
ಹಾಸನ: ಭಾರತದ ರಾಜಕಾರಣದಲ್ಲಿ ಸುದೀರ್ಘ ಇತಿಹಾಸ ಸೃಷ್ಟಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ, ಅವರ ಹುಟ್ಟೂರಾದ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಮುತ್ತಿಗೆ ಹಿರೇಹಳ್ಳಿ (Muttige Hirehalli) ಗ್ರಾಮವನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ. ತಾಯಿಯನ್ನು ಕಳೆದುಕೊಂಡ ಇಡೀ ಗ್ರಾಮದಲ್ಲಿ ಸದ್ಯ ನೀರವ ಮೌನ ಆವರಿಸಿದ್ದು, ಗ್ರಾಮಸ್ಥರು ಕಣ್ಣೀರಿಡುತ್ತಿದ್ದಾರೆ.
ಹೊಳೆನರಸೀಪುರದ ಮುತ್ತಿಗೆ ಹಿರೇಹಳ್ಳಿಯಲ್ಲಿ ಹುಟ್ಟಿದ ಅವರನ್ನು ಹರದನಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು ಗ್ರಾಮದ ಸಾಮಾನ್ಯ ಕೃಷಿ ಹಿನ್ನೆಲೆಯಿಂದ ಬಂದ ಚೆನ್ನಮ್ಮ ಅವರನ್ನು 1954 ರಲ್ಲಿ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಹೆಚ್.ಡಿ. ದೇವೇಗೌಡ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾಗಿ ದಶಕಗಳೇ ಕಳೆದು, ಪತಿ ದೇಶದ ಪ್ರಧಾನಿಯಾಗುವಂತಹ ಉನ್ನತ ಸ್ಥಾನಕ್ಕೇರಿದರೂ ಚೆನ್ನಮ್ಮ ಅವರು ಮಾತ್ರ ತಮ್ಮ ಹುಟ್ಟೂರಾದ ಮುತ್ತಿಗೆ ಹಿರೇಹಳ್ಳಿಯ ಮೇಲಿನ ಪ್ರೀತಿಯನ್ನು ಎಂದಿಗೂ ಕಡಿಮೆ ಮಾಡಿಕೊಂಡಿರಲಿಲ್ಲ. ತವರು ಊರಿನ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದರು.
ವರ್ಷಕ್ಕೆ ಹಲವು ಬಾರಿ ತವರಿಗೆ ಭೇಟಿ ನೀಡುತ್ತಿದ್ದ ಅವರು, ಗ್ರಾಮದ ಜನರೊಂದಿಗೆ ಅತ್ಯಂತ ಸರಳವಾಗಿ ಮತ್ತು ಪ್ರೀತಿಯಿಂದ ಬೆರೆತು ಮಾತನಾಡುತ್ತಿದ್ದರು. ಅದೇ ರೀತಿ ಮುತ್ತಿಗೆ ಹಿರೇಹಳ್ಳಿಯ ಜನರೂ ಸಹ ಚೆನ್ನಮ್ಮ ಅವರ ಮೇಲೆ ಅಪಾರವಾದ ಗೌರವ ಪ್ರೀತಿಯನ್ನು ಹೊಂದಿದ್ದರು. ಇದೀಗ ತಮ್ಮೂರಿನ ಹೆಣ್ಣುಮಗಳು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮವೇ ಕಂಬನಿ ಮಿಡಿಯುತ್ತಿದೆ. ಮುತ್ತೈದೆ ಸಾವು ಕಂಡ ಚೆನ್ನಮ್ಮ ಅವರನ್ನು ನೆನೆದು ಅಳುತ್ತಿದ್ದಾರೆ. ಚನ್ನಮ್ಮನ ನೆನೆದು ಸಂಬಂಧಿಕರು ದು:ಖಿತರಾಗಿದ್ದಾರೆ. ಮುತ್ತಿಗೆ ಹಿರೇಹಳ್ಳಿ ಶಾಲೆಗೆ ಹೋಗುತ್ತಿದ್ದಾಗ ಅಡುಗೆ ಮಾಡಿ ಊಟ ಕೊಡುತ್ತಿದ್ದರು. ಜೊತೆಯಲ್ಲೇ ಕುಂಟೆಬಿಲ್ಲೆ, ಚೌಕಬಾರ ಆಡುತ್ತಿದ್ದರು ಎಂದು ಚೆನ್ನಮ್ಮರ ಜೊತೆ ಬಾಲ್ಯ ಕಳೆದಿದ್ದ ಸಂಬಂಧಿ ದ್ಯಾವಮ್ಮ ನೋವಿನಿಂದ ನುಡಿದಿದ್ದಾರೆ.
