆ ಕಲೆಗೆ ಇರುವ ಬೆಲೆ ಇದರಿಂದಲೇ ತಿಳಿಯಬಹುದು ಎಂದರು. ಚಿತ್ರಸಂತೆ ಮಹಿಳೆಯರಿಗೆ ಸಮರ್ಪಿತ: ಒಬ್ಬ ಪುರುಷನಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತಾಗುತ್ತದೆ. ಆದರೆ, ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಕಲಿತಂತೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಅರ್ಪಣೆ ಮಾಡಿರುವುದು ವಿಶೇಷ. ಹೆಣ್ಣುಮಕ್ಕಳ ಪರ ಕೆಲಸ ಮಾಡಿದ ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ, ದತ್ತಮ್ಮ ಮೊದಲಾದವರ ಚಿತ್ರಗಳನ್ನು ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು.
ಕುಂಚದ ಪ್ರಪಂಚದಲ್ಲಿ ಅರಳಿದ ಚಿತ್ರಸಂತೆ: ಕಣ್ಮನ ಸೆಳೆವ ತರಹೇವಾರಿ ಕಲಾಕೃತಿಗಳ ರಾಶಿ
ನಮ್ಮ ಸರ್ಕಾರ ಕೂಡ ಹೆಣ್ಣುಮಕ್ಕಳು ಶೋಷಣೆ, ತಾರತಮ್ಯ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿಸಲು ಶಕ್ತಿ , ಗೃಹಲಕ್ಷ್ಮಿಯಂತಹ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಸಂಸದ ಪಿ.ಸಿ.ಮೋಹನ್, ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.