ಒಡಿಶಾ ರೈಲು ಅಪಘಾತದಲ್ಲಿ ಚಿಕ್ಕಮಗಳೂರಿನ ವಿವಿಧೆಡೆಯಿಂದ ಪಾವನ ಯಾತ್ರೆ ತೆರಳಿದ್ದ 110 ಮಂದಿ ಜೈನ ಯಾತ್ರಾರ್ಥಿಗಳು ಪವಾಡ ಸದೃಶವಾಗಿ ಪಾರಾಗಿರುವುದಕ್ಕೆ ಕಾರಣ ವಿಶಾಪಟ್ಟಣಂ. ಹೇಗೆ ಇಲ್ಲಿದೆ ವಿವರ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.3): ಒಡಿಶಾ ರಾಜ್ಯದ ಬಾಲಾಸೋರ್ನಲ್ಲಿ ಜೂನ್ 2ರಂದು ರಾತ್ರಿ ಸಂಭವಿಸಿರುವ ರೈಲು ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ವಿವಿಧೆಡೆಯಿಂದ ಪಾವನ ಯಾತ್ರೆ ತೆರಳಿದ್ದ 110 ಮಂದಿ ಜೈನ ಯಾತ್ರಾರ್ಥಿಗಳು ಪವಾಡ ಸದೃಷವಾಗಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಕಳಸ ಸೇರಿದಂತೆ ಕುದುರೆಮುಖ, ಸಂಸೆ, ಹೊರನಾಡು ಭಾಗದಿಂದ ಈ ಯಾತ್ರಿಗಳು ಕೊಲ್ಕತ್ತಾದ ಪವಿತ್ರ ಕ್ಷೇತ್ರವಾದ ಶ್ರೀ ಸಮ್ಮೇದ್ ಶಿಖರ್ಜಿ ಗಿರಿಗೆ ತೆರಳಿದ್ದು ಎಲ್ಲರೂ ಸುರಕ್ಷಿತವಾಗಿ ಪ್ರವಾಸ ಮುಂದುವರಿಸಿದ್ದಾರೆ. ಮಹಿಳೆಯರು, ಮಕ್ಕಳು ವೃದ್ಧರಾದಿಯಾಗಿ ಬೇರೆ ಬೇರೆ ಕುಟುಂಬದ ಎಲ್ಲಾ110 ಮಂದಿ ಪ್ಯಾಕೇಜ್ ಪ್ರವಾಸ ಹೊರಟಿದ್ದು, ಅಪಘಾತದಲ್ಲಿ ಬದುಕುಳಿದಿರುವುದೇ ಅಚ್ಚರಿ. ಇವರೆಲ್ಲರೂ ಕಳಸದಿಂದ ಬಸ್‌ನಲ್ಲಿ ಹೊರಟು ಬೆಂಗಳೂರು ತಲುಪಿ ಶುಕ್ರವಾರ ಬೆಳಗ್ಗೆ 10.30 ಕ್ಕೆ ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.
undefined
ಇಂಜಿನ್ ಬದಲಾವಣೆಯಿಂದ 110 ಜನರು ಸೇಫ್!
ಎಲ್ಲರೂ ರೈಲಿನ ಹಿಂಬದಿಯ ಎಸ್-5, ಎಸ್ 6 ಹಾಗೂ ಎಸ್- 7ಮೂರು ಬೋಗಿಯಲ್ಲಿದ್ದರು. ರೈಲು ಮಧ್ಯಾಹ್ನದ ವೇಳೆಗೆ ವಿಶಾಪಟ್ಟಣಂ ತಲುಪುತ್ತಿದ್ದಂತೆ ಇಂಜಿನ್ ಬದಲಾವಣೆ ಮಾಡಲಾಯಿತು. ಇದೊಂದು ತಿರುವು ಈ ಎಲ್ಲಾ 110 ಜನರ ಪ್ರಾಣ ಉಳಿಸಿತು. ಇಂಜಿನ್ ಬದಲಾಗುತ್ತಿದ್ದಂತೆ ಇವರು ಪ್ರಯಾಣಿಸುತ್ತಿದ್ದ ಮೂರು ಬೋಗಿಗಳು ರೈಲಿನ ಮುಂಭಾಗಕ್ಕೆ ಬಂದವು. ಆದರೆ ಅಪಘಾತ ಸಂಭವಿಸಿದಾಗ ಹಿಂಬದಿಯ ಮೂರ್ನಾಲ್ಕು ಬೋಗಿಗಳು ರೈಲಿನಿಂದ ಕಳಚಿಕೊಂಡು ಮಗುಚಿ ಬಿದ್ದಿದ್ದು, ಅದರಲ್ಲಿದ್ದ ಹಲವು ನತದೃಷ್ಠರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.
