
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.9): ಆರು ಮಂದಿ ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿಯೊಂದಿಗೆ ರಾಜ್ಯ ನಕ್ಸಲ್ ಮುಕ್ತವಾಗುತ್ತಿದೆ ಎಂದು ಸರ್ಕಾರ ಬೀಗುತ್ತಿದ್ದರೂ ಇನ್ನೂ ಓರ್ವ ಕುಖ್ಯಾತ ನಕ್ಸಲ್ ಶೃಂಗೇರಿ ಮೂಲದ ರವೀಂದ್ರ ನಾಯ್ಕ ತಲೆ ಮರೆಸಿಕೊಂಡಿರುವುದು ಒಳಗೊಳಗೆ ದುಗುಡ ಹುಟ್ಟಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕು ಕೊಟೆ ಹೊಂಡದ ಮರಾಠ ಕಾಲೋನಿ ನಿವಾಸಿಯಾಗಿರುವ ರವೀಂದ್ರ ನಾಯ್ಕ ಪೊಲೀಸರಿಗೆ ಬೇಕಾಗಿರುವ ಕೊನೆಯ ನಕ್ಸಲ್ ಮುಖಂಡನಾಗಿದ್ದಾನೆ. ಈತ 2007 ರಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದ ಎಳ್ಳವಮಾಸೆ ಜಾತ್ರೆಗೆಯಲ್ಲಿ ಅಂದು ನಕ್ಸಲ್ ಸಂಘಟನೆಯಲ್ಲಿ ಸಕ್ರೀಯಳಾಗಿದ್ದ ಶ್ರೀಮತಿ ಯೊಂದಿಗೆ ಕಾಣಿಸಿಕೊಂಡಿದ್ದೇ ಕೊನೆ.ನಂತರ ಆತ ಬಹಿರಂಗವಾಗಿ ಕಾಣಿಸಿಕೊಳ್ಳಲೇ ಇಲ್ಲ.
ರಾಜ್ಯ ಸರ್ಕಾರದ ಮುಂದೆ 18 ಬೇಡಿಕೆಗಳನ್ನಿಟ್ಟ ನಕ್ಸಲರು
ನಂತರ ಶ್ರೀಮತಿ ನಕ್ಸಲ್ ಸಂಘಟನೆ ತೊರೆದು ಜಿಲ್ಲಾಡಳಿತದೆದುರು ಶರಣಾದರೂ ರವೀಂದ್ರ ನಾಯ್ಕ ಮಾತ್ರ ಚಳುವಳಿಯಲ್ಲೇ ಸಕ್ರೀಯನಾಗಿದ್ದ. ಆತನ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲೇ ಸುಮಾರು 15 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಚಿಕ್ಕಮಗಳೂರಿನ ಬೇರೆ ಬೇರೆ ಠಾಣೆಗಳು, ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು ಸುಮಾರು 38 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಹೊರ ರಾಜ್ಯಗಳಲ್ಲೂ ಪ್ರಕರಣಗಳಿವೆ ಎನ್ನಲಾಗಿದೆ.
ಪ್ರಯತ್ನಗಳು ಫಲ ನೀಡಿಲಿಲ್ಲ:
ನಕ್ಸಲ್ ಮುಕ್ತ ರಾಜ್ಯ ಎನ್ನುವ ಅಧಿಕೃತ ಘೋಷಣೆ ಹೊರಬೀಳಲು ಅಡ್ಡಿಯಾಗಿರುವ ಕೊನೆಯ ಹೆಸರು ಈಗ ರವೀಂದ್ರ ನಾಯ್ಕನದ್ದಾಗಿದೆ. ಆತನನ್ನು ಹೇಗಾದರೂ ಮಾಡಿ ಮನ ವೊಲಿಸಬೇಕು ಎನ್ನುವ ಶಾಂತಿಗಾಗಿ ನಾಗರೀಕ ವೇದಿಕೆಯ ಪ್ರಯತ್ನಗಳು ಫಲ ನೀಡಿಲಿಲ್ಲ. ಆತನ ಬೇರಾವುದೋ ರಾಜ್ಯದಲ್ಲಿ ಭೂಗತನಾಗಿದ್ದಾನೆ ಎಂದು ಕೆಲವರು ಅಭಿಪ್ರಾಯಿಸಿದರೆ, ಆತ ವೇದಿಕೆಯ ಸಂಪರ್ಕದಲ್ಲೇ ಇದ್ದಾನೆ ಸಧ್ಯದಲ್ಲೇ ಮನವೊಲಿಸಲಾಗುವುದು ಎಂದು ಅಲ್ಲಿ ಸಕ್ರೀಯವಾಗಿರುವ ಕೆಲವರು ಹೇಳುತ್ತಿದ್ದಾರೆ.
ಶರಣಾದ 6 ನಕ್ಸಲರ ಪೈಕಿ ಒಬ್ಬ ರಾಯಚೂರಿನ: ಮಗನ ಆಗಮನ ನಿರೀಕ್ಷೆಯಲ್ಲಿ 80 ವರ್ಷದ ತಾಯಿ!
ಕಳೆದ 18 ವರ್ಷಗಳ ಹಿಂದೆ ನಕ್ಸಲ್ ಸಂಘಟನೆ ಸೇರಿಕೊಂಡಿದ್ದ ರವೀಂದ್ರ ನಾಯ್ಕ ಈಗ ಶರಣಾಗತಿ ಹೊಂದಿರುವ ಆರು ಜನರಿಗಿಂತಲೂ ಕಿರಿಯ ಎನ್ನಲಾಗುತ್ತಿದೆ. ಇನ್ನೂ ಹೋರಾಟದ ಕಿಚ್ಚಿರುವುದರಿಂದ ಆತ ಶರಣಾಗತಿಗೆ ಒಪ್ಪುತ್ತಿಲ್ಲ ಎಂದೂ ನಿನ್ನೆ ಪ್ರವಾಸಿಮಂದಿರದ ಬಳಿ ನಕ್ಸಲ್ ಸಹಾನುಭೂತಿ ಹೊಂದಿದ ಕೆಲವರು ಮಾತನಾಡಿಕೊಂಡರು. ಅಳಿದುಳಿದ ಒಬ್ಬನೇ ನಕ್ಸಲ್‌ನನ್ನು ಪತ್ತೆಹಚ್ಚಿ ಸಂಪೂರ್ಣ ನಕ್ಸಲ್ ಮುಕ್ತರಾಜ್ಯ ಎನ್ನುವ ಗರಿಮೆ ಪಡೆದುಕೊಳ್ಳಬೇಕಾಗಿರುವುದರಿಂದ ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಖೆ ಸಿಬ್ಬಂದಿಗಳಮೇಲೆ ಈಗ ಸಹಜವಾಗಿ ಒತ್ತಡ ಹೆಚ್ಚಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