ಮುತ್ತಿಗೆ ಹಿರೇಹಳ್ಳಿ ಗ್ರಾಮಕ್ಕೂ ಮತ್ತು ಚೆನ್ನಮ್ಮ ಅವರಿಗೂ ಇದ್ದ ಭಕ್ತಿ ಹಾಗೂ ಆಧ್ಯಾತ್ಮಿಕ ಸಂಬಂಧ ಅತ್ಯಂತ ಅಪರೂಪದ್ದು. ಈ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವತೆ ಶ್ರೀ ಚನ್ನಾಂಬಿಕಾ ದೇವಿ ಚೆನ್ನಮ್ಮ ಅವರ ಮನೆದೇವರಾಗಿದೆ. ಪಟೇಲ್ ಕುಟುಂಬದ ದಂಪತಿ ತಮಗೆ ಜನಿಸಿದ ಹೆಣ್ಣುಮಗುವಿಗೆ ಇದೇ ಚನ್ನಾಂಬಿಕಾ ದೇವಿಯ ಹೆಸರನ್ನೇ ಸ್ಮರಿಸಿ 'ಚೆನ್ನಮ್ಮ' ಎಂದು ನಾಮಕರಣ ಮಾಡಿದ್ದರು. ತಮ್ಮ ಹೆಸರಿಗೆ ಕಾರಣವಾದ ಮನೆದೇವರ ಮೇಲೆ ಚೆನ್ನಮ್ಮ ಅವರಿಗೆ ಅಪಾರವಾದ ಭಕ್ತಿ ಇತ್ತು. ದೇವೇಗೌಡರ ಕುಟುಂಬದ ಪ್ರತಿಯೊಂದು ಶುಭ ಕಾರ್ಯದಲ್ಲೂ ಈ ದೇವಿಯ ಸ್ಮರಣೆ ಇರುತ್ತಿತ್ತು.
ಮುತ್ತಿಗೆ ಹಿರೇಹಳ್ಳಿಯ ಶ್ರೀ ಚನ್ನಾಂಬಿಕಾ ದೇವಿಯ ಆಲಯವು ಅತ್ಯಂತ ವಿಶೇಷವಾಗಿದ್ದು, ಈ ದೇವಸ್ಥಾನದ ಬಾಗಿಲನ್ನು ವರ್ಷಕ್ಕೆ ಕೇವಲ ಒಂದು ಬಾರಿ ಮಾತ್ರ ಸಾರ್ವಜನಿಕರ ದರ್ಶನಕ್ಕಾಗಿ ತೆರೆಯಲಾಗುತ್ತದೆ. ಈ ವಾರ್ಷಿಕ ವಿಶೇಷ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಚೆನ್ನಮ್ಮ ದೇವೇಗೌಡ ಅವರ ಉಪಸ್ಥಿತಿ ಕಡ್ಡಾಯವಾಗಿರುತ್ತಿತ್ತು. ಪ್ರತಿ ವರ್ಷ ದೇವಸ್ಥಾನದ ಬಾಗಿಲು ತೆರೆದಾಗ ದೇವಿಗೆ ಸಲ್ಲಿಕೆಯಾಗುವ ಪ್ರಥಮ ಪೂಜೆ ಚೆನ್ನಮ್ಮ ದೇವೇಗೌಡ ಅವರಿಂದಲೇ ನೆರವೇರುತ್ತಿತ್ತು. ತಾಯಿಯೇ ಖುದ್ದಾಗಿ ಬಂದು ಪೂಜೆ ಸಲ್ಲಿಸಿದ ಬಳಿಕವಷ್ಟೇ ಬೇರೆಯವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