ಕೊಲ್ಕತ್ತಾ ದಿಂದ ಕಳಸದ ಸಂತೋಷ್ ಜೈನ್ ಎಂಬ ಯಾತ್ರಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾತನಾಡಿ ಘಟನೆ ಬಗ್ಗೆ ಮಾಹಿತಿ ನೀಡಿ, ಬಾಲಸೋರ್ ಬಳಿ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರೈಲು ಚಲಿಸುವಾಗ ಪಕ್ಕದ ಹಳಿಯಲ್ಲಿ ಎದುರಿನಿಂದ ಚೆನ್ನೈ ಕಡೆಗೆ ಸಾಗುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮುಂದೆ ಅದೇ ಹಳಿಯ ಮೇಲೆ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು. ಈ ವೇಳೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಹಿಂಬದಿ ಬೋಗಿಗಳು ಹಳಿಯಿಂದ ಕೆಳಕ್ಕೆ ಜಾರಿ ನಾವು ಪ್ರಯಾಣಿಸುತ್ತಿದ್ದ ರೈಲಿನ ಹಿಂಬದಿಗೆ ಹಾವಿನ ಬಾಲದಂತೆ ಬಡಿಯಿತು. ಕೂಡಲೇ ನಮ್ಮ ರೈಲಿನ ಮೂರ್ನಾಲ್ಕು ಬೋಗಿಗಳು ಕಳಚಿಕೊಂಡು ಪಕ್ಕಕ್ಕೆ ಉರುಳಿ ಬಿದ್ದಿತ್ತು ಎಂದರು. ಚಾಲಕ ಅಲ್ಲೇ ಬ್ರೇಕ್ ಹಾಕಿದರೂ ವೇಗದಲ್ಲಿದ್ದ ರೈಲು ಸುಮಾರು 3 ಕಿ.ಮೀ.ದೂರದಲ್ಲಿ ಬಂದು ನಿಂತಿತು. ನಮಗೆ ಹಿಂದೆ ಭಾರೀ ಸದ್ದು ಕೇಳಿ ಬಂತಾದರೂ ಈ ಮಟ್ಟಿನ ಅಪಘಾತ ಸಂಭವಿಸಿದೆ ಎನ್ನುವುದು ಅರಿವಿಗೆ ಬರಲಿಲ್ಲ. ಕೊನೆಗೆ ಎಲ್ಲರೂ ಇಳಿದು ಸುಮಾರು 3 ಕಿ.ಮೀ.ಹಿಂದಕ್ಕೆ ನಡೆದು ಹೋದಾಗ ಅಪಘಾತದ ಭೀಕರ ದೃಶ್ಯ ಕಂಡುಬಂತು ಎಂದು ವಿವರಿಸಿದರು.
Odisha Train Accident Reason: ಒಡಿಶಾ ರೈಲು ಅಪಘಾತದ ಕಾರಣ ಬಹಿರಂಗ
ತೀರ್ಥಯಾತ್ರೆ ಸಮಿತಿ ಅಧ್ಯಕ್ಷ ಕಳಸದ ಭ್ರಹ್ಮದೇವ್ ಜೈನ್ ಎಂಬುವವರು ರೈಲಿನಿಂದಲೇ ಅಪಘಾತ ನಂತರ ವೀಡಿಯೋ ಮಾಡಿದ್ದು, ಪ್ರಯಾಣ ಚೆನ್ನಾಗಿ ನಡೆಯುತ್ತಿರುವಾಗಲೇ ಒರಿಸ್ಸಾದ ಗಡಿ ಪ್ರದೇಶ ದಾಟಿ ಇನ್ನು ಸ್ವಲ್ಪ ಹೊತ್ತಿನಲ್ಲಿ ಕೊಲ್ಕತ್ತಾ ತಲುಪಬೇಕೆನ್ನುವಷ್ಟರಲ್ಲಿ ರಾತ್ರಿ 8.30 ರ ವೇಳೆಗೆ ಇದ್ದಕ್ಕಿದ್ದಂತೆ ನಮ್ಮ ರೈಲು ನಿಂತು ಬಿಟ್ಟಿತು. ಅಪಘಾತದ ಭಾರೀ ಸದ್ದು ಕಿವಿಗಪ್ಪಳಿಸಿತು. ಕೂಡಲೇ ಕೆಳಗಿಳಿದು ನೋಡಿದಾಗ ನಾವು ಪ್ರಯಾಣಿಸುತ್ತಿದ್ದ ರೈಲಿನ ಕೊನೆಯ ಬೋಗಿಗಳಿಗೆ ಚೆನ್ನೈ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ಕೊಂಡಿ ಕಳಚಿಕೊಂಡು ಮಗುಚಿ ಬಿದ್ದಿರುವುದು ಕಂಡುಬಂತು. ಅದರಲ್ಲಿದ್ದ ಬಹುತೇಕ ಮಂದಿ ಸಾವಿಗೀಡಾಗಿ ಅನೇಕರು ಗಾಯಗೊಂಡಿದ್ದರು. ಕೂಡಲೇ ಅಕ್ಕಪಕ್ಕದ ನಿವಾಸಿಗಳು ಧಾವಿಸಿ ಬಂದು ರಕ್ಷಣೆಗೆ ಮುಂದಾಗಿದ್ದಲ್ಲದೆ ಆಂಬುಲೆನ್ಸ್ಗಳಿಗೆ ಕರೆ ಮಾಡಿದರು. ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಯೋಗಕ್ಷೇಮವನ್ನು ವಿಚಾರಿಸಿ ಪ್ರಯಾಣ ಮುಂದುವರಿಸಲು ವ್ಯವಸ್ಥೆ ಮಾಡಿದ್ದಾರೆ.
