
ಶಿವಮೊಗ್ಗ (ಜ.09): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದ ಬಳಿಯ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಸಫಾರಿ ಪ್ರವಾಸಿಗರ ಅತ್ಯಾಕರ್ಷಕ ಪ್ರಾಣಿ ಎಂದರೆ ಅದು ಅಂಜನಿ ಹುಲಿ ಆಗಿತ್ತು. ಆದರೆ, ಇಂದು ಗುರುವಾರ ಅಂಜನಿ ಹುಲಿ ಅಸುನೀಗಿದೆ.
ಶಿವಮೊಗ್ಗ್ ಮೃಗಾಲಯದ ಸಫಾರಿಯ ಬಹು ಆಕರ್ಷಣೀಯ ಹೆಣ್ಣು ಹುಲಿ ಅಂಜನಿ ಇನ್ನಿಲ್ಲವಾಗಿದೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅಂಜನಿ, ಗುರುವಾರ ಬೆಳಗ್ಗೆ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಅಸುನೀಗೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಅವರು ಮಾಹಿತಿ ನೀಡಿದ್ದಾರೆ. ಇನ್ನು ಅಂಜನಿ ಹುಲಿಗೆ ವಯಸ್ಸಾಗಿದ್ದರಿಂದ ಅದಕ್ಕೆ ವಯೋ ಸಹಜ ಕಾಯಿಲೆಗಳು ಬಂದಿದ್ದು, ಇತ್ತೀಚೆಗೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿತ್ತು. ಇಂದು ಬೆಳಗ್ಗೆ ಮೃತಪಟ್ಟಿದೆ. ಪಶುವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳು ಅಂಜನಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಹುಲಿಯ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ.
ಅಂಜನಿ ಹುಲಿಯ ಹಿನ್ನೆಲೆ: ಹೆಣ್ಣು ಹುಲಿ ಅಂಜನಿ ಮೈಸೂರಿನ ಕೂರ್ಗಳ್ಳಿ ಬಳಿ ಸೆರೆ ಸಿಕ್ಕಿತ್ತು. ಇದಾದ ನಂತರ ಅದನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿದು ಮೈಸೂರಿನ ಪುನರ್ವಸತಿ ಕೇಂದ್ರದಲ್ಲಿ ಇಟ್ಟಿದ್ದರು. ಆದರೆ, ಶಿವಮೊಗ್ಗ ಮೃಗಾಲಯಕ್ಕೆ ಹುಲಿಗಳ ಅಗತ್ಯವಿದ್ದುದರಿಂದ ನೋಡಲು ತುಂಬಾ ಆಕರ್ಷಕವಾಗಿದ್ದ ಮತ್ತು ದೊಡ್ಡ ಗಾತ್ರವನ್ನೂ ಹೊಂದಿದ್ದ ಹುಲಿಯನ್ನು ರವಾನಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ, ಮೈಸೂರಿನ ಪುನರ್ವಸತಿ ಕೇಂದ್ರದಿಂದ ಕಳೆದ ಎರಡು ವರ್ಷಗಳ ಹಿಂದೆ ಹೆಣ್ಣು ಹುಲಿ ಆಂಜನಿಯನ್ನು ಶಿವಮೊಗ್ಗ ಸಫಾರಿಗೆ ಕರೆ ತರಲಾಗಿತ್ತು.
ಇದನ್ನೂ ಓದಿ: Belagavi: ಬೆಳಗಾವಿ ರಸ್ತೆಯಲ್ಲಿ ಕಾಡುಕೋಣ, ಹುಲಿ ಪ್ರತ್ಯಕ್ಷ, ಜನರ ಆತಂಕ!
ಶಿವಮೊಗ್ಗ ಮೃಗಾಲಯದಲ್ಲಿ ಸಿಂಹ ಮತ್ತು ಹುಲಿಗಳ ನಡುವಿನ ಆಕರ್ಷನೆಗಳಲ್ಲಿ ಅಂಜನಿ ಕೂಡ ಪ್ರಮುಖ ಆಕರ್ಷಣೆ ಆಗಿತ್ತು. ತನ್ನ ದಾರಿಯಲ್ಲಿ ನಡೆಯುತ್ತಾ ದೊಡ್ಡದಾಗಿ ಘರ್ಜನೆಯನ್ನು ಮಾಡುತ್ತಿತ್ತು. ಇದರಿಂದ ಮೃಗಾಲಯದ ಸಫಾರಿಗೆ ಬಂದಿದ್ದ ಅಂಜನಿ ಹುಲಿಯನ್ನು ನೋಡಿ ಸಂತಸಗೊಳ್ಳುತ್ತಿದ್ದರು. ಆದರೆ, ಇದೀಗ ಅಂಜನಿ ಹುಲಿ ಸಾವಿನಿಂದ ಮೃಗಾಲಯದಲ್ಲಿ ಹೆಣ್ಣು ಹುಲಿಗಳ ಸಂಖ್ಯೆ 4ಕ್ಕೆ ಇಳಿಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