ಬಂಗಾರದಂತ ಭೂಮಿ ನೀಡಲು ರೈತರಿಂದ ವ್ಯಾಪಕ ವಿರೋಧ
ಮೊದಲ ಹಂತದಲ್ಲಿ ಸ್ವಾಧೀನ ಪಡಿಸಿಕೊಂಡ ಜಾಗವೇ ಖಾಲಿ ಬಿದ್ದಿದೆ
1100 ಎಕರೆ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಮುಂದಾದ ಸರ್ಕಾರ
ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಮಾ.23): ಅದು ಹೇಳಿ ಕೇಳಿ ಮೊದಲೇ ಹಿಂದುಳಿದ ಜಿಲ್ಲೆ. ಆ ಜಿಲ್ಲೆಯಲ್ಲಿ ಈಗಾಗಲೇ 1400 ಎಕರೆ ಭೂಮಿ ಸ್ವಾಧೀನ (Land Acquisition) ಪಡಿಸಿಕೊಂಡ ಸರ್ಕಾರ ಕೈಗಾರಿಕಾ ಹಬ್ (Industrial Hub) ನಿರ್ಮಾಣ ಮಾಡಿದೆ. ಆದರೆ ಇಲ್ಲಿಗೆ ಬಂದಿರುವುದು ಕೇವಲ ಬೆರಳೆಣಿಕೆಯಷ್ಟು ಕೈಗಾರಿಕೆಗಳು ಮಾತ್ರ. ಪರಿಸ್ಥಿತಿ ಹೀಗಿದ್ರೂ ಸರ್ಕಾರ ಪುನಃ 1100 ಎಕರೆ ರೈತರ ಫಲವತ್ತಾದ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಈ ಮೂಲಕ ರೈತರ ಒಕ್ಕಲೆಬ್ಬಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿರುವುದಕ್ಕೆ ರೈತರಿಂದ (Farmers) ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಚಾಮರಾಜನಗರದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ 1100 ಎಕರೆ ಸ್ವಾಧೀನಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಬದನಗುಪ್ಪೆ- ಕೆಲ್ಲಂಬಹಳ್ಳಿ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ( Badanaguppe - Kellamballi Industrial Area) 500ಕ್ಕೂ ಹೆಚ್ಚು ಎಕರೆ ಖಾಲಿ ಇರುವಾಗಲೇ ಆ ಪ್ರದೇಶ ವಿಸ್ತರಣೆಗೆ 1100 ಎಕರೆ ಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಪ್ರದೇಶ ಅಭಿವೃದ್ಧಿಗೆ 2015ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆಗ ಅಭಿವೃದ್ಧಿಗೊಂಡಿದ್ದ ಪ್ರದೇಶಕ್ಕೆ ಈಗಷ್ಟೇ ನೀರು ತಲುಪಿದೆ. ಇಷ್ಟು ಹೊರತುಪಡಿಸಿದರೆ ಬೇರೆ ಯಾವ ಸೌಕರ್ಯಗಳು ಬಂದಿಲ್ಲ. ನೀರಿಲ್ಲದ ಕಾರಣಕ್ಕೆ ಯಾವ ಕೈಗಾರಿಕೆಗಳು ಇಲ್ಲಿಗೆ ಬಂದಿಲ್ಲ. ಸದ್ಯ 400 ಎಕರೆಯಲ್ಲಿ ಕೈಗಾರಿಕೆಗಳು ತಲೆ ಎತ್ತಿವೆ. ಮೊದಲು ವಶಪಡಿಸಿಕೊಂಡಿರುವ ಜಾಗವೇ ಖಾಲಿ ಬಿದ್ದಿರುವಾಗ ಮತ್ತೆ 1100 ಎಕರೆ ಸ್ವಾಧೀನಕ್ಕೆ ಸರ್ಕಾರ ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನುತ್ತಾರೆ ಜಮೀನು ಮಾಲೀಕರಾದ ಮಹೇಂದ್ರರವರು.
ಚಾಮರಾನಗರ: ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ, ತಮಿಳುನಾಡು ಸರ್ಕಾರ ಕಾರಣ ಎಂದ ರೈತರು
ಇನ್ನು ಬಂಗಾರದಂತಹ ಭೂಮಿ ನೀಡಲು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬರಡಾಗಿದ್ದ ಭೂಮಿಯನ್ನು ಹದ ಮಾಡಿ ಉಳುಮೆ ಮಾಡಿ ಫಲವತ್ತಾದ ಜಮೀನಾಗಿ ಪರಿವರ್ತಿಸಿದ್ದೇವೆ. ತೆಂಗು, ಅಡಕೆಯಂತಹ ಬೆಳೆ ಮೂಲಕ ಬದುಕಿಗೆ ದಾರಿ ಮಾಡಿಕೊಂಡಿದ್ದೇವೆ. ಈಗ ಸರ್ಕಾರ ಪರಿಹಾರ ಕೊಡುವುದಾಗಿ ಹೇಳಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದ್ದು ಅಕ್ಷಮ್ಯ ಎಂದು ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ.
SSLC ವಿದ್ಯಾರ್ಥಿಗಳಿಗೆ ರಾತ್ರಿ ಕ್ಲಾಸ್, ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರಿಂದ ಹಗಲಿರುಳು ಶ್ರಮ
ಸರ್ಕಾರ ಮೊದಲನೇ ಹಂತದಲ್ಲೇ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ಕೈಗಾರಿಕೆ ಪ್ರದೇಶವಾಗಿ ಅಭಿವೃದ್ಧಿ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರ ಮತ್ತೇ ರೈತರ ಹೊಟ್ಟೆ ಮೇಲೆ ಒಡೆಯುವ ಕೆಲಸಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕಾಡ್ತಿದೆ.