ಹಸಿರು ಕ್ರಾಂತಿಯ ಸಂದರ್ಭದಲ್ಲಿ ಹೆಚ್ಚು ರಸಾಯನಿಕ ಬಳಸಲಾಯಿತು. ಇದೀಗ ಸಾವಯವ ಕೃಷಿಯ ಬಗ್ಗೆ ದೇಶ ಚಿಂತನೆ ನಡೆಸುತ್ತಿದ್ದು ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದ ಸಿದ್ದರಾಮಯ್ಯ
ಬೆಂಗಳೂರು(ಜ.06): ಇಂದಿರಾ ಕ್ಯಾಂಟೀನ್, ಅಂಗನವಾಡಿ ಮತ್ತು ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನು ಬಳಕೆ ಮಾಡಲಾಗುವುದು. ಈ ಬಗ್ಗೆ ಶೀಘ್ರವೇ ಅಧಿಕಾರಿಗಳ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಅರಮನೆ ಮೈದಾನದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ‘ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ’ ಉದ್ಘಾಟಿಸಿ ಮಾತನಾಡಿದ ಅವರು, ಸಿರಿಧಾನ್ಯವು ಉತ್ತಮ ಪೌಷ್ಟಿಕ ಆಹಾರವಾಗಿದೆ. ಸಾರಜನಕ, ಲವಣ, ವಿಟಮಿನ್ ಮತ್ತು ನಾರಿನ ಅಂಶ ಹೆಚ್ಚಾಗಿದೆ. ಇಂದಿನ ಹಲವು ಕಾಯಿಲೆಗಳಿಗೆ ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥ ಸೇವನೆ ಕೂಡ ಒಂದು ಪ್ರಮುಖ ಕಾರಣ ಎಂದು ಅಧ್ಯಯನಗಳು ಹೇಳುತ್ತಿವೆ. ಇದಕ್ಕೆ ಸಾವಯವ ಸಿರಿಧಾನ್ಯ ಸೇವನೆ ಉತ್ತಮ ಪರಿಹಾರವಾಗುತ್ತಿದೆ. ಸಾವಯವ ಮತ್ತು ಸಿರಿಧಾನ್ಯ ಬೆಳೆ ಬೆಳೆಯಲು ನಮ್ಮ ಸರ್ಕಾರ ನಿರಂತರವಾಗಿ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇವಲ 10 ರೂ.ಗೆ ಊಟ ಲಭ್ಯ: ಸರ್ಕಾರದಿಂದ ಕ್ಯಾಂಟೀನ್ ಆರಂಭ!
ಪ್ರತ್ಯೇಕ ಕೇಂದ್ರ ಸ್ಥಾಪನೆ:
ಗುಣಮಟ್ಟದ ಸಿರಿಧಾನ್ಯ ಬೀಜ ಉತ್ಪಾದನೆ, ಹೊಸ ತಳಿ ಅಭಿವೃದ್ಧಿ ಹಾಗೂ ಸಿರಿಧಾನ್ಯ ರಫ್ತಿಗೆ ಅನುಕೂಲ ಆಗುವಂತೆ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹದಾಯಕವಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗುವುದು. ಫಲವತ್ತತೆ ಮತ್ತು ಮಳೆ ಕಡಿಮೆ ಇರುವ ಪ್ರದೇಶಗಳಲ್ಲೂ ಸಿರಿಧಾನ್ಯಗಳನ್ನು ಬೆಳೆಯಬಹುದಾಗಿದೆ. ಹಸಿರು ಕ್ರಾಂತಿಯ ಸಂದರ್ಭದಲ್ಲಿ ಹೆಚ್ಚು ರಸಾಯನಿಕ ಬಳಸಲಾಯಿತು. ಇದೀಗ ಸಾವಯವ ಕೃಷಿಯ ಬಗ್ಗೆ ದೇಶ ಚಿಂತನೆ ನಡೆಸುತ್ತಿದ್ದು ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದರು.
ಸಿರಿಧಾನ್ಯಗಳ ಮಹತ್ವ ಅರಿತು 2004ರಲ್ಲಿ ಸಾವಯವ ಕೃಷಿ ನೀತಿ, 2014ರಲ್ಲಿ ಪರಿಷ್ಕೃತ ಸಾವಯವ ಕೃಷಿ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಆ ಮೂಲಕ ಸಾವಯವ ಮತ್ತು ಸಿರಿಧಾನ್ಯ ಬೆಳೆಯಲು ಸರ್ಕಾರ ನಿರಂತರವಾಗಿ ಉತ್ತೇಜನ ನೀಡುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದಾಗಿ ಬರಗಾಲದ ಬಿಸಿ ರಾಜ್ಯದಲ್ಲಿ ತೀವ್ರವಾಗಿ ತಟ್ಟಿಲ್ಲ. ಮೂರ್ನಾಲ್ಕು ವರ್ಷಕ್ಕೊಮ್ಮೆ ಬರಗಾಲ ಬರುತ್ತಿರುತ್ತದೆ. ಕೃಷಿ ಇಲಾಖೆ ಮತ್ತು ಕೃಷಿ ವಿವಿಗಳು ಸಂಶೋಧನೆಗೆ ಒತ್ತು ನೀಡಬೇಕು. ಹವಾಮಾನಕ್ಕೆ ಅನುಗುಣವಾದ ತಳಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರು.
