
ಹಾಸನ (ಜು.18): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದಾರೆ. ಅವರ ಬಾಲ್ಯದ ದಿನಗಳು ಮತ್ತು ಅವರ ಸರಳತೆಯ ಕುರಿತು ಅವರ ಆಪ್ತ ಸಂಬಂಧಿ ದ್ಯಾವಮ್ಮ ಮಾಧ್ಯಮಗಳೊಂದಿಗೆ ಮಾತನಾಡಿ ಹಲವು ಅಪರೂಪದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮುತ್ತಿಗೆಹಿರಿಹಳ್ಳಿಯಲ್ಲಿ ಜನಿಸಿದ ಚೆನ್ನಮ್ಮ ಅವರ ಒಡನಾಟ ತಮಗೆ ತಂದಿಕೊಟ್ಟ ಸಂತಸದ ಕ್ಷಣಗಳನ್ನು ಅವರು ನೆನಪಿಸಿಕೊಂಡಿದ್ದಾರೆ.
ಚೆನ್ನಮ್ಮ ಅವರ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ದ್ಯಾವಮ್ಮ, ನಾವು ಒಟ್ಟಿಗೆ ಕಳೆದ ದಿನಗಳು ತುಂಬಾ ಅದ್ಭುತವಾಗಿದ್ದವು. ಅವತ್ತಿನ ವಾತಾವರಣವೇ ಚೆನ್ನಾಗಿತ್ತು. ನಾವೆಲ್ಲಾ ಒಟ್ಟಿಗೆ ಸೇರಿ ಹಲವು ಗ್ರಾಮೀಣ ಆಟಗಳನ್ನು ಆಡುತ್ತಿದ್ದೆವು. ಆಟ ಮುಗಿದ ನಂತರ ನಮಗೆಲ್ಲಾ ಊಟ ನೀಡಿ, ಪ್ರೀತಿಯಿಂದ ಬೆಲ್ಲ ಕೊಟ್ಟು ಶಾಲೆಗೆ ಕಳುಹಿಸುತ್ತಿದ್ದರು. ಚೆನ್ನಮ್ಮ ಅವರ ತಂಗಿಯರಾದ ಸುಶೀಲಾ ಮತ್ತು ಸಾವಿತ್ರಿ ಕೂಡ ನಮ್ಮ ಜೊತೆಯಲ್ಲೇ ಇರುತ್ತಿದ್ದರು ಎಂದು ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಚೆನ್ನಮ್ಮ ಅವರು ತಮ್ಮ ಚಿಕ್ಕಮ್ಮನ ಮಗಳಾಗಬೇಕು ಎಂದು ದ್ಯಾವಮ್ಮ ಈ ವೇಳೆ ತಿಳಿಸಿದ್ದಾರೆ.
ಚೆನ್ನಮ್ಮ ಮತ್ತು ತಾವು ಒಟ್ಟಿಗೆ ಎಂಟು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದ್ದಾಗಿ ದ್ಯಾವಮ್ಮ ಹೇಳಿದ್ದಾರೆ. ಮುತ್ತಿಗೆಹಿರಿಹಳ್ಳಿ ನಾಲ್ಕು ವರ್ಷ ಹಾಗೂ ಮತ್ತೊಂದು ಊರಿನಲ್ಲಿ ನಾಲ್ಕು ವರ್ಷ ಸೇರಿದಂತೆ ಒಟ್ಟಿಗೆ ಓದಿದ್ದನ್ನು ಸ್ಮರಿಸಿದ್ದಾರೆ. ಚೆನ್ನಮ್ಮ ಅವರು ಶಿಕ್ಷಣ ಮುಗಿಸಿ ಮನೆಯಲ್ಲಿದ್ದ ದಿನಗಳನ್ನೂ ಅವರು ನೆನಪಿಸಿಕೊಂಡಿದ್ದಾರೆ.
