
HD Deve Gowda wife Chennamma death: ಎಚ್.ಡಿ. ದೇವೇಗೌಡರು ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಮುಗಿಸಿ, ಕಾಂಟ್ರಾಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದ ಹೊಸತರಲ್ಲೇ ಮದುವೆಯ ಯೋಚನೆ ಬಂದಿತ್ತು. 1954ರಲ್ಲಿ ದೇವೇಗೌಡರು ಚೆನ್ನಮ್ಮ ಅವರನ್ನು ವಿವಾಹವಾದರು. ಅಂದಿನ ಕಾಲದ ಸಂಪ್ರದಾಯದಂತೆ ಹಿರಿಯರು ನಿಶ್ಚಯಿಸಿದ ಸರಳ ವಿವಾಹವದು. ಚೆನ್ನಮ್ಮ ಅವರು ಸಾಮಾನ್ಯ ಹಳ್ಳಿಮನೆಯ ಹಿನ್ನೆಲೆಯಿಂದ ಬಂದವರು. ಮದುವೆಯಾದ ಹೊಸತರಲ್ಲಿ ದೇವೇಗೌಡರು ರಾಜಕೀಯಕ್ಕೆ ಅಷ್ಟಾಗಿ ಕಾಲಿಟ್ಟಿರಲಿಲ್ಲ. ಕಾಂಟ್ರಾಕ್ಟ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.
ಮದುವೆಯಾದ ಕೆಲವೇ ವರ್ಷಗಳಲ್ಲಿ ದೇವೇಗೌಡರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದರು. 1962ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಶಾಸಕರಾಗಿ ಆಯ್ಕೆಯಾದರು. ಅಲ್ಲಿಂದ ಶುರುವಾದ ಅವರ ರಾಜಕೀಯ ಪಯಣ, ವಿರೋಧ ಪಕ್ಷದ ನಾಯಕ, ಮಂತ್ರಿ, ಮುಖ್ಯಮಂತ್ರಿ ಮತ್ತು ಅಂತಿಮವಾಗಿ ದೇಶದ ಪ್ರಧಾನಮಂತ್ರಿಯವರೆಗೆ ತಲುಪಿತು. ಈ ಸುದೀರ್ಘ ಅವಧಿಯಲ್ಲಿ ಗೌಡರು ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲು ವಾಸ, ರಾಜಕೀಯ ಪಿತೂರಿಗಳು, ಅಧಿಕಾರ ಕಳೆದುಕೊಂಡ ದಿನಗಳು - ಹೀಗೆ ನಾನಾ ಕಷ್ಟಗಳನ್ನು ಎದುರಿಸಿದರು.
ಈ ಎಲ್ಲಾ ಏಳುಬೀಳುಗಳ ನಡುವೆ ಚೆನ್ನಮ್ಮ ಅವರು ಅಚಲವಾಗಿ ಪತಿಯ ಬೆನ್ನಿಗೆ ನಿಂತರು. ದೇವೇಗೌಡರು ರಾಜಕೀಯದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಜೈಲಿನಲ್ಲಿದ್ದರೂ, ಮನೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತುಕೊಂಡವರು ಚೆನ್ನಮ್ಮ. ಆರು ಜನ ಮಕ್ಕಳನ್ನು (ನಾಲ್ವರು ಪುತ್ರರು, ಇಬ್ಬರು ಪುತ್ರಿಯರು) ಶಿಸ್ತಿನಿಂದ ಬೆಳೆಸಿ, ಅವರಿಗೆ ಉತ್ತಮ ಶಿಕ್ಷಣ ಕೊಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ದೇವೇಗೌಡರು ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದಂತೆ, "ನಾನು ರಾಜಕೀಯದಲ್ಲಿ ನಿಶ್ಚಿಂತೆಯಿಂದ ಇರಲು ಕಾರಣ ಚೆನ್ನಮ್ಮ ಮನೆ ನಿಭಾಯಿಸಿದ ರೀತಿ".
ದೇವೇಗೌಡರ ಕುಟುಂಬದ ದೊಡ್ಡ ಶಕ್ತಿಯೆಂದರೆ ಅವರ ಸರಳತೆ. ಪ್ರಧಾನಮಂತ್ರಿಯ ಪತ್ನಿಯಾಗಿದ್ದರೂ ಚೆನ್ನಮ್ಮ ಅವರು ಎಂದಿಗೂ ಆಡಂಬರಕ್ಕೆ ಮಾರುಹೋಗಲಿಲ್ಲ. ಅವರ ಉಡುಗೆ-ತೊಡುಗೆ, ಮಾತಿನ ಶೈಲಿ ಎಲ್ಲವೂ ಸಾಮಾನ್ಯ ಹಳ್ಳಿಯ ಮಹಿಳೆಯಂತೆಯೇ ಇತ್ತು. ಅವರ ದೈವಭಕ್ತಿ ಅಪಾರ. ದೇವೇಗೌಡರು ದೊಡ್ಡ ಹುದ್ದೆಗಳಲ್ಲಿದ್ದಾಗಲೂ, ಕಷ್ಟದ ಕಾಲದಲ್ಲೂ ಚೆನ್ನಮ್ಮ ಅವರು ದೇವಸ್ಥಾನಗಳಿಗೆ ಭೇಟಿ ನೀಡಿ, ಪತಿಯ ಒಳಿತಿಗಾಗಿ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದರು. ಅವರ ಈ ಭಕ್ತಿ ಮತ್ತು ಸರಳತೆ ಗೌಡರ ಮೇಲೂ ಪ್ರಭಾವ ಬೀರಿತ್ತು.
ಇಂದಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಸಂಸಾರಗಳು ಮುರಿಯುತ್ತಿರುವಾಗ, ಹೆಚ್.ಡಿ. ದೇವೇಗೌಡ ಮತ್ತು ಚೆನ್ನಮ್ಮ ಅವರ ಆರು ದಶಕಗಳ ದಾಂಪತ್ಯ ಜೀವನ ಒಂದು ದೊಡ್ಡ ಸಂದೇಶವನ್ನು ನೀಡುತ್ತದೆ. ಪರಸ್ಪರ ನಂಬಿಕೆ, ಗೌರವ, ಕಷ್ಟಕಾಲದಲ್ಲಿ ಸಾಥ್ ನೀಡುವುದು ಮತ್ತು ಸರಳ ಜೀವನ - ಇವು ಅವರ ಯಶಸ್ವಿ ಸಂಸಾರದ ರಹಸ್ಯಗಳು. ರಾಜಕೀಯದಂತಹ ಒತ್ತಡದ ಕ್ಷೇತ್ರದಲ್ಲಿ ಇದ್ದುಕೊಂಡೂ, ಕುಟುಂಬಕ್ಕೆ ಭದ್ರ ಬುನಾದಿ ಹಾಕಿ, ಆದರ್ಶ ದಂಪತಿಗಳಾಗಿ ಬಾಳಿದ ಅವರ ಜೀವನ ನಿಜಕ್ಕೂ ಅಭಿನಂದನೀಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