ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ಹಾಗೂ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಆಗುವುದು ಖಚಿತ ಎಂದು ಹೇಳಿದ್ದಾರೆ. 6 ತಿಂಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಹಾಗೂ ಪ್ರಿಯಾಂಕ್ ಖರ್ಗೆ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಯಾದಗಿರಿ (ಜ.09): ನಮ್ಮ ಭೂಮಿಯ ಮೇಲೆ ಸೂರ್ಯ, ಚಂದ್ರರು ಇರುವುದು ಎಷ್ಟು ಸತ್ಯವಾಗಿದೆಯೋ ಅಷ್ಟೇ ಸತ್ಯವಾಗಿ ಭಾರತ ದೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ಆಗುವುದು ಹಾಗೂ ನಮ್ಮ ಕರ್ನಾಟಕ ರಾಜ್ಯಕ್ಕೆ ಅವರ ಪುತ್ರ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಆಗುವುದು ಅಷ್ಟೇ ಸತ್ಯ ಎಂದು ಮಾಜಿ ಸಚಿವರೂ ಆಗಿರುವ ಹಾಲಿ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ, ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು, ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಪ್ರಿಯಾಂಕ್ ಖರ್ಗೆ ಸಿಎಂ, ಮಲ್ಲಿಕಾರ್ಜುನ ಖರ್ಗೆ ಪಿಎಂ ಆಗೋದು ಅಷ್ಟೇ ಸತ್ಯ. ಇನ್ನು 6 ತಿಂಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ಆಗುತ್ತಾರೆ. ಇದೇ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಆಗುತ್ತಾರೆ. ಅಂದರೆ, ದೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಪಿಎಂ, ರಾಜ್ಯಕ್ಕೆ ಪ್ರಿಯಾಂಕ ಖರ್ಗೆ ಸಿಎಂ ಆಗೇ ಆಗ್ತಾರೆ ಎಂದು ಹೇಳಿದರು.
ಕಲಬುರಗಿಯಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಯಾವುದೇ ತಪ್ಪು ಮಾಡಿಲ್ಲ ಎನ್ನೋದು ಬಿಜೆಪಿಯವರಿಗೂ ಗೊತ್ತಿದೆ. ಹುಲಿ ಹೊಟ್ಟೆಯಲ್ಲಿ ಹುಲಿಯಾಗಿಯೇ ಪ್ರಿಯಾಂಕ ಹುಟ್ಟಿರೋದು. ಬಿಜೆಪಿಯವರು ಪ್ರಿಯಾಂಕ್ ಖರ್ಗೆ ಮೇಲೆ ಕಪ್ಪು ಚುಕ್ಕೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ಮುಳಗುವ ಹಡಗು ಆಗಿದೆ. ರಾಜ್ಯದ ಮಹಾನ್ ನಾಯಕ ಪ್ರಿಯಾಂಕ್ ಖರ್ಗೆ ಅಭಿವೃದ್ಧಿಯ ಹರಿಕಾರ ಆಗಿದ್ದಾರೆ. ಬಿಜೆಪಿಯವರು ಮಾಡುವ ಪ್ರತಿಭಟನೆಯನ್ನ ಖಂಡಿಸುತ್ತೆವೆ ಎಂದು ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಇದನ್ನೂ ಓದಿ: ಕಲಬುರಗಿಯಿಂದ ಖರ್ಗೆ ಅಳಿಯ ರಾಧಾಕೃಷ್ಣ ಲೋಕಸಭೆಗೆ ಸ್ಪರ್ಧೆ: ಚಿಂಚನಸೂರು ಅಚ್ಚರಿ ಹೇಳಿಕೆ
ರಾಜ್ಯದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುವಾಗಲೇ ಸಿಎಂ ಬದಲಾವಣೆಯ ಚರ್ಚೆ ಭಾರೀ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಇನ್ನು ತನಗೆ ಮುಖ್ಯಮಂತ್ರಿ ಖುರ್ಚಿ ಬೇಕೇ ಬೇಕು ಎಂಬ ನಿಟ್ಟನಲ್ಲಿ ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿ ಹೈಕಮಾಂಡ್ ಭೇಟಿ ಮಾಡಿದ್ದು, ಇದೇ ಉದ್ದೇಶಕ್ಕಾಗಿ ದೇಶದ ಶಕ್ತಿಶಾಲಿ ದೇವಾಲಗಳಿಗೆ ಹೋಗಿ ಪೂಜೆ, ಪುನಸ್ಕಾರ, ಹೋಮ, ಹವನ, ಯಜ್ಞ, ಯಾಗಗಗಳನ್ನು ಮಾಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ, ರಾಜ್ಯದಲ್ಲಿ ದಲಿತ ನಾಯಕರಾದ ಗೃಹ ಸಚಿವ ಪರಮೇಶ್ವರ ಅವರ ನೇತೃತ್ವದಲ್ಲಿ ಮತ್ತೊಂದು ತಂಡ ಡಿನ್ನರ್ ಮೀಟಿಂಗ್ ಮಾಡುತ್ತಿದೆ. ಹೀಗಿರುವಾಗ ಯಾದಗಿರಿಯಲ್ಲಿ ಬಾಬುರಾವ್ ಚಿಂಚನಸೂರು ಅವರು ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಕರ್ನಾಟಕ ಡಿಸಿಎಂ ಆಗಿಯೇ ನಿವೃತ್ತಿ ಪಡೆಯುತ್ತೇನೆ: ಬಾಬುರಾವ್ ಚಿಂಚನಸೂರು