ಎಚ್.ಡಿ. ದೇವೇಗೌಡ ಹಾಗೂ ಚೆನ್ನಮ್ಮ ಅವರ ಮದುವೆಯ ದಿನಗಳನ್ನು ನೆನಪಿಸಿಕೊಂಡ ಅವರು, ನಾನು ಅವರ ಮದುವೆಯಲ್ಲಿ ಭಾಗಿಯಾಗಿದ್ದೆ. ಅವತ್ತಿನ ದಿನಗಳಲ್ಲಿ ವಾಹನಗಳ ಸೌಲಭ್ಯ ಇರಲಿಲ್ಲ. ಎಲ್ಲರೂ ಹರದನಹಳ್ಳಿ ಹಾದಿಯಲ್ಲಿ ಕಾಲ ನಡಿಗೆಯಲ್ಲೇ ಮದುವೆಗೆ ಬಂದಿದ್ದರು. ನಾವೆಲ್ಲಾ ಕುಕ್ಕೆಯಲ್ಲಿ (ಬುಟ್ಟಿ) ಸಾಮಗ್ರಿಗಳನ್ನು ಹೊತ್ತುಕೊಂಡು ಮದುವೆಗೆ ಹೋಗಿದ್ದೆವು ಎಂದು ಅಂದಿನ ಮದುವೆಯ ಸರಳತೆಯನ್ನು ನೆನಸಿಕೊಂಡಿದ್ದಾರೆ.
ಚೆನ್ನಮ್ಮ ಅವರಿಗೆ ಹಳ್ಳಿಯ ಜನರ ಮೇಲಿದ್ದ ವಿಶ್ವಾಸ ಅಪಾರವಾಗಿತ್ತು. ಊರಿಗೆ ಬಂದಾಗಲೆಲ್ಲಾ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಊರಿನ ದೇವಸ್ಥಾನ ಮತ್ತು ಶಾಲೆಗೆ ಬರುವಾಗ ಅವರೇ ಮುಂಚೂಣಿಯಲ್ಲಿ ನಿಂತು ಬಾಗಿಲು ತೆಗೆದು ಪೂಜೆ ಮಾಡುವ ವಾಡಿಕೆ ಇತ್ತು. ಇಂದಿಗೂ ಅವರು ಆ ಪದ್ಧತಿಯನ್ನು ಮುಂದುವರಿಸಿದ್ದಾರೆ. ಈ ವರ್ಷವೂ ಅವರು ಒಬ್ಬರೇ ಊರಿನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಹೋಗಿದ್ದರು. ಜಾತ್ರೆ ಸೇರಿದಂತೆ ಊರಿನ ಯಾವುದೇ ಕಾರ್ಯಕ್ರಮವಿದ್ದರೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಗುಣ ಅವರದಾಗಿತ್ತು ಎಂದು ದ್ಯಾವಮ್ಮ ಹೇಳಿದ್ದಾರೆ.
ದೇವೇಗೌಡರು ಮತ್ತು ಚೆನ್ನಮ್ಮ ಅವರು ಮಾಡಿದ ಸಹಾಯದಿಂದಲೇ ಹಾಸನ ಜಿಲ್ಲೆ ಇಂದು ಇಷ್ಟೊಂದು ಮುಂದುವರಿಯಲು ಸಾಧ್ಯವಾಗಿದೆ ಎಂದು ದ್ಯಾವಮ್ಮ ಸ್ಮರಿಸಿದ್ದಾರೆ. ಚೆನ್ನಮ್ಮ ಅವರನ್ನು ತಾವು ಪ್ರೀತಿಯಿಂದ 'ಅಕ್ಕ', 'ಚೆನ್ನಕ್ಕ' ಅಥವಾ 'ಪಾಪಕ್ಕ' ಎಂದು ಕರೆಯುತ್ತಿದ್ದುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಕಾರಿನಲ್ಲಿ ಹೋಗಿದ್ದಾಗ, ಚೆನ್ನಮ್ಮ ಅವರು ಪ್ರೀತಿಯಿಂದ ಬರಮಾಡಿಕೊಂಡು, "ಇಲ್ಲೇ ಇರಿ, ಹೋಗಬೇಡಿ" ಎಂದು ಒತ್ತಾಯ ಮಾಡಿದ್ದರು. ಆದರೆ ಊರಿನಲ್ಲಿ ಪೂಜೆಯಿದ್ದ ಕಾರಣ ತಮಗೆ ಇರಲು ಸಾಧ್ಯವಾಗಲಿಲ್ಲ ಎಂಬ ಕೊನೆಯ ಒಡನಾಟದ ಮಾತನ್ನು ದ್ಯಾವಮ್ಮ ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