Odisha Train Tragedy: ಕೊಲ್ಕತ್ತಾದಲ್ಲಿ ಸಿಲುಕಿದ ರಾಜ್ಯದ ಕ್ರೀಡಾರ್ಥಿಗಳಿಗೆ ವಿಮಾನ ಕಲ್ಪಿಸಿ
ನಾವೇನೋ ಸುರಕ್ಷತವಾಗಿ ಹಿಂದಿರುಗುತ್ತಿದ್ದೇವೆ. ಆದರೆ ಘಟನೆಯಲ್ಲಿ ಸಾವಿಗೀಡಾದವರ ಬಗ್ಗೆ ನಮಗೂ ನೋವಿದೆ. ಈ ಘಟನೆ ನಡೆಯಬಾರದಿತ್ತು ಎಂದರು. ಇನ್ನು ಕಳಸ ಪಟ್ಟಣದಲ್ಲಿರುವ ಯಾತ್ರೆಗಳು ಸಂಬಧಿಕರು ಮಾತಾಡಿ ದುರಂತ ಕೇಳಿ ಒಂದು ಕ್ಷಣ ಆತಂಕ, ಗಾಬರಿಯಾಯಿತು, ವ್ರತದ ಫಲವೇ ದೇವರು ಎಲ್ಲರ ಜೀವ ಉಳಿಸಿದ್ದಾರೆ ಎನ್ನುವ ಅಭಿಪ್ರಾಯವನ್ನು ಹೊರಹಾಕಿದರು.
ಪ್ರಯಾಣ ಮುಂದುವರಿಸಿದ ಯಾತ್ರೆಗಳು :
ಎಲ್ಲ ಯಾತ್ರಿಗಳೂ ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿ ಕೊಲ್ಕತ್ತಾ ನಗರಕ್ಕೆ ತುಲುಪಿ ಅಲ್ಲಿಂದ ಮೂರು ಬಸ್‌ಗಳ ಮೂಲಕ ಸುಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದಾರೆ. ಯಾತ್ರೆಗೆ ಕರೆದೊಯ್ದಿದ್ದ ಸಂಸ್ಥೆಯವರು ಎಲ್ಲ ಯಾತ್ರಿಗಳನ್ನು ಶನಿವಾರ ಸುರಕ್ಷಿತವಾಗಿ ಕೊಲ್ಕತ್ತಾ ನಗರದ ರೈಲು ನಿಲ್ದಾಣಕ್ಕೆ ಕರೆ ತಂದಿದ್ದಾರೆ. ಇಂದು 110 ಮಂದಿ ಯಾತ್ರಿಗಳನ್ನು ಮೂರು ಬಸ್‌ಗಳ ಮೂಲಕ ಜೈನರ ಪವಿತ್ರ ಯಾತ್ರಾ ಸ್ಥಳವಾಗಿರುವ ಸುಮೇದ್ ಶಿಖರ್ಜಿ ಸ್ಥಳಕ್ಕೆ ಪ್ರಯಾಣ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದ್ದು, ಯಾತ್ರಿಗಳ ಪೈಕಿ ಯುವಕನೊಬ್ಬ ಎಲ್ಲ ಪ್ರವಾಸಿಗರೂ ಸುರಕ್ಷಿತವಾಗಿರುವ ಹಾಗೂ ಸುಮೇದ್ ಶಿಖರ್ಜಿಗೆ ಯಾತ್ರೆ ಮುಂದುವರಿಸಿರುವ ಬಗ್ಗೆ ಪ್ರಯಾಣಿಕರು ಮತ್ತು ಬಸ್‌ಗಳ ವಿಡಿಯೋ ಮಾಡಿ ಕಳಸ ಪಟ್ಟಣದ ತಮ್ಮ ಸಂಬಂಧಿಗಳಿಗೆ ಕಳುಹಿಸಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿರುವುದನ್ನು ಕಂಡು ಯಾತ್ರಿಗಳ ಸಂಬಂಧಿಕರು ನಿಟ್ಟುಸಿರುವ ಬಿಟ್ಟಿದ್ದಾರೆ.