ಸಿರಿಧಾನ್ಯಗಳನ್ನು ಬುಟ್ಟಿಗೆ ಹಾಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ’ವನ್ನು ಉದ್ಘಾಟಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತಿತರರು ಹಾಜರಿದ್ದರು.
ಪ್ರತ್ಯೇಕ ಕೇಂದ್ರ ಸ್ಥಾಪಿಸಿ:
ಇದಕ್ಕೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಭಾರತದ ಯೋಗ, ಆಯುರ್ವೇದ, ಸಿರಿಧಾನ್ಯದ ಪ್ರಯೋಜನವನ್ನು ವಿಶ್ವವೂ ಪಡೆಯಲಿ ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇವುಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿರಿಧಾನ್ಯಕ್ಕೆ ಬೇಡಿಕೆ ಹೆಚ್ಚಿದ್ದರೂ ಸೂಕ್ತ ಪ್ರಮಾಣದಲ್ಲಿ ತಲುಪಿಸುವ ಕೆಲಸ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿರಿಧಾನ್ಯ, ಸಿರಿಧಾನ್ಯ ಬಿತ್ತನೆ ಬೀಜ, ಸಂಸ್ಕರಿಸಿದ ಸಿರಿಧಾನ್ಯ ಆಹಾರ ಧಾನ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇದೆ. ಆದರೆ ಹೆಚ್ಚಾಗಿ ರಫ್ತು ಮಾಡುವ ಕಾರ್ಯ ಆಗುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಇದಕ್ಕಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಬೇಕು. ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಆಗ ಶಾಸಕ ವಿನಯ ಕುಲಕರ್ಣಿ ಅವರು ಶೋಭಾ ಕರಂದ್ಲಾಜೆ ಅವರ ಬಳಿ ತೆರಳಿ ಏನೋ ಮಾತನಾಡಲು ಮುಂದಾದಾಗ, ‘ಇಲ್ಲಿ ರಾಜಕೀಯ ಮಾಡಲು ಬರಬೇಡಿ. ಕುಳಿತುಕೊಳ್ಳಿ’ ಎಂದು ಖಾರವಾಗಿ ಹೇಳಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಸಿರಿಧಾನ್ಯ ಬೆಳೆಗಳು ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿದ್ದು ಕಡಿಮೆ ನೀರನ್ನು ಬಯಸುತ್ತವೆ. ರೈತರು ಸಿರಿಧಾನ್ಯ ಬೆಳೆಯಲು ಆದ್ಯತೆ ನೀಡಬೇಕು. ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಲಿದೆ. ಈ ಮೇಳದಲ್ಲಿ 400 ಕ್ಕೂ ಅಧಿಕ ಮಳಿಗೆಗಳಿದ್ದು ರಾಜ್ಯಕ್ಕೆ 100 ಮಳಿಗೆ ಮೀಸಲಿಡಲಾಗಿದೆ. ಮೂರು ದಿನದ ಮೇಳದಲ್ಲಿ ಎರಡ್ಮೂರು ಲಕ್ಷ ಜನರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಸಚಿವರಾದ ಕೆ.ವೆಂಕಟೇಶ್, ದಿನೇಶ್ ಗುಂಡೂರಾವ್, ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯ ಪ್ರತಾಪ್ ಸಾಯಿ, ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತ ವೈ.ಎಸ್.ಪಾಟೀಲ್ ಮತ್ತಿತರರು ಹಾಜರಿದ್ದರು.
ಇಂದಿರಾ ಕ್ಯಾಂಟೀನ್ ಹೊಸ ಮೆನು ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ: ರಾಗಿಮುದ್ದೆ, ಮಂಗಳೂರು ಬನ್ಸ್ ಸೇರ್ಪಡೆ!
ಗಣ್ಯರ ವಿರುದ್ಧ ರೈತರ ಆಕ್ರೋಶ
ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ಹಾಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರೆಲ್ಲಾ ಕುಳಿತುಕೊಂಡರು. ಬಳಿಕ ರೈತ ಗೀತೆ ಹಾಡುತ್ತಿದ್ದರೂ ವೇದಿಕೆ ಮೇಲಿದ್ದ ಯಾರೊಬ್ಬರೂ ಎದ್ದು ನಿಲ್ಲಲಿಲ್ಲ.
ಇದರಿಂದ ವೇದಿಕೆ ಕೆಳ ಭಾಗದಲ್ಲಿ ನಿಂತಿದ್ದ ಹಲವು ರೈತರು ‘ರೈತ ಗೀತೆಗೆ ಅಪಮಾನ ಮಾಡಲಾಗುತ್ತಿದೆ. ರೈತ ಗೀತೆ ಹಾಡುವಾಗ ಸಿದ್ದರಾಮಯ್ಯ ಅವರಿಗೆ ಎದ್ದು ನಿಲ್ಲಲು ಏನು ಸಮಸ್ಯೆ’ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿ ಕೆಲಕಾಲ ಗದ್ದಲ ಉಂಟು ಮಾಡಿದರು.